ತುಂಬ ಅಹಂಕಾರಿಯಾಗಿದ್ದ ದೊಡ್ಡ ಉದ್ಯೋಗಿ ನಿವೃತ್ತಿ ಹೊಂದಿದಾಗ!?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೊಡ್ಡ ಹುದ್ದೆಯಲ್ಲಿದ್ದು ನಿವೃತ್ತನಾದ ಓರ್ವ ವ್ಯಕ್ತಿ
, ತಾನು ಇಲ್ಲಿಯವರೆಗೆ ವಾಸಿಸಿದ್ದ ಅಧಿಕೃತ ನಿವಾಸದಿಂದ ಒಂದು ಕಾಲೋನಿಯಲ್ಲಿರುವ ತನ್ನ ಸ್ವಂತ ಮನೆಗೆ ಸ್ಥಳಾಂತರಗೊಂಡ. ಅವನು ತಾನು ದೊಡ್ಡ ಉದ್ಯೋಗಿ ಎಂದು ತುಂಬ ಅಹಂಕಾರಿಯಾಗಿದ್ದ.

- Advertisement - 

ಪ್ರತಿದಿನ ಆ ಕಾಲೋನಿಯಲ್ಲಿರುವ ಪಾರ್ಕ್‌ಗೆ ಸಂಜೆಯ ನಡಿಗೆಗೆ ಹೋಗುವಾಗ ಅಲ್ಲಿರುವ ಯಾರೊಂದಿಗೂ ಮಾತನಾಡುವುದಿಲ್ಲ. ಕನಿಷ್ಠ ಅವರ ಕಡೆ ನೋಡುತ್ತಲೂ ಇರಲಿಲ್ಲ. ಅವರೆಲ್ಲರೂ ತನ್ನ ಮಟ್ಟಕ್ಕೆ ಸೇರಿದವರಲ್ಲ ಎಂಬ ಭಾವನೆ ಅವನಲ್ಲಿ ತುಂಬಿತ್ತು.

- Advertisement - 

ಒಂದು ದಿನ ಅವನು ಪಾರ್ಕ್‌ನಲ್ಲಿರುವ ಬೆಂಚ್ ಮೇಲೆ ಕುಳಿತುಕೊಂಡಿದ್ದಾಗ, ಇನ್ನೊಬ್ಬ ವೃದ್ಧ ವ್ಯಕ್ತಿ ಬಂದು ಪಕ್ಕದಲ್ಲಿ ಕುಳಿತು ಸಂಭಾಷಣೆ ಪ್ರಾರಂಭಿಸಿದನು.

ಈ ವ್ಯಕ್ತಿ ಮಾತ್ರ ಎದುರಿನ ವ್ಯಕ್ತಿ ಹೇಳುವ ಮಾತುಗಳಿಗೆ ಕಿಂಚಿತ್ತೂ ಬೆಲೆ ಕೊಡದೆ, ತಾನು ನಿರ್ವಹಿಸಿದ ಉದ್ಯೋಗ, ಸ್ಥಾನಮಾನದ ಬಗ್ಗೆ, ತನ್ನ ದೊಡ್ಡಸ್ತಿಕೆ ಬಗ್ಗೆ ಮಾತ್ರ ಹೇಳುತ್ತಿದ್ದ. ತನ್ನಂತಹ ಉನ್ನತ ಮಟ್ಟದ ವ್ಯಕ್ತಿ ತನ್ನ ಸ್ವಂತ ಮನೆ ಈ ಕಾಲೋನಿಯಲ್ಲಿರುವ ಕಾರಣಕ್ಕಾಗಿಯೇ ಇಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದ.

- Advertisement - 

ಕೆಲವು ದಿನಗಳ ಕಾಲ ಹೀಗೆಯೇ ಮುಂದುವರೆಯಿತು. ಆ ವೃದ್ಧ ಮಾತ್ರ ತಾಳ್ಮೆಯಿಂದ ಕೇಳುತ್ತಿದ್ದ. ಒಂದು ದಿನ ಆ ವೃದ್ಧ ಮಾತಿಗೆ ತೊಡಗಿದನು. ನೋಡು ಮಗುವೇ! ವಿದ್ಯುತ್ ಬಲ್ಬ್‌ಗಳು ಉರಿಯುವವರೆಗೂ ಮಾತ್ರ ಅವುಗಳಿಗೆ ಬೆಲೆ, ಅವು ಸುಟ್ಟು ಹೋದ ನಂತರ ಎಲ್ಲವೂ ಒಂದೇ. ಅವುಗಳ ರೂಪ, ಅವು ನೀಡಿದ ಬೆಳಕು ಎಲ್ಲವೂ ಮರೆಮಾಚಲ್ಪಟ್ಟುತ್ತವೆ.

ನಾನು ಈ ಕಾಲೋನಿಯಲ್ಲಿ ಐದು ವರ್ಷಗಳಿಂದ ವಾಸಿಸುತ್ತಿದ್ದೇನೆ, ನಾನು ಎರಡು ಬಾರಿ ಸಂಸತ್ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಇಲ್ಲಿಯವರೆಗೆ ಯಾರಿಗೂ ಹೇಳಿಲ್ಲ. ಅಷ್ಟೇ… ಆ ಅಹಂಕಾರಿಯ ಮುಖದ ಬಣ್ಣ ಬದಲಾಯಿತು.

ಆ ದೊಡ್ಡ ಮನುಷ್ಯ ಮುಂದುವರಿಸಿದನು. “ನಿಮ್ಮ ಬಲಬದಿಗೆ ದೂರದಲ್ಲಿ ಕುಳಿತಿರುವ ವರ್ಮಾ ಅವರು ಭಾರತೀಯ ರೈಲ್ವೆಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಎದುರಿಗೆ ನಿಂತು ನಗುತ್ತಾ ಮಾತನಾಡುತ್ತಿರುವ ರಾವ್ ಅವರು ಸೈನ್ಯದಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ನಿವೃತ್ತರಾಗಿದ್ದಾರೆ. ಆ ಮೂಲೆಯಲ್ಲಿ ಬಿಳಿ ಬಟ್ಟೆಯಲ್ಲಿರುವ ಶಿವ ಅವರು ಇಸ್ರೋ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ವಿಷಯವನ್ನು ಅವರು ಯಾರೊಂದಿಗೂ ಹೇಳಿಕೊಂಡಿಲ್ಲ. ನನಗೆ ತಿಳಿದಿರುವ ವಿಷಯವನ್ನು ನಿಮಗೆ ಹೇಳುತ್ತಿದ್ದೇನೆ.

ಸುಟ್ಟುಹೋದ ಬಲ್ಬ್‌ಗಳು ಎಲ್ಲವೂ ಒಂದೇ ಗುಂಪಿಗೆ ಸೇರಿದವು ಎಂದು ನಾನು ಮೊದಲೇ ಹೇಳಿದೆನಲ್ಲ. ಜೀರೋ, 10, 20, 40, 60, 100 ವ್ಯಾಟ್‌ಗಳ ಯಾವುದೇ ಬಲ್ಬ್ ಆಗಿರಲಿ, ಅವುಗಳು ಉರಿಯುವವರೆಗೂ ಮಾತ್ರ ಅವುಗಳ ಬೆಲೆ. ಫ್ಯೂಸ್ ಹೋಗಿ ಸುಟ್ಟುಹೋದ ನಂತರ ಅವುಗಳ ವ್ಯಾಟ್, ಅವು ಚೆಲ್ಲಿದ ಬೆಳಕುಗಳಿಗೆ ಬೆಲೆ ಇರುವುದಿಲ್ಲ. ಅವು ಸಾಮಾನ್ಯ ಬಲ್ಬ್, ಟ್ಯೂಬ್‌ಲೈಟ್, ಎಲ್ಇಡಿ, ಸಿ.ಎಫ್.ಎಲ್., ಹ್ಯಾಲೋಜನ್, ಡೆಕೋರೇಟಿವ್ ಬಲ್ಬ್.. ಯಾವುದೇ ಆಗಿರಲಿ ಒಂದೇ.

ಆದ್ದರಿಂದ, ನಿಮ್ಮೊಂದಿಗೆ ನಮ್ಮೆಲ್ಲರೂ ಸುಟ್ಟುಹೋದ ಬಲ್ಬ್‌ಗಳೇ. ಉದಯಿಸುವ ಸೂರ್ಯ, ಅಸ್ತಮಿಸುವ ಸೂರ್ಯ ಒಂದೇ ರೀತಿ ಸುಂದರವಾಗಿರುತ್ತಾರೆ. ಆದರೆ ಉದಯಿಸುವ ಸೂರ್ಯನಿಗೆ ಎಲ್ಲರೂ ನಮಸ್ಕರಿಸುತ್ತಾರೆ, ಪೂಜೆ ಮಾಡುತ್ತಾರೆ. ಅಸ್ತಮಿಸುವ ಸೂರ್ಯನಿಗೆ ಮಾಡುವುದಿಲ್ಲವಲ್ಲ! ಈ ವಾಸ್ತವವನ್ನು ನಾವು ಗುರುತಿಸಬೇಕು.

ನಾವು ಮಾಡುತ್ತಿರುವ ಉದ್ಯೋಗ, ಸ್ಥಾನಮಾನ ಶಾಶ್ವತವಲ್ಲ ಎಂದು ತಿಳಿದುಕೊಳ್ಳಬೇಕು. ಅವುಗಳಿಗೆ ಬೆಲೆ ಕೊಟ್ಟು, ಅವುಗಳೇ ಜೀವನ ಎಂದು ಭಾವಿಸಿದರೆ, ಯಾವುದೋ ಒಂದು ದಿನ ಅವು ನಮ್ಮನ್ನು ಬಿಟ್ಟು ಹೋಗುತ್ತವೆ ಎಂಬ ವಾಸ್ತವವನ್ನು ಗುರುತಿಸಬೇಕು.

ಚದುರಂಗ ಆಟದಲ್ಲಿ ರಾಜ, ಮಂತ್ರಿ. ಅವುಗಳ ಮೌಲ್ಯಗಳು ಆ ಬೋರ್ಡ್ ಮೇಲೆ ಇರುವವರೆಗೂ ಮಾತ್ರ.. ಆಟ ಮುಗಿದ ನಂತರ ಎಲ್ಲವನ್ನೂ ಒಂದೇ ಡಬ್ಬದಲ್ಲಿ ಹಾಕಿ ಮುಚ್ಚಳ ಹಾಕುತ್ತೇವೆ. ಇಂದು ನಾನು ಸಂತೋಷವಾಗಿದ್ದೇನೆ ಎಂದು ಭಾವಿಸು, ಮುಂದೆ ಕೂಡ ಸಂತೋಷವಾಗಿರಬೇಕು ಎಂದು ಆಶಿಸು…

ನಮ್ಮ ಜೀವನದಲ್ಲಿ ಎಷ್ಟೇ ಸರ್ಟಿಫಿಕೇಟ್‌ಗಳನ್ನು ಪಡೆದರೂ.. ಕೊನೆಗೆ ಎಲ್ಲರೂ ಪಡೆಯುವ ಸರ್ಟಿಫಿಕೇಟ್ ಒಂದೇ. ಅದೇ ಡೆತ್ ಸರ್ಟಿಫಿಕೇಟ್…
ಸಂಗ್ರಹಸುಪ್ರಭಾತಂ

 

 

 

Share This Article
error: Content is protected !!
";