ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಧ್ಯ ಕರ್ನಾಟಕದ ಏಕೈಕ ರೈತರ ಜೀವನಾಡಿ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ ಗುರುವಾರ 128.00 ಅಡಿಗೆ ಏರಿಕೆಯಾಗಿದೆ.
ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ಪ್ರತಿ ದಿನ 462 ಕ್ಯೂಸೆಕ್ ನೀರಿನ ಒಳ ಹರಿವು ಇದೆ.
ತರೀಕೆರೆ ಸಮೀಪದ ಬೆಟ್ಟದತಾವರೆಕೆರೆ ಸಮೀಪ ಇರುವ ಪಂಪ್ ಹೌಸ್ ನಿಂದ ಪ್ರತಿ ನಿತ್ಯ ಒಂದು ಪಂಪ್ ರನ್ ಮಾಡಿ ವಿವಿ ಸಾಗರಕ್ಕೆ ನೀರು ಹರಿಸಲಾಗುತ್ತಿರುವುದರಿಂದ ಸುಮಾರು 462 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಭರ್ತಿಗೆ 2 ಅಡಿ ಬಾಕಿ-ಪ್ರತಿ ನಿತ್ಯ ಒಂದು ಸಾವಿರ ಕ್ಯೂಸೆಕ್ ನಷ್ಟು ನೀರು ಇನ್ನೂ 20 ದಿನಗಳ ಕಾಲ ಹರಿದರೆ ವಾಣಿ ವಿಲಾಸ ಸಾಗರ ಕೋಡಿ ಬೀಳಲಿದೆ.
ಒಂದು ಇಂದು, ನಾಳೆ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು ಹೆಚ್ಚಿನ ಕ್ಯೂಸೆಕ್ ನೀರು ಹರಿದರೆ ಇನ್ನ ಎರಡು ಮೂರು ದಿನಗಳಲ್ಲಿ ಕೋಡಿ ಬೀಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಒಂದು ವೇಳೆ ಹವಾಮಾನ ಮುನ್ಸೂಚನೆಯಂತೆ ಮಳೆ ಸುರಿಯದೇ ಇದ್ದರೂ ಭದ್ರಾ ಡ್ಯಾಂನಲ್ಲಿ ಸಾಕಷ್ಟು ನೀರಿದ್ದು ಹಳ್ಳಕ್ಕೆ ಹರಿ ಬಿಡಲಾಗುತ್ತಿದೆ.
ಅದೇ ನೀರನ್ನ ವಾಣಿ ವಿಲಾಸ ಸಾಗರಕ್ಕೆ ಪಂಪ್ ಮಾಡಿ ನಿತ್ಯ ಮೂರು ಸಾವಿರ ಕ್ಯೂಸೆಕ್ ನೀರು ಹರಿಸಿದರೆ ಒಂದು ವಾರದೊಳಗೆ ವಿವಿ ಸಾಗರ ಡ್ಯಾಂ ಭರ್ತಿಯಾಗಲಿದೆ. ಇದರತ್ತ ಭದ್ರಾ ಅಧಿಕಾರಿಗಳು, ರಾಜ್ಯ ಸರ್ಕಾರ ಚಿಂತನೆ ಮಾಡಬೇಕಿದೆ.
ಹಾಗೇ ಮಾಡಿದಲ್ಲಿ ವಾಣಿ ವಿಲಾಸ ಸಾಗರ ತನ್ನ ಇತಿಹಾಸದ ಒಡಲಲ್ಲಿ ಮೂರು ಬಾರಿ ಭರ್ತಿಯಾದ ದಾಖಲೆ ಉಳಿಯಲಿದೆ. 1933ರಲ್ಲಿ ಮೊದಲ ಬಾರಿಗೆ ವಿವಿ ಸಾಗರ ಡ್ಯಾಂ ಭರ್ತಿಯಾಗಿ ಕೋಡಿ ಹರಿದಿತ್ತು.
ಇದಾದ 89 ವರ್ಷಗಳ ನಂತರ ಅಂದರೆ 2022ರಲ್ಲಿ 2ನೇ ಬಾರಿಗೆ ಕೋಡಿ ಹರಿದಿದ್ದು ಇತಿಹಾಸ. ಈಗ 3ನೇ ಬಾರಿಗೆ ಕೋಡಿ ಬೀಳುವ ಎಲ್ಲ ಸಾಧ್ಯತೆಗಳು ಕಾಣುತ್ತಿದ್ದು ಹಾಗಾಗಿ ಮೂರನೇ ಸಲ ಕೋಡಿ ಬೀಳುವ ಕ್ಷಣಗಳಿಗೆ ಅಧಿಕಾರಿಗಳು ಸೇರಿದಂತೆ ರೈತರು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ.
ಇನ್ನು ವಾಣಿ ವಿಲಾಸ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಒಟ್ಟು 135 ಅಡಿ ಆಗಿದ್ದು, 130 ಅಡಿಗೆ ಕೋಡಿ ಹರಿಯಲಿದೆ. ಜಲಾಶಯದಲ್ಲಿ 30 ಟಿಎಂಸಿ ಅಡಿ ನೀರು ಸಂಗ್ರಹವಾಗುವ ಸಾಮರ್ಥ್ಯ ಹೊಂದಿದೆ.