ಏನಿದು ಸರ್ಕಾರಿ ಲ್ಯಾಂಡ್ ಬೀಟ್?, ಶೇ. 95 ಸಾಧನೆಗೆ ಜಿಲ್ಲಾಧಿಕಾರಿ ವೆಂಕಟೇಶ್ ಸೂಚನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿನ ಸರ್ಕಾರಿ ಆಸ್ತಿಗಳನ್ನು ಗುರುತಿಸಿ, ಹದ್ದುಬಸ್ತುಗೊಳಿಸಿಕೊಂಡು, ಲ್ಯಾಂಡ್ ಬೀಟ್ ದತ್ತಾಂಶದಲ್ಲಿ ಅಪ್‍ಲೋಡ್ ಮಾಡುವ ಕಾರ್ಯದಲ್ಲಿ ಕನಿಷ್ಟ ಶೇ. 95 ರಷ್ಟು ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ ಕಂದಾಯ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಸರ್ಕಾರಿ ಆಸ್ತಿಗಳನ್ನು ಗುರುತಿಸಿ, ನಿಖರಗೊಳಿಸಿ, ಹದ್ದುಬಸ್ತು ಮಾಡಿಕೊಳ್ಳುವ ಕುರಿತಂತೆ ಸರ್ಕಾರ ಲ್ಯಾಂಡ್ ಬೀಟ್ ಕಾರ್ಯಕ್ರಮ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ ಪ್ರಸ್ತುತ ಸರ್ಕಾರಿ ಆಸ್ತಿಗಳ ದತ್ತಾಂಶ ಅಪ್‍ಲೋಡ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ.  ಲ್ಯಾಂಡ್ ಬೀಟ್ ಕಾರ್ಯಕ್ರಮದಡಿ ದತ್ತಾಂಶ ಅಪ್‍ಲೋಡ್ ಮಾಡುವ ಕಾರ್ಯ ಜಿಲ್ಲೆಯಲ್ಲಿ ಕನಿಷ್ಟ 95 ರಷ್ಟು ಸಾಧನೆಯಾಗಬೇಕು.

 ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಗಳನ್ನು ಸಮನ್ವಯಗೊಳಿಸಿ, ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

    ಬರುವ ಸೆ. 27 ರಂದು ಕಂದಾಯ ಸಚಿವರು ರಾಜ್ಯ ಮಟ್ಟದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದು, ಇದಕ್ಕಾಗಿ ಅಗತ್ಯ ಮಾಹಿತಿಯನ್ನು ಕ್ರೋಢೀಕರಿಸಿ, ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

     ವಿಪತ್ತು ನಿರ್ವಹಣೆ, ಆಧಾರ್ ಸೀಡಿಂಗ್, ಲ್ಯಾಂಡ್ ಬೀಟ್, ಇ-ಆಫೀಸ್, ಜನತಾದರ್ಶನ ಸಭೆಗಳಲ್ಲಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ, ಸಕಾಲ, ಪೋಡಿ ಪ್ರಕರಣಗಳ ಕುರಿತು ಪ್ರಗತಿ  ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಜನತಾದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಕುಂದುಕೊರತೆ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು.

 ಪಹಣಿ- ಆಧಾರ್ ಸೀಡಿಂಗ್ ಕಾರ್ಯದಲ್ಲಿ ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕಾರ್ತಿಕ್ ಎಂ., ಜಂಟಿಕೃಷಿ ನಿರ್ದೇಶಕ ಮಂಜುನಾಥ್ ಸೇರಿದಂತೆ ಎಲ್ಲ ತಹಸಿಲ್ದಾರರು ಉಪಸ್ಥಿತರಿದ್ದರು.

 

 

- Advertisement -  - Advertisement - 
Share This Article
error: Content is protected !!
";