ಆರ್ ಸಿಬಿ ಕಾಲ್ತುಳಿತಕ್ಕೂ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೂ ಏನು ಸಂಬಂಧ?

News Desk

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ದೆಹಲಿ ಯಾತ್ರೆ ಮುಗಿಸಿಕೊಂಡು ಬಂದಾಗಿನಿಂದ ಕಾಲ್ತುಳಿತ ಪ್ರಕರಣವನ್ನ ಮುಚ್ಚಿಹಾಕಲು, ಜನರ ಗಮನ ಬೇರೆಡೆ ಸೆಳೆಯಲು ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.

- Advertisement - 

ಸಿಎಂ ಸಿದ್ದರಾಮಯ್ಯನವರೇ, ತಾವು ಒಬ್ಬ ವಕೀಲರು, ಸುದೀರ್ಘ ರಾಜಕೀಯ, ಆಡಳಿತದ ಅನುಭವ ಇರುವ, ಎರಡನೇ ಬಾರಿ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸುತ್ತಿರುವ ಅನುಭವಿಗಳು. ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ದುರಂತಕ್ಕೂ, ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೂ ಅಥವಾ ಕುಂಭಮೇಳದಲ್ಲಿ ನಡೆದ ಕಾಲ್ತುಳಿತ ಘಟನೆಗೂ ಅಜಗಜಾಂತರ ವ್ಯತ್ಯಾಸ ಇದೆ. ಆಕಾಶಕ್ಕೂ ಭೂಮಿಗೂ ಇರುವ ಅಂತರ ಇದೆ. ಈ ರೀತಿಯ ಹೋಲಿಕೆ ಮಾಡುವುದು ಮೂರ್ಖತನ ಎನ್ನುವುದು ತಮಗೂ ಗೊತ್ತು.

- Advertisement - 

ಆದರೂ ಒಂದು ಉದಾಹರಣೆ ಕೊಡುತ್ತೇನೆ. ಶಸ್ತ್ರಚಿಕಿತ್ಸೆ ಅಗತ್ಯ ಇರುವ ಒಬ್ಬ ರೋಗಿಗೆ ಎಲ್ಲ ರೀತಿಯ ಪ್ರಾಥಮಿಕ ಪರೀಕ್ಷೆಗಳನ್ನು ಮಾಡಿ, ರೋಗಿಯ ದೇಹಸ್ಥಿತಿ ಶಸ್ತ್ರಚಿಕಿತ್ಸೆಗೆ ಸಿದ್ದವಿದೆಯಾ ಎಂದು ತಜ್ಞ ವೈದ್ಯರಿಂದ ದೃಡೀಕರಣ ಪಡೆದುಕೊಂಡು, ಅಗತ್ಯವಾದ ರಕ್ತ, ಔಷಧಿ, ಅರಿವಳಿಕೆ, ಶಸ್ತ್ರ ಚಿಕಿತ್ಸಾ ಕೊಠಡಿ, ಶಸ್ತ್ರಚಿಕಿತ್ಸೆಯ ಸಂಭಾವ್ಯ ಅಪಾಯಗಳ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿಸಿ, ಅವರ ಒಪ್ಪಿಗೆ ಪಡೆದು ಈ ರೀತಿ ಎಲ್ಲಾ ಆಯಾಮಗಳಲ್ಲೂ ಪೂರ್ವ ಸಿದ್ಧತೆ ಮಾಡಿಕೊಂಡು ಶಸ್ತ್ರ ಚಿಕಿತ್ಸೆ ಮಾಡಬೇಕಿರುವುದು ಒಂದು ಸರಿಯಾದ ಪ್ರಕ್ರಿಯೆ. ಇಷ್ಟಾದ ಮೇಲೂ ಕಾರಣಾಂತರಗಳಿಂದ ಶಸ್ತ್ರಚಿಕಿತ್ಸೆ ಯಶಸ್ವಿ ಆಗದೆ ಹೋದರೆ, ಆಗ ಅದು ಆಕಸ್ಮಿಕ, ಅಚಾತುರ್ಯ ಅಥವಾ ವಿಧಿ ಅನ್ನಬಹುದು ಎಂದು ಅಶೋಕ್ ತಿಳಿಸಿದರು.

ಆದರೆ ವೈದ್ಯರು ಸದ್ಯಕ್ಕೆ ಶಸ್ತ್ರಚಿಕಿತ್ಸೆ ಬೇಡ ಎಂದು ಸಲಹೆ ಕೊಟ್ಟರೂ, ಯಾವುದೇ ಪೂರ್ವಸಿದ್ಧತೆ ಇಲ್ಲದೆ, ಆಗಬಹುದಾದ ಅನಾಹುತಗಳ ಬಗ್ಗೆ ಕಾಳಜಿ ಇಲ್ಲದೆ ಏಕಾಏಕಿ ರೋಗಿಗೆ ಶಸ್ತ್ರ ಚಿಕಿತ್ಸೆ ಮಾಡಿ ಆ ರೋಗಿ ಸತ್ತು ಹೋದರೆ ಅದಕ್ಕೆ ಯಾರು ಹೊಣೆ? ಇದೇ ಸ್ವಾಮಿ ಇಲ್ಲೂ ಆಗಿರೋದು. ಪೊಲೀಸರು ತರಾತುರಿಯ ವಿಜಯೋತ್ಸವ ಬೇಡ ಎಂದು ಲಿಖಿತ ರೂಪದಲ್ಲಿ ಎಚ್ಚರಿಕೆ ಕೊಟ್ಟ ಮೇಲೂ ತರಾತುರಿಯಲ್ಲಿ ವಿಜಯೋತ್ಸವ ಆಚರಣೆ ಮಾಡಿದ್ದು ಯಾರ ತೆವಲಿಗೆ? ಎಂದು ಅಶೋಕ್ ವಾಗ್ದಾಳಿ ಮಾಡಿದ್ದಾರೆ.

- Advertisement - 

ಕಟು ಸತ್ಯವೇನಂದರೆ ಈ ಕಾಲ್ತುಳಿತ ಸರ್ಕಾರಿ ಪ್ರಾಯೋಜಿತ ಅಮಾಯಕರ ಹತ್ಯಾಕಾಂಡ. ಮತ್ತೊಬ್ಬರ ಸಾಧನೆಯ ಯಶಸ್ಸಿನ ದುರ್ಲಾಭ ಪಡೆಯುವ ಸರ್ಕಾರದ ಹಪಹಾಪಿಯಿಂದ ಸಂಭವಿಸಿರುವ ತಡೆಯಬಹುದಾಗಿದ್ದ ಅವಘಡ ಇದು.

ಆರ್ ಸಿಬಿ ಪ್ರಶಸ್ತಿ ಗೆದ್ದ 12 ಗಂಟೆಯೊಳಗೆ ವಿಧಾನಸೌಧದ ಮುಂದೆ  ಸಮಾರಂಭ ಏರ್ಪಡಿಸುವ ಆತುರವೇನಿತ್ತು?
ವಿಧಾನಸೌಧ ಅಲ್ಲದೆ ಪಕ್ಕದಲ್ಲೆ ಇರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಂದು ಕಾರ್ಯಕ್ರಮ ಈ ಎರಡೂ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಿದೆ ಎಂದು ಪೊಲೀಸರು ಸರ್ಕಾರಕ್ಕೆ ತಿಳಿಸಿದ್ದರಾ
?

ನಗರ ಪೊಲೀಸರು ಸ್ಟೇಡಿಯಂ ಕಾರ್ಯಕ್ರಮದ ಆಯೋಜಕರೊಂದಿಗೆ ಮಾತುಕತೆ ನಡೆಸಿ ಅಭಿಮಾನಿಗಳ ಸುರಕ್ಷತೆಯ ಬಗ್ಗ ತಕ್ಕ ವ್ಯವಸ್ಥೆ ಮಾಡಿದ್ದರಾ? ಒಂದು ವೇಳೆ ಅನುಮತಿ ನೀಡಿದ್ದರೆ, ಅಲ್ಲಿ ನೆರೆಯುವ ಜನರ ಸುರಕ್ಷತೆಯಿಂದ ಯಾವ ಷರತ್ತು ವಿಧಿಸಿ ನೀಡಲಾಗಿತ್ತು?

ಅಪಾರವಾದ ಕ್ರೀಡಾ ಪ್ರೇಮಿಗಳು ಸೇರುವ ನಿರೀಕ್ಷೆ ನಗರದ ಪ್ರತಿಯೊಬ್ಬರಿಗೂ ತಿಳಿದಿತ್ತು. ಆದರೆ ಸರ್ಕಾರ ನಡೆಸುವವರಿಗೆ ಮಾತ್ರ ಎಷ್ಟು ಜನ ಸೇರಬಹುದು ಎಂಬ ಅಂದಾಜು ಇರಲಿಲ್ಲ ಎನ್ನುವುದಾದರೆ ಅದು ಸರ್ಕಾರದ ವೈಫಲ್ಯ ಮಾತ್ರ ಅಲ್ಲ, ಅದು crinimal negligence, ಜನರ ಪ್ರಾಣಕ್ಕೆ ಬೆಲೆ ಇಲ್ಲದ ಬೇಜವಾಬ್ದಾರಿತನ ಎಂದು ವಿಪಕ್ಷ ನಾಯಕ ಅಶೋಕ್ ಹರಿಹಾಯ್ದರು.

ಹೋಗಲಿ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾಯ್ತು. ಅಷ್ಟು ಜನ ಸೇರುವ ಕಾರ್ಯಕ್ರಮದ ಮೈದಾನದ ಸಮೀಪ ತುರ್ತು ಉಪಯೋಗಕ್ಕೆ ಅಗತ್ಯ ಸಂಖ್ಯೆಯಲ್ಲಿ ಆಂಬ್ಯುಲೆನ್ಸ್ ನಿಯೋಜನೆ ಆಗಿರಬೇಕಲ್ಲವೇ? ಅವಘಡಗಳ ಮುನ್ನಚ್ಚೆರಿಕೆಯ ಕ್ರಮವಾಗಿ ಅಗ್ನಿಶಾಮಕ ದಳ ಇರಬೇಕಿತ್ತಲ್ಲವೇ?

ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣ ಎರಡೂ ಕಡೆ ಕಾರ್ಯಕ್ರಮ ಇದ್ದಿದ್ದರಿಂದ ಇತರೆ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿ, KSRP ತುಕಡಿಗಳು ನಿಯೋಜನೆ ಆಗಬೇಕಿತ್ತಲ್ಲವೇ?

ಇನ್ನು ಮಾನವೀಯತೆಯ ಪ್ರಶ್ನೆಗೆ ಬರೋಣ. ದುರಂತ ಸಂಭವಿಸಿದ ನಂತರವಾದರೂ ಕ್ರೀಡಾಂಗಣದೊಳಗೆ ಸಂಭ್ರಮಾಚರಣೆಯನ್ನು ಕೂಡಲೇ ಸ್ಥಗಿತಗೊಳಿಸಬೇಕಿತ್ತು. ಆದರೆ ಸೂತಕದ ಮನೆಯಾಗಿದ್ದ ಸಮಯದಲ್ಲಿ ಸ್ವತಃ ಉಪ ಮುಖ್ಯಮಂತ್ರಿಗಳೆ ಮೈದಾನದೊಳಗಿನ ಸಂಭ್ರಮದಲ್ಲಿ ಭಾಗಿಯಾಗುವ ಮೂಲಕ ಮೃತಪಟ್ಟವರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ದುಃಖವಾಗಲಿ, ವಿಷಾದವಾಗಲಿ ಇರಲಿಲ್ಲ ಎನ್ನುವುದನ್ನ ಸಾಬೀತು ಪಡಿಸಿದರು.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಕಾರ್ಯಕ್ರಮದಲ್ಲಿ ಏನೂ ಅನಾಹುತ ಆಗಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮ ನಮ್ಮ ಜವಾಬ್ದಾರಿ ಅಲ್ಲ ಎನ್ನುವುದು ಲಜ್ಜೆಗೇಡಿತನ ಅಲ್ಲವೇ?

ಭಾಷಣ ಮಾಡಲಿಲ್ಲ ಬೇಗ ಕಾರ್ಯಕ್ರಮ ಮುಕ್ತಾಯ ಮಾಡಿದೆವು ಎಂಬ ಹೇಳಿಕೆಗಳಿಂದ ದುರಂತ ಸಂಭವಿಸಿದ ನಂತರವೂ ಕಾರ್ಯಕ್ರಮ ನಡೆಸಿದ್ದನ್ನು ಸಮರ್ಥಿಸಿಕೊಂಡಿರುವುದು ನಾಚಿಗೇಡಿನ ಸಂಗತಿ ಅಲ್ಲವೇ?

ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಕೇವಲ ಪ್ರಚಾರದ ತೆವಲಿಗೆ ಎಲ್ಲಾ ಶಿಷ್ಟಾಚಾರವನ್ನು ಬದಿಗೊತ್ತಿ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ 11 ಯುವಕರ ಸಾವಿಗೆ ಕಾಂಗ್ರೆಸ್ ಸರ್ಕಾರ ನೇರ ಕಾರಣವಾಗಿದೆ. ಈ ಪ್ರಕರಣದಲ್ಲಿ SIT ತನಿಖೆಯಾಗಲಿ ಅಥವಾ ಮ್ಯಾಜಿಸ್ಟ್ರೇಟ್ ತನಿಖೆ ಆಗಲಿ ಅದು ಸರ್ಕಾರಕ್ಕೆ ಕ್ಲೀನ್ ಚಿಟ್ ಕೊಡುವ ಕುತಂತ್ರ ಅಷ್ಟೇ. 11 ಜನ ಅಮಾಯಕ ಯುವಕರ ಸಾವಿನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಬೇಜವಾಬ್ದಾರಿ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುವುದು, ನ್ಯಾಯ ಕೇಳುವುದು ಪ್ರತಿಪಕ್ಷವಾಗಿ ನಮ್ಮ ಕರ್ತವ್ಯ. ಇದರಲ್ಲಿ ರಾಜಕೀಯ ಮಾಡುವ ಉದ್ದೇಶವಾಗಲಿ, ಅಗತ್ಯವಾಗಲಿ ನಮಗಿಲ್ಲ.

ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮತ್ತು ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ಹನ್ನೊಂದು ಜನರ ಸಾವಿಗೆ ನೈತಿಕ ಹೊಣೆ ಹೊತ್ತು ಈ ಕೂಡಲೇ ರಾಜಿನಾಮೆ ಕೊಡಬೇಕು. ಆಗ ಮಾತ್ರ ಸರ್ಕಾರ ಈ ದುರಂತಕ್ಕೆ ಹೊಣೆ ಹೊತ್ತಂತಾಗುತ್ತದೆ, ಬಲಿಯಾದ ಅಮಾಯಕ ಜೀವಗಳಿಗೆ, ಅವರ ಹೆತ್ತವರಿಗೆ ನ್ಯಾಯ ಒದಗಿಸಲು ಮೊದಲ ಹೆಜ್ಜೆ ಇಟ್ಟಂತಾಗುತ್ತದೆ ಎಂದು ಅಶೋಕ್ ತಾಕೀತು ಮಾಡಿದ್ದಾರೆ.

 

Share This Article
error: Content is protected !!
";