ಪೌರಾಯುಕ್ತರೇ ಬಾಯಿಗೆ ಏನು ಲಕ್ವಾ ಹೊಡಿದಿದೆಯಾ?

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರಕ್ಕೆ ಶಾಂತಿ ಸಾಗರ(ಸೂಳೆಕೆರೆ), ವಾಣಿ ವಿಲಾಸ ಸಾಗರದ ನೀರು ಬರುತ್ತಿದೆ. ಆದರೆ ಚಿತ್ರದುರ್ಗ ನಗರದಲ್ಲಿ ಕಳೆದ
20 ದಿನಗಳಿಂದ ಜನರಿಗೆ ಕುಡಿಯುವ ನೀರು ಬಿಟ್ಟಿಲ್ಲ. ಇದರಿಂದ ಕೆಂಡಮಂಡಲವಾದ ಸದಸ್ಯರು, ಪೌರಾಯುಕ್ತರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದು ಕೊಂಡ ಪ್ರಸಂಗ ಜರುಗಿತು. ಸದಸ್ಯರುಗಳ ಕೂಗಾಟಕ್ಕೆ ತಬ್ಬಿಬ್ಬಾಗಿದ್ದ ಪೌರಾಯುಕ್ತೆ ರೇಣುಕಾ ಅವರನ್ನ ಕುರಿತು ಕೆಲ ಸದಸ್ಯರುಗಳು, ಪೌರಾಯುಕ್ತರೇ ಮಾತನಾಡಿ ಬಾಯಿಗೆ ಏನು ಲಕ್ವಾ ಹೊಡಿದಿದೆಯಾ? ಅಧ್ಯಕ್ಷರ ಮಾತಿಗೆ ಕಿಮ್ಮತ್ತೇ ಕೊಡುವುದಿಲ್ಲ. ಈ ರೀತಿ ಮಾಡಿದರೆ ಜನರ ದಾಹ ಹೇಗೆ ತೀರುತ್ತದೆ, 20 ದಿನಗಳಿಂದ ನೀರು ಪೂರೈಕೆ ಮಾಡದಿರುವುದಕ್ಕೆ ಏನು ಕಾರಣ, ಯಾಕಿಷ್ಟು ಮೌನಿಯಾಗಿದ್ದೀರಿ ಎಂದು ಸದಸ್ಯರುಗಳ ಏಕವಚನದಲ್ಲೇ ಮನಬಂದಂತೆ ಟೀಕಿಸಿದರು.

ನೀವು ಮೌನವಾಗಿದ್ದರೆ ನಗರದ ಅಭಿವೃದ್ದಿ ಆಗುತ್ತಾ ಮಾತನಾಡಿ… ಇದು ಚಿತ್ರದುರ್ಗ ನಗರಸಭೆ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ಸದಸ್ಯರು ಪೌರಾಯುಕ್ತೆ ರೇಣುಕಾ ಅವರನ್ನು ತರಾಟೆಗೆ ತೆಗೆದುಕೊಂಡ ಪರಿ..

ನಗರಸಭೆ ಅಧ್ಯಕ್ಷೆ ಸುಮಿತ ರಾಘುವೇಂದ್ರ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಬೇಸಿಗೆ ಕಾಲ ಬಂದರು ಕುಡಿಯುವ ನೀರು ಸಿಗದಿರುವ ಬಗ್ಗೆ ಸಾಕಷ್ಟು ಸದಸ್ಯರ ಆಕ್ರೋಶಕ್ಕೆ ಪೌರಾಯುಕ್ತೆ ರೇಣುಕಾ ಗುರಿಯಾಗಬೇಕಾಯಿತು.

ವಾರದೊಳಗೆ ಯುಗಾದಿ ಹಾಗೂ ರಂಜಾನ್ ಹಬ್ಬ ಬರುತ್ತೆ. ಎಲ್ಲೆಡೆ ಬೇಸಿಗೆಯ ಬಿಸಿಲು ಧಗೆ ಏರುತ್ತಿದೆ. ಆದರೂ 20 ದಿನಗಳಿಂದ ಜನರಿಗೆ ನೀರು ಪೂರೈಕೆ ಮಾಡದಿರುವುದರಿಂದ ನಾಗರಿಕರು ಶಾಪ ಹಾಕುತ್ತಿದ್ದಾರೆ.

 ಮತ ಹಾಕಿರುವ ಜನರು ನಮ್ಮ ಮನೆಗಳಿಗೆ ಬಂದು ಮನಃ ಬಂದಂತೆ ಕೆಟ್ಟದಾಗಿ ಮಾತಾಡುತ್ತಾರೆ. ನೀವು ಎಸಿ ರೂಮಿನಲ್ಲಿ ನಿಮ್ಮದಿಯಾಗಿ ಮಲಗಿರುತ್ತಿರಾ. ಯಾರು ಇದಕ್ಕೆ ಉತ್ತರ ಕೊಡಬೇಕು ಎಂದು ಅಧ್ಯಕ್ಷೆ ಸುಮಿತಾ, ಉಪಾಧ್ಯಕ್ಷೆ ಶ್ರೀದೇವಿ ಸೇರಿದಂತೆ ಸದಸ್ಯರಾದ ಶ್ರೀನಿವಾಸ್, ದೀಪು, ಮೊಹಮ್ಮದ್ ಜೈಲುದ್ದಿನ್, ಶಶಿಧರ್, ಮೀನಾಕ್ಷಿ, ಮಹಮದ್ ಅಹ್ಮದ್ ಪಾಷ ಅವರುಗಳು ಪೌರಾಯುಕ್ತರ ಮೇಲೆ ಹರಿಹಾಯ್ದರು.
ಇದಕ್ಕೆ ಪೌರಾಯುಕ್ತರು ಉತ್ತರಿಸುತ್ತಾ
, ಟ್ರಾನ್ಸ್ ಫಾರ್ಮರ್ ಕೆಟ್ಟು ಹೋಗಿದೆ. ಇದನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗಿದೆ. ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ ಎಂದು ಸಮಜಾಯಿಷಿ ನೀಡಿದರು ಸದಸ್ಯರುಗಳು ಕೇಳುವ ಸ್ಥಿತಿಯಲ್ಲಿರಲಿಲ್ಲ.

ಕುಡಿಯಲು ನೀರು ಕೊಡಿ ಎಂದು ಜನರು ಮನೆ ಬಾಗಿಲಿಗೆ ಬಂದು ಗಲಾಟೆ ಮಾಡುತ್ತಾರೆ. ಏನು ಸಮಸ್ಯೆ ಎಂದು ಕೇಳಲು ಇಂಜಿನಿಯರ್ ಮುನಿಸ್ವಾಮಿ ಪೋನ್ ಮಾಡಿದರೆ ಪೋನ್ ರಿಸಿವ್ ಮಾಡುವುದಿಲ್ಲ. ಪೌರಾಯುಕ್ತರೆ ಮಾತನಾಡಿ ಬಾಯಿಗೆ ಏನು ಲಕ್ವಾ ಹೊಡಿದಿದೆಯಾ? ಎಂದು 25ನೇ ವಾರ್ಡಿನ ಸದಸ್ಯ ಮೊಹಮ್ಮದ್ ಜೈಲುದ್ದೀನ್ ಏರುಧ್ವನಿಯಲ್ಲಿ ಪೌರಾಯುಕ್ತೆ ರೇಣುಕಾ ಅವರನ್ನ ಪ್ರಶ್ನಿಸಿದರು.
ಇದಕ್ಕೆ ಪೌರಾಯುಕ್ತರು ಮೌನ ವಹಿಸಿದ್ದು ಸದಸ್ಯರು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ ಇಂಜಿನಿಯರ್ ಮುನಿಸ್ವಾಮಿ ಅವರನ್ನು ಕೂಡಲೇ ಅಮಾನತ್ತು ಮಾಡಿ ಎಂದು ಒತ್ತಾಯಿಸಿದರು.

ಚಿತ್ರದುರ್ಗದ ಬಹುತೇಕ ನಗರಸಭೆ ಆಸ್ತಿಯನ್ನು ಸದಸ್ಯರು ಉಳಿಸಿಕೊಟ್ಟಿದ್ದೆವೆ. ಆದರೂ ಇವುಗಳನ್ನು ಒಳಗಿಂದ ಒಳಗೆ ಮಾರಾಟ ಮಾಡಿರುವ ವಿಷಯ ಕೇಳಿ ಬರುತ್ತಿದೆ. ಒಂದು ವೇಳೆ ಯಾರಿಗಾದರೂ ಮಾರಾಟ ಮಾಡಿದರೆ ಜೈಲಿಗೆ ಕಳಿಸಬೇಕಾಗುತ್ತದೆ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಸದಸ್ಯ ಶ್ರೀನಿವಾಸ್ ಎಚ್ಚರಿಸಿದರು.

Share This Article
error: Content is protected !!
";