ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಗಾಂಧಿ ವೃತ್ತದಿಂದ ರಾಜ್ಯ ರಸ್ತೆ ಸಾರಿಗೆ ನಿಲ್ದಾಣ ಸೇರಿದಂತೆ ರಂಜಿತ್ ಹೋಟೆಲ್ ತನಕ ಹಿರಿಯೂರು ಮುಖ್ಯ ರಸ್ತೆಯಲ್ಲಿ ಸಾಕಷ್ಟು ಗುಂಡಿ, ತಗ್ಗುಗಳಿದ್ದು ದುರಸ್ತಿ ಎನ್ನುವುದು ಮರೀಚಿಕೆಯಾಗಿದೆ. ಅಷ್ಟೇ ಅಲ್ಲ ರಸ್ತೆಯ ಮಧ್ಯ ಭಾಗದಲ್ಲಿ ನಿರ್ಮಿಸಿರುವ ಕಬ್ಬಿಣದ ಬ್ಯಾರಿಕೇಡ್ ಗಳು ತುಕ್ಕು ಹಿಡಿದು ಹಾಳುಗುತ್ತಿದ್ದರೂ ಸಂಬಂಧ ಪಟ್ಟವರು ಗಮನ ನೀಡದಿರುವುದು ಸೋಜಿಗವಾಗಿದೆ.
ನಗರಸಭೆಯವರು ರಸ್ತೆ ಮಧ್ಯಭಾಗದಲ್ಲಿನ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ಮಾಡುತ್ತಿರಲಿಲ್ಲ, ಕೆಲ ದಿನಗಳಿಂದ ಓರ್ವ ವ್ಯಕ್ತಿ ವಿದ್ಯುತ್ ಶಾಕ್ ಹೊಡೆದು ಮೃತ ಪಟ್ಟಿದ್ದರು. ಪರಿಸ್ಥಿತಿ ಅತ್ಯಂತ ಭಿನ್ನವಾಗಿದ್ದರೂ ಸಂಬಂಧಿಸಿದವರು ಸರಿಯಾಗಿ ನಿರ್ವಹಣೆ ಮಾಡದಿರುವುದು ಸೋಜಿಗವಾಗಿದೆ.
ನಗರದ ಪ್ರಧಾನ ರಸ್ತೆಯ ಬ್ಯಾರಿಕೇಡ್ ಗಳಿಗೆ ಬಣ್ಣ ಬಳಿಸುವುದರಿಂದ ಎಲ್ಲಾ ಬ್ಯಾರಿಕೇಡ್ಗಳು ತುಕ್ಕು ಹಿಡಿಯುವುದಿಲ್ಲ. ಗಾಳಿ, ಮಳೆ, ಬಿಸಿಲಿಗೆ ಬ್ಯಾರಿಕೇಡ್ ಗಳ (ತಡೆಗೋಡೆಗಾಗಿ ನಿರ್ಮಿಸಿರುವ ಬ್ಯಾರಿಕೇಡ್) ಬಣ್ಣವಿಲ್ಲದೆ ತುಕ್ಕು ಹಿಡಿದು ಹಾಳು ಆಗುತ್ತಿದ್ದುರು ಕಣ್ಣಿಗೆ ಕಂಡು ಕಾಣದಂತೆ ನಿರ್ಲಕ್ಷ್ಯ ವಹಿಸಿದ್ದಾರೆ. ಮುಖ್ಯ ರಸ್ತೆ ಮಧ್ಯ ಭಾಗದಲ್ಲಿ ಹಾಕಿರುವ ಬ್ಯಾರಿಕೇಡ್ ಗಳು ಅಲ್ಲಲ್ಲಿ ಕಿತ್ತು ಹೋಗಿದ್ದು ದುರಸ್ತಿ ಮಾಡಿ ಬಣ್ಣ ಬಳಿಯುವ ಕಾರ್ಯವನ್ನು ನಗರಸಭೆಯವರು ಮಾಡಬೇಕಿದೆ.
ಎಲ್ಲೆಲ್ಲಿ ಕಿತ್ತು ಹೋಗಿರುವ ಜಾಗದಲ್ಲಿ ಬ್ಯಾರಿಕೇಡ್ ಗಳಿಗೆ ತಂತಿ ಕಟ್ಟಿ ಬಿಟ್ಟಿರುವುದರಿಂದ ಆ ತಂತಿ ಕಿತ್ತು ಬಂದು ರಸ್ತೆಗೆ ಬಿದ್ದರೇ ಬೈಕ್ ಸವಾರರು ಮತ್ತು ಸಾರ್ವಜನಿಕರಿಗೆ ಅಪಾಘಾತ ಆಗುವುದು ಕಟ್ಟಿಟ್ಟ ಬುತ್ತಿ.
ದುಸ್ಥಿತಿಯಲ್ಲಿರುವ ಬ್ಯಾರಿಕೇಡ್ ಗಳನ್ನು ದುರಸ್ತಿ ಮಾಡಿ ಬಣ್ಣ ಬಳಿಸಿ ತುಕ್ಕು ಹಿಡಿದು ಹಾಳುಗುವುದನ್ನು ತಪ್ಪಿಸಬೇಕು. ನಗರದ ಸೌಂದರ್ಯ ಹೆಚ್ಚಿಸಬೇಕಾಗಿದೆ. ಅಲ್ಲದೆ ರಸ್ತೆ ಮಧ್ಯದಲ್ಲಿ ಹಾಕಿರುವ ತಡೆಗೋಡೆಗಳಿಗೆ ನಗರಸಭೆಯವರು ಆರೋಗ್ಯ, ಸ್ವಚ್ಛತೆ ಸೇರಿದಂತೆ ಮತ್ತಿತರ ಜಾಗೃತಿಯ ಸ್ಲೋಗನ್ ಗಳನ್ನು ಬರೆಸಿ ಸರ್ವಾಜನಿಕರಿಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ.
ಹಿರಿಯೂರು ನಗರದ ಪ್ರಧಾನ ರಸ್ತೆ ಪ್ರಮುಖವಾಗಿದ್ದು ರಸ್ತೆ ಡಾಂಬರೀಕರಣ ಮಾಡಬೇಕಾಗಿದೆ. ರಸ್ತೆಯ ಸಾಕಷ್ಟು ಕಡೆಗಳಲ್ಲಿ ರಸ್ತೆ ಕಿತ್ತು ಹೋಗಿದೆ. ಹೆಚ್ಚಿನ ರಸ್ತೆ ಹಾಳಾಗುವುದುಕ್ಕೂ ಮುನ್ನ ಎಚ್ಚೆತ್ತುಕೊಂಡು ಗಾಂಧಿ ಸರ್ಕಾಲ್ ನಿಂದ ರಂಜಿತ್ ಹೋಟಲ್ ರವರಗೂ ಮರು ಡಾಂಬರೀಕರಣ ಮಾಡಿದರೆ ಅನುಕೂಲವಾಗಲಿದೆ. ಅಲ್ಲದೆ ರಸ್ತೆ ಬಾಳಿಕೆ ಹೆಚ್ಚು ದಿನ ಬರುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ರಸ್ತೆಯ ಎರಡು ಬದಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಕಟ್ಟಡದ ಮಾಲೀಕರು ಫುಟ್ ಪಾತ್ ರಸ್ತೆಯನ್ನು ಆಕ್ರಮಿಸಿಕೊಂಡಿದ್ದು ಪಾದಚಾರಿಗಳು ಓಡಾಡಲು ರಸ್ತೆ ಇಲ್ಲವಾಗಿದೆ. ಒತ್ತುವರಿ ಮಾಡಿಕೊಂಡಿರುವ ಪಾದಚಾರಿಗಳ ರಸ್ತೆಯನ್ನು ತೆರವುಗೊಳಿಸುವ ಕಾರ್ಯಕ್ಕೆ ತಾಲೂಕು ಆಡಳಿತ ಮುಂದಾಗಬೇಕಿದೆ.
“ನಗರದ ಪ್ರಧಾನ ರಸ್ತೆಯ ಮಧ್ಯ ಇರುವ ವಿದ್ಯುತ್ ಕಂಬಗಳಿಗೆ, ಬ್ಯಾರಿಕೇಡ್ ಗಳಿಗೆ ಬ್ಯಾನರ್, ಪ್ಲೆಕ್ಸ್ ಕಟುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತದೆ. ಬ್ಯಾನರ್, ಪ್ಲೆಕ್ಸ್ ಗಳ ಹಾವಳಿಯಿಂದಾಗಿ ಅಪಘಾತಗಳು ಸಂಭವಿಸಿವೆ. ಪ್ಲೆಕ್ಸ್, ಬ್ಯಾನರ್ ಗಳನ್ನು ನಿರ್ದಿಷ್ಟ ಜಾಗದಲ್ಲಿ ಕಟ್ಟಿಕೊಳ್ಳಲಿ, ಅದು ಬಿಟ್ಟು ಸಿಕ್ಕ ಸಿಕ್ಕ ಜಾಗದಲ್ಲಿ ಕಟ್ಟುವುದರಿಂದ ಸಾಕಷ್ಟು ಅನಾಹುತಗಳಾಗಲಿವೆ”.
ಮಂಜುನಾಥ್, ನಾಗರಿಕ, ಹಿರಿಯೂರು.