ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಡತನ ಎಂದರೇನು? ಬಡವರು ಎಂದರೆ ಯಾರು?ತಿನ್ನಲು ಊಟವಿಲ್ಲದೆ ಹಸಿವಿನಿಂದ ನರಳುತ್ತಿರುವವರು ಬಡವರೇ, ಊಟವಿದ್ದೂ ಮೈತುಂಬ ಬಟ್ಟೆ ಇಲ್ಲದೆ ಹರಿದ ಬಟ್ಟೆ ಹಾಕಿರುವ ಜನರು ಬಡವರೇ. ಊಟ, ಬಟ್ಟೆ ಇದ್ದು ವಾಸಿಸಲು ಸರಿಯಾದ ಜಾಗವಿಲ್ಲದ / ವಸತಿ ಇಲ್ಲದ ಜನರು ಬಡವರೇ,
ಊಟ, ಬಟ್ಟೆ, ವಸತಿ ಇದ್ದು ಶಿಕ್ಷಣ ಪಡೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಇರುವವರು ಬಡವರೇ, ಊಟ, ಬಟ್ಟೆ, ವಸತಿ, ಶಿಕ್ಷಣ ಇದ್ದು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗದ ಜನರನ್ನು ಬಡವರು ಎನ್ನಬೇಕೇ ಅಥವಾ
ಊಟ, ಬಟ್ಟೆ, ವಸತಿ, ಶಿಕ್ಷಣ, ಆರೋಗ್ಯ ಇವುಗಳನ್ನು ಪಡೆದೂ ತನ್ನಿಷ್ಟದಂತೆ ಬದುಕಲು ಸಾಧ್ಯವಾಗದೇ ಇರುವವರು ಬಡವರೇ ಅಥವಾ ಇದೆಲ್ಲವೂ ಇದ್ದು ಅಂತ್ಯೋದಯ ಅಥವಾ ಬಿಪಿಎಲ್ ಕಾರ್ಡ್ ಪಡೆದ ಮಾತ್ರಕ್ಕೆ ಅವರು ಬಡವರೇ, ನಿರ್ಧರಿಸಬೇಕಾಗಿರೋದು ಸರ್ಕಾರ, ಸಮಾಜ ಮತ್ತು ನಮ್ಮ ಆತ್ಮಸಾಕ್ಷಿ…….
ಹಣ ಇದ್ದು ಗುಣ ಇಲ್ಲದವರು ಬಡವರೇ ಅಥವಾ ಗುಣ ಇದ್ದು ಹಣ ಇಲ್ಲದವರು ಬಡವರೇ……ಇತ್ತೀಚೆಗೆ ರೇಷನ್ ಕಾರ್ಡ್ ವಿಷಯದಲ್ಲಿ ಬಿಪಿಎಲ್, ಎಪಿಎಲ್ ಪರಿಷ್ಕರಣೆ, ರದ್ದುಪಡಿಸುವಿಕೆ ಮುಂತಾದ ವಾದ ವಿವಾದಗಳು ನಡೆಯುತ್ತಿರುವಾಗ ನಿಜಕ್ಕೂ ಚರ್ಚೆಗೆ ಒಳಗಾಗಬೇಕಾಗಿರುವ ವಿಷಯವೆಂದರೆ ಅದು ಬಡತನ ಮತ್ತು ಬಡವರು ಯಾರು ಮತ್ತು ಯಾವುದು ಎಂಬುದಾಗಿದೆ.
ಏಕೆಂದರೆ ಸ್ವಾತಂತ್ರ್ಯ ಬಂದು 77 ವರ್ಷಗಳ ನಂತರ….ಭಾರತದ ಈಗಿನ ಬಜೆಟ್ ಗಾತ್ರ ಸರಿಸುಮಾರು ಹತ್ತಿರ ಹತ್ತಿರ 50 ಲಕ್ಷ ಕೋಟಿ, ಭಾರತದ ಜನಸಂಖ್ಯೆ ಸುಮಾರು 145 ಕೋಟಿ, ಕರ್ನಾಟಕದ ಬಜೆಟ್ ಸುಮಾರು 4 ಲಕ್ಷ ಕೋಟಿ, ಕರ್ನಾಟಕದ ಜನಸಂಖ್ಯೆ ಸುಮಾರು 7 ಲಕ್ಷ ಕೋಟಿ,
ದೇಶದ ಸೆನ್ಸೆಕ್ಸ್ ಪಾಯಿಂಟ್ 77000 ಸಾವಿರದ ಆಸು ಪಾಸಿನಲ್ಲಿ, ನಿಫ್ಟಿ 23000 ಅಸುಪಾಸಿನಲ್ಲಿ, 10 ಗ್ರಾಂ ಚಿನ್ನ 80000 ಆಸುಪಾಸಿನಲ್ಲಿ, ಬೆಳ್ಳಿ ಕೆಜಿಗೆ 90000 ಆಸುಪಾಸಿನಲ್ಲಿ, ಬಹುತೇಕ ಜಮೀನುಗಳು ಕೋಟಿಗಟ್ಟಲೆ ಬೆಲೆಯಲ್ಲಿ ಹೀಗಿರುವ ಪರಿಸ್ಥಿತಿಯಲ್ಲಿ ಬಡತನವನ್ನು ನಿರ್ಧರಿಸಬೇಕಿದೆ…..
ಇಂತಹ ಸನ್ನಿವೇಶದಲ್ಲಿ ಬಡತನ ಮತ್ತು ಬಡವರು ಯಾವುದು ಮತ್ತು ಯಾರು ಎಂಬ ವಿಷಯದಲ್ಲಿ ನಿರ್ಧಿಷ್ಟ, ಸರಿಯಾದ, ವಾಸ್ತವಿಕ, ಮಾನದಂಡಗಳನ್ನು ಗುರುತಿಸಬೇಕಾಗಿದೆ. ಏಕೆಂದರೆ ಈ ಮಾನದಂಡಗಳು, ಗುಣಲಕ್ಷಣಗಳು ಸ್ಪಷ್ಟವಾಗದೆ, ಸಮಸ್ಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಬಿಪಿಎಲ್, ಎಪಿಎಲ್ ಅಥವಾ ಕಡುಬಡವರ ಅಂತ್ಯೋದಯ ಕಾರ್ಡ್ ಹಂಚುವ ಪ್ರಕ್ರಿಯೆ ಸಂಪೂರ್ಣ ವಿಫಲವಾಗುತ್ತದೆ ಅಥವಾ ದುರುಪಯೋಗವಾಗುತ್ತದೆ.
2024 ರ ನವಂಬರ್ ತಿಂಗಳ ಈ ಕ್ಷಣದಲ್ಲಿ ಕರ್ನಾಟಕದ ಕೌಟುಂಬಿಕ ವ್ಯವಸ್ಥೆ, ಜನರ ಜೀವನ ಶೈಲಿ, ವಸ್ತು ಸಂಸ್ಕೃತಿ, ಸಾಂಸ್ಕೃತಿಕ ಬದುಕು, ಆದಾಯದ ಮಾರ್ಗಗಳು, ನೆಮ್ಮದಿಯ ಗುಣಮಟ್ಟ, ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಗಳು, ಪರಿಸರದ ಸಹಜತೆ ಮುಂತಾದ ಅನೇಕ ವಿಷಯಗಳ ಆಧಾರದ ಮೇಲೆ ಬಡತನ ಮತ್ತು ಬಡವರನ್ನು ನಿರ್ಧರಿಸಬೇಕಾಗುತ್ತದೆ.
ಸರಳವಾಗಿ, ಅನುಭವದ ಆಧಾರದ ಮೇಲೆ ಕರ್ನಾಟಕದ ಜನಜೀವನವನ್ನು ಹೀಗೆ ವಿಂಗಡಿಸಬಹುದು…..ಅತ್ಯಂತ ಶ್ರೀಮಂತರು ಅಥವಾ ಮಿಲಿಯನೇರ್ ಗಳು ಅಂದರೆ ಇವರ ಬಳಿ ಚರಾಸ್ತಿ, ಸ್ಥಿರಾಸ್ತಿ ಎಲ್ಲಾ ಸೇರಿ ತುಂಬಾ ದೊಡ್ಡ ಮೊತ್ತದ ಹಣವಿರುತ್ತದೆ. ಹಾಗೆಯೇ ಆ ಹಣ ಮತ್ತೆ ಮತ್ತೆ ಹೆಚ್ಚಾಗುತ್ತಲೇ ಇರುತ್ತದೆ. ಕೆಲವರು ಈ ಕಾಲದಲ್ಲೂ ಹಣವನ್ನು ಹಾಸಿಗೆಯ ಕೆಳಗೆ ಅಥವಾ ದಿಂಬಾಗಿ ಪರಿವರ್ತಿಸಿ ಮಲಗುವುದು ಉಂಟು. ಇವರು ಆಗರ್ಭ ಶ್ರೀಮಂತರು.
ಇನ್ನು ಸಾಮಾನ್ಯ ಶ್ರೀಮಂತರು. ಇವರು ಸ್ವಂತ ಮನೆಯ ಜೊತೆಗೆ ಬಾಡಿಗೆಗಾಗಿ ನಿರ್ಮಿಸಿರುವ ಕೆಲವು ಮನೆಗಳು, ವಾಣಿಜ್ಯ ಸಂಕೀರ್ಣಗಳು, ಒಳ್ಳೆಯ ವ್ಯವಹಾರ, ಸಾಕಷ್ಟು ಭೂಮಿ, ದುಬಾರಿ ಕಾರುಗಳು ಹೀಗೆ ಅನೇಕ ಸೌಕರ್ಯಗಳನ್ನು ಹೊಂದಿ ಲಕ್ಷುರಿ ಜೋನ್ ನಲ್ಲಿ ಇರುತ್ತಾರೆ.
ತದನಂತರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳು, ಖಾಸಗಿ ಕಂಪನಿಯ ದೊಡ್ಡ ಹುದ್ದೆಯ ವ್ಯಕ್ತಿಗಳು, ಸಾಂಪ್ರದಾಯಿಕ ಹೋಟೆಲ್ ಮಾಲೀಕರು, ಕಂಟ್ರಾಕ್ಟರ್, ಆಡಿಟರ್, ಆಕ್ಟರ್, ಪ್ರೊಡ್ಯೂಸರ್, ಬ್ರೋಕರ್, ರಿಯಲ್ ಎಸ್ಟೇಟ್ ಉದ್ಯಮಿ, ಡಾಕ್ಟರ್, ಇಂಜಿನಿಯರ್, ಲಾಯರ್ ಹೀಗೆ ಒಳ್ಳೆಯ ವ್ಯಾಪಾರ, ವ್ಯವಹಾರ, ವೃತ್ತಿ ಮಾಡಿಕೊಂಡು ಸ್ವಂತ ಮನೆ, ಕಾರು ಇಟ್ಟುಕೊಂಡು ಬದುಕುತ್ತಿರುವ ಮತ್ತೊಂದು ವರ್ಗವಿದೆ.
ಇದಲ್ಲದೆ ಸಣ್ಣಪುಟ್ಟ ಕೆಲಸಗಳು, ಚಿಲ್ಲರೆ ಅಂಗಡಿ, ತರಕಾರಿ ಹಣ್ಣು ಮಾರಾಟ, ಮೂರು ಮತ್ತು ನಾಲ್ಕನೆಯ ದರ್ಜೆಯ ಉದ್ಯೋಗ, ಖಾಸಗಿಯಾಗಿ ಸೆಕ್ಯೂರಿಟಿ ಅಥವಾ ಅಕೌಂಟೆಂಟ್ ಉದ್ಯೋಗ, ಝೋಮ್ಯಾಟೋ, ಅಮೆಜಾನ್, ಫ್ಲಿಪ್ಕಾರ್ಟ್ ಗಳಲ್ಲಿ ಒಂದಷ್ಟು ಸಾಮಾನ್ಯ ಕೆಲಸ ಹೀಗೆ ಮಾಡಿಕೊಂಡು, ಬಾಡಿಗೆ ಮನೆಯಲ್ಲಿ ಒಂದು ಟು ವೀಲರ್ ಅಥವಾ ಪುಟ್ಟ ಸೆಕೆಂಡ್ ಹ್ಯಾಂಡ್ ಕಾರು ಇಟ್ಟುಕೊಂಡು ಆಗಾಗ ಏರಿಳಿತಗಳನ್ನು ಕಾಣುತ್ತಾ, ಒಮ್ಮೊಮ್ಮೆ ಮದುವೆ, ಆಸ್ಪತ್ರೆ ಮತ್ತು ಶಾಲಾ ಖರ್ಚಿಗೆ ಸಾಲ ಮಾಡಿಕೊಂಡು, ಇನ್ನೊಮ್ಮೆ ಇರುವ ಒಂದಷ್ಟು ಸಣ್ಣ ಆಸ್ತಿಯನ್ನು ಮಾರಾಟ ಮಾಡಿಕೊಂಡು ಹೀಗೆ ಬದುಕುತ್ತಿರುವ ಒಂದಷ್ಟು ಮಧ್ಯಮ ವರ್ಗದ ಜನರು ಇದ್ದಾರೆ.
ಈ ಮಧ್ಯೆ ಕೃಷಿಯನ್ನು, ಪಶುಸಂಗೋಪನೆಯನ್ನು, ಮೀನುಗಾರಿಕೆಯನ್ನು ಅಥವಾ ಅದಕ್ಕೆ ಸಂಬಂಧಿಸಿದ ಕೆಲವು ಉದ್ಯೋಗಗಳನ್ನು ಮಾಡಿಕೊಂಡು ಕೆಲವರು ಶ್ರೀಮಂತರಾಗುತ್ತಾ ಕೆಲವರು ಬಡವರಾಗುತ್ತಾ ಹಾಗೂ ಹೀಗೂ ತಮ್ಮ ಮಕ್ಕಳೊಂದಿಗೆ, ಅವರ ಉದ್ಯೋಗ ಸಂಬಳದಲ್ಲಿ ಬದುಕುತ್ತಾ ಇರುವ ಇನ್ನೊಂದು ವರ್ಗವು ಇದೆ.
ಇದರ ಜೊತೆಗೆ ಚಿಕ್ಕ ಚಿಕ್ಕ ಬಾಡಿಗೆ ಮನೆಗಳಲ್ಲಿ, ಚಿಕ್ಕ ಚಿಕ್ಕ ಅಂಗಡಿಗಳಲ್ಲಿ ಫುಟ್ಪಾತ್ ವ್ಯಾಪಾರ, ಸಣ್ಣ ಹೋಟೆಲ್ ಗಳು ಹೀಗೆ ಹೇಗೋ ಬಂದ ಹಣದಲ್ಲಿ ಹೆಚ್ಚಿನ ನೀರಿಕ್ಷೆಗಳಿಲ್ಲದೆ ಕಷ್ಟಪಟ್ಟುಕೊಂಡು ಬದುಕುತ್ತಿರುವ ಕೆಳಮಧ್ಯಮ ವರ್ಗದ ಜನರೂ ಇದ್ದಾರೆ.
ಇದನ್ನು ಹೊರತುಪಡಿಸಿ ಒಂದು ಬಾಡಿಗೆ ಮನೆಯೂ ಇಲ್ಲದೆ, ಎಲ್ಲೋ, ಯಾರದೋ ವಠಾರದಲ್ಲೋ, ಗುಡಿಸಲಿನಲ್ಲೋ, ಸ್ಲಂನಲ್ಲೋ, ಎಲ್ಲೋ ಒಂದು ಕಡೆ ವಾಸಿಸುತ್ತಾ, ಹೇಗೋ, ಯಾವುದೋ ಬಟ್ಟೆ ತೊಟ್ಟುಕೊಂಡು, ಸಿಕ್ಕ ಆಹಾರ ಸೇವಿಸುತ್ತಾ, ದಿನಗೂಲಿ ಮಾಡಿಕೊಂಡು ಬದುಕುತ್ತಿರುವ ಮತ್ತೊಂದು ಕಡುಬಡತನದ ವರ್ಗವು ಇದೆ. ಅನಿವಾರ್ಯವಾದಾಗ ಮಾತ್ರ ಶಾಲೆ ಆಸ್ಪತ್ರೆಗಳಿಗೆ ಹೋಗುವ ಪರಿಸ್ಥಿತಿ ಈ ಕುಟುಂಬಗಳಿಗಿದೆ.
ಇದಕ್ಕಿಂತ ಕೆಳಗಿಳಿದರೆ ಮನೆಯೂ ಇಲ್ಲ, ಹತ್ತಿರದ ಸಂಬಂಧಗಳೂ ಇಲ್ಲ, ಯಾವ ಸೌಕರ್ಯಗಳು ಇಲ್ಲ, ಹೇಗೋ ರಸ್ತೆ ಬದಿಯಲ್ಲಿ, ಫ್ಲೈ ಓವರ್ ಕೆಳಗಡೆ, ಬಸ್ ರೈಲು ನಿಲ್ದಾಣಗಳಲ್ಲಿ, ತೋಟದ ಕಾವಲು ಮನೆಗಳಲ್ಲಿ ಕೂಲಿಗಳಾಗಿಯೂ, ಬಿಕ್ಷುಕರಾಗಿಯೂ ಜೀವನ ಸಾಗಿಸುತ್ತಿರುವ ಕಟ್ಟಕಡೆಯ ವ್ಯಕ್ತಿಗಳು ಸಹ ಇದ್ದಾರೆ.
ಇನ್ನು ಆಳಕ್ಕಿಳಿದ್ದು ಯೋಚಿಸಿದರೆ ಮತ್ತಷ್ಟು ವರ್ಗಗಳು, ವಿಭಾಗಗಳು ಸಿಗಬಹುದು. ಈ ಎಲ್ಲವನ್ನೂ ಪರಿಶೀಲಿಸಿ ಈಗ ಬಡವರ ಯಾರು, ಬಡತನ ಎಂದರೆ ಏನು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಇದರ ಆಧಾರದ ಮೇಲೆ ಕಾರ್ಡುಗಳು, ಆ ಕಾಡುಗಳ ಬಣ್ಣಗಳು, ಅವರಿಗೆ ನೀಡಬೇಕಾದ ಸೌಕರ್ಯಗಳು, ಅವರ ಜೀವನಶೈಲಿಯ ಬದಲಾವಣೆಗಾಗಿ ಮಾಡಬೇಕಾದ ಕ್ರಮಗಳು, ಸರ್ಕಾರದ ಜವಾಬ್ದಾರಿ, ಸಮಾಜದ ಹೊಣೆ ಎಲ್ಲವನ್ನು ಒಂದಷ್ಟು ಸ್ಪಷ್ಟವಾಗಿ ಗುರುತಿಸಿದರೆ, ಬಿಪಿಎಲ್ ಎಪಿಎಲ್ ಎಂಬ ಸಮಸ್ಯೆ ಬಗೆಹರಿಯಬಹುದು. ಇಷ್ಟು ಆಳವಾಗಿ, ಸೂಕ್ಷ್ಮವಾಗಿ, ನಿರಂತರವಾಗಿ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದೆ, ಅವಶ್ಯಕತೆಗೆ ತಕ್ಕಂತೆ ರಾಜಕೀಯ ದಾಳಗಳನ್ನು ಉರುಳಿಸಿದರೆ, ಯೋಜನೆಗಳ ದುರುಪಯೋಗ ಮತ್ತು ವಿಫಲತೆಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ.
ಈಗಿನ ನಮ್ಮ ಸರ್ಕಾರ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಆತ್ಮವಂಚನೆ ಮಾಡಿಕೊಂಡು, ಕಾನೂನು ಮತ್ತು ನೀತಿ ನಿಯಮಗಳಿಗೆ ಮೋಸ ವಂಚನೆ ಮಾಡುವುದು, ಚಾಕ ಚಕ್ಯತೆಯಿಂದ ತಪ್ಪಿಸಿಕೊಳ್ಳುವುದು ದೊಡ್ಡ ವಿಷಯವೇ ಅಲ್ಲ. ಇಡೀ ಆಡಳಿತ ವ್ಯವಸ್ಥೆ ಭ್ರಷ್ಟಗೊಂಡಿರುವಾಗ ಮನಸ್ಸುಗಳು ಆರ್ಥಿಕ ಗುಲಾಮಿತನ ಮತ್ತು ಮಲಿನಗೊಂಡಿರುವಾಗ, ಯಾರು ಯಾರಿಗಾದರೂ ಮೋಸ ಮಾಡುವುದು ದೊಡ್ಡ ವಿಷಯವೇ ಅಲ್ಲ.
ದೊಡ್ಡ ದೊಡ್ಡ ಗೆಜಿಟೆಡ್ ಆಫೀಸರ್ಗಳು, ಶ್ರೀಮಂತರು, ವಿದ್ಯಾವಂತರು, ಜಮೀನ್ದಾರರು, ಉದ್ಯಮಿಗಳೇ ತಮ್ಮನ್ನು ಬಡವರೆಂತಲೂ, ನಿರ್ಗತಿಕರೆಂತಲೂ ಹೇಳಿಕೊಂಡು ದಾಖಲೆ ನೀಡಿ, ಬಡವರಂತೆ ಘೋಷಿಕೊಳ್ಳುವ ಸಾಕಷ್ಟು ಸಾಧ್ಯತೆಗಳಿವೆ. ಹಾಗೆಯೇ ತೀರಾ ಕಡುಬಡವರಿಗೆ ತಾವು ಬಡವರೆಂದು ನಿರೂಪಿಸಲು ಸಾಧ್ಯವಾಗದ, ಸರ್ಕಾರಿ ಆಡಳಿತವನ್ನು ತಲುಪಲು ಸಾಧ್ಯವಾಗದ ಪರಿಸ್ಥಿತಿ ಇದೆ.
ಇಂತಹ ಸಂದರ್ಭದಲ್ಲಿ ಬಡತನ ಮತ್ತು ಬಡವರನ್ನು ಗುರುತಿಸುವುದು ತುಂಬಾ ಕಷ್ಟ. ಜನರ ಗುಣಮಟ್ಟವೇ ಕುಸಿದಿರುವಾಗ ಹೇಗೆ ನ್ಯಾಯದ, ಕಾನೂನಿನ ಸಮತೋಲನ ಕಾಪಾಡುವುದು.
ನಮ್ಮ ನಮ್ಮ ಮನಗಳಲ್ಲಿ, ನಮ್ಮ ನಮ್ಮ ಮನೆಗಳಲ್ಲೇ ನಾವು ಪ್ರಾಮಾಣಿಕವಾಗಿ ಉಳಿಯುವುದು ತುಂಬಾ ಕಷ್ಟವಾಗಿದೆ. ಒಂದಲ್ಲ ಒಂದು ರೀತಿಯ ಅಡಚಣೆಗಳು ಬರುತ್ತಲೇ ಇರುತ್ತದೆ. ನಾವು ಪ್ರಾಮಾಣಿಕರಾದರು ನಮ್ಮ ಸುತ್ತ ಮುತ್ತಲಿನವರು ಅಪ್ರಾಮಾಣಿಕವಾಗಿ, ಆರ್ಥಿಕವಾಗಿ ಉತ್ತಮವಾಗಿರುವಾಗ ಆ ಒತ್ತಡ ನಮ್ಮ ಮೇಲೂ ಬೀಳುತ್ತದೆ. ನಮ್ಮ ಕುಟುಂಬದ ಮೇಲೂ ಬೀಳುತ್ತದೆ. ನಮ್ಮ ಸ್ನೇಹಿತರು, ರಕ್ತ ಸಂಬಂಧಿಗಳು ನಮ್ಮನ್ನು ಸಹ ಅಪ್ರಾಮಾಣಿಕರಾಗುವಂತೆ ಒತ್ತಡ ತರುತ್ತಾರೆ ಅಥವಾ ಸತ್ಯವನ್ನು ಹೇಳಿದರೆ ಕುಟುಂಬವೇ ನಮ್ಮನ್ನು ಬಹಿಷ್ಕರಿಸಬಹುದು.
ಈ ರೀತಿಯ ಕೆಟ್ಟ ಮೌಲ್ಯಗಳು ನಮ್ಮ ಸಮಾಜದಲ್ಲಿ ಸ್ಥಾಪಿತವಾಗುತ್ತಿರುವಾಗ, ನಡೆಯೊಂದು ನುಡಿ ಒಂದು ಆಗಿರುವಾಗ ರೇಷನ್ ಕಾರ್ಡ್ ಗಳು ನಿಜಕ್ಕೂ ಅರ್ಹರಿಗೆ ಸಿಗುತ್ತವೆ ಎಂಬ ನಂಬಿಕೆ ಏನು ಇಲ್ಲ. ಬಹುಶಃ ಪ್ರಬಲರಿಗೆ, ಅದನ್ನು ಪಡೆಯುವ ಸಾಮರ್ಥ್ಯ ಇರುವವರಿಗೆ, ಅವರು ಬಡವರೂ ಆಗಬಹುದು, ಶ್ರೀಮಂತರೂ ಆಗಬಹುದು. ಇದೆಲ್ಲವೂ ವ್ಯಕ್ತಿಗತ ಸಾಮರ್ಥ್ಯವನ್ನು, ಭ್ರಷ್ಟ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ವಾಸ್ತವವನ್ನಲ್ಲ.
ಆದ್ದರಿಂದ ಮೊದಲು ವ್ಯಕ್ತಿಗತವಾಗಿ ಮನುಷ್ಯರು ಒಂದಷ್ಟು ಒಳ್ಳೆಯ, ಪ್ರಾಮಾಣಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗದೆ, ಬಡತನ ಮತ್ತು ಬಡವರು ಎಂಬುದನ್ನು ಗುರುತಿಸುವುದೇ ಕಷ್ಟ. ಉಳ್ಳವರು ಇನ್ನೊಬ್ಬರನ್ನು ನೋಡಿ ನಾವು ಅವರಿಗಿಂತ ಬಡವರು ಎಂದುಕೊಳ್ಳುತ್ತಾರೆ. ಒಂದು ಲಕ್ಷ, ಎರಡು ಲಕ್ಷ ಆದಾಯ ಇರುವವರು ಇನ್ಯಾರೋ ಶ್ರೀಮಂತರನ್ನು ನೋಡಿ ನಾವು ಬಡವರು ಎನ್ನುತ್ತಾರೆ. ಊಟಕ್ಕೆ ಇಲ್ಲದಾ, ಔಷಧಿಗೆ ಇಲ್ಲದಾ ವ್ಯಕ್ತಿಗಳನ್ನು ನೋಡಿ ನಾವು ಶ್ರೀಮಂತರು ಎಂಬ ಮನೋಭಾವ ಬಹುತೇಕ ಜನರಿಗೆ ಇಲ್ಲ…..
ಒಟ್ಟಿನಲ್ಲಿ ಬಡವರ್ಯಾರೋ, ಶ್ರೀಮಂತರ್ಯಾರೋ ಅವರವರೇ ಬಲ್ಲರು…….
ಲೇಖನ-ವಿವೇಕಾನಂದ. ಎಚ್. ಕೆ. 9844013068……..