ಪ್ರಾಥಮಿಕ ಆರೋಗ್ಯ ಉಪ ಕೇಂದ್ರಕ್ಕೆ ತುರ್ತು ಚಿಕಿತ್ಸೆ ನೀಡುವುದು ಯಾವಾಗ?

News Desk

ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು
:
ಸರ್ಕಾರಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರ ಪಾಳು ಬಿದ್ದು ಹಾಳು ಕೊಂಪೆಯಾಗಿದೆ. ಕಟ್ಟಡವಿಲ್ಲ, ವೈದ್ಯರು, ನರ್ಸ್ ಉಳಿದುಕೊಳ್ಳಲು ವಸತಿ ಗೃಹವಿಲ್ಲ ಹೀಗಾಗಿ ರೋಗಿಗಳಿಗೆ ಆರೋಗ್ಯ ಸೇವಾ ಚಿಕಿತ್ಸೆ ಗಗನ ಕುಸುಮವಾಗಿರುವ ಘಟನೆ ಹಿರಿಯೂರು ತಾಲೂಕಿನ ಹಿಂಡಸಕಟ್ಟೆ ಗ್ರಾಮದಾಗಿದೆ.

ಹಿರಿಯೂರು ತಾಲೂಕಿನ ಹಿಂಡಸಕಟ್ಟೆ ಗ್ರಾಮದಲ್ಲಿ ಬರೀ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರೇ ಹೆಚ್ಚಾಗಿದ್ದಾರೆ. ಕುಗ್ರಾಮದ ನಿವಾಸಿಗಳಲ್ಲಿ ಆಕಸ್ಮಿಕವಾಗಿ ಬಂದೆರಗುವ ಆರೋಗ್ಯ ಏರುಪೇರು ಜನರಲ್ಲಿ ಭಯ ಹುಟ್ಟಿಸುತ್ತಿದೆ. ದುಸ್ಥಿತಿಯಲ್ಲಿರುವ ಸರ್ಕಾರಿ ಆರೋಗ್ಯ ಉಪ ಕೇಂದ್ರಕ್ಕೆ ಮೊದಲು ದುರಸ್ತಿ ಎನ್ನುವ ಚಿಕಿತ್ಸೆ ನೀಡಿ ವೈದ್ಯರು, ನರ್ಸ್ ನಿಯೋಜನೆ ಮಾಡಬೇಕಾಗಿದೆ.

ಜನತಾ ದಳ ಸರ್ಕಾರದಲ್ಲಿ ಅದು ಸಚಿವರಾಗಿದ್ದ ಡಿ.ಮಂಜುನಾಥ್ ಅವರು ಗ್ರಾಮೀಣ ಭಾಗದ ಜನರಿಗೆ ಅಗತ್ಯ ವೈದ್ಯಕೀಯ ಸೇವೆ ದೊರೆಯಲಿ ಎನ್ನುವ ಕಾರಣಕ್ಕೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಉಪ ಕೇಂದ್ರ ಆರಂಭಿಸಿದ್ದರು. ಕೇವಲ ಉಪ ಕೇಂದ್ರ ಆರಂಭಿಸಿ ಸುಮ್ಮನಿಗಿರಲಿಲ್ಲ, ಬದಲಿಗೆ ಓರ್ವ ನರ್ಸ್ ಉಳಿದುಕೊಳ್ಳಲು ವಸತಿ ಗೃಹ ನಿರ್ಮಾಣ ಮಾಡಿದ್ದರು. ಒಂದಿಷ್ಟು ಕಾಲ ವೈದ್ಯರು ನಿತ್ಯ ಬಂದು ಹೋಗುತ್ತಿದ್ದರೆ, ನರ್ಸ್ ಗ್ರಾಮದಲ್ಲೇ ಉಳಿದುಕೊಂಡು ತುರ್ತು ಆರೋಗ್ಯ ಸೇವೆ ಒದಗಿಸುತ್ತಿದ್ದರು. ಆದರೆ ಇಂದು ಎಲ್ಲವೂ ಉಲ್ಟಾಪಲ್ಟಾ ಆಗಿದೆ.

ವೈದ್ಯರು ವಾರಕ್ಕೆ ಒಂದು ಅಥವಾ ಎರಡು ದಿನ ಬಂದರೆ ಅದೇ ಹೆಚ್ಚು. ವೈದ್ಯರು ಬಂದಾಗ ಗ್ರಾಮದಲ್ಲಿನ ಸಮುದಾಯ ಭವನದಲ್ಲಿ ಗ್ರಾಮೀಣ ಜನರ ಆರೋಗ್ಯ ತಪಾಸಣೆ ಮಾಡಿ ಹೋಗುತ್ತಾರೆ. ಇನ್ನೂ ಗ್ರಾಮದಲ್ಲೇ ಉಳಿದುಕೊಳ್ಳಬೇಕಿದ್ದ ನರ್ಸ್ ಅವರು ಮಾತ್ರ ಇಂದಿಗೂ ಗ್ರಾಮದ ಕಡೆ ಮುಖ ಮಾಡಿಲ್ಲ, ಏಕೆಂದರೆ ಅಲ್ಲಿ ಉಳಿದುಕೊಳ್ಳಲು ಯಾವುದೇ ರೀತಿಯ ವಸತಿ ಗೃಹದ ಸೌಲಭ್ಯವಿಲ್ಲ, ಪಾಳು ಬಿದ್ದಿರುವ ವಸತಿ ಗೃಹ ದುರಸ್ತಿ ಮಾಡಿಸಬೇಕು. ಹಾಗೇ ವೈದ್ಯರ ಕೊಠಡಿಯೊಂದನ್ನು ಸುಸಜ್ಜಿತಗೊಳಿಸಿದರೆ ವೈದ್ಯರು ಕುಗ್ರಾಮಕ್ಕೆ ಬಂದು ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ನೀಡಲಿದ್ದಾರೆ. ಆದರೆ ಈ ಕೆಲಸ ಆಗುತ್ತಿಲ್ಲವಾದ್ದರಿಂದಾಗಿ ಗ್ರಾಮೀಣ ಜನರ ಪಾಡು ಹೇಳ ತೀರದಾಗಿದೆ.

ಬಡವರು, ಕೂಲಿ ಕಾರ್ಮಿಕರು, ಎಸ್ಸಿ, ಎಸ್ಟಿ, ಇತರೆ ಹಿಂದುಳಿದವರು 15-20 ಕಿಲೋ ಮೀಟರ್ ದೂರದ ಹಿರಿಯೂರು ತಾಲೂಕು ಕೇಂದ್ರದ ಆಸ್ಪತ್ರೆಗೆ ಬರಬೇಕು, ಇದು ಅಸಾಧ್ಯದ ಮಾತಾಗಿದ್ದು ಅಕ್ಕಪಕ್ಕದ ನಕಲಿ ವೈದ್ಯರು, ನಕಲಿ ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾದ ಸ್ಥಿತಿ ಒದಗಿ ಬಂದಿದೆ.

ಕಿರಿಯ ಆರೋಗ್ಯ ಸಹಾಯಕಿ ಇದ್ದರೆ ವೈದ್ಯರು ಬಾರದಿದ್ದರೂ ಅವರೇ ವೈದ್ಯರಂತೆ ಸಣ್ಣಪುಟ್ಟದ ಆರೋಗ್ಯ ಸಮಸ್ಯೆಗಳಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದರು. ಆದರೆ ಆರೋಗ್ಯ ಉಪ ಕೇಂದ್ರ ಸಂಪೂರ್ಣ ದುಸ್ಥಿತಿಯಲ್ಲಿರುವುದರಿಂದ ಯಾವುದೇ ನರ್ಸ್ ಆ ಕಡೆ ತಿರುಗಿ ನೋಡದಂತಹ ಸನ್ನಿವೇಶ ಸೃಷ್ಠಿಯಾಗಿದೆ.
ಪ್ರಾಥಮಿಕ ಆರೋಗ್ಯದ ಕೇಂದ್ರದ ವೈದ್ಯರು ಪ್ರತಿ ದಿನ ಅಥವಾ ಎರಡು ಮೂರು ದಿನಗಳಿಗೊಮ್ಮೆ  ಪ್ರಾಥಮಿಕ ಆರೋಗ್ಯ ಉಪ ಕೇಂದ್ರಕ್ಕೆ ಭೇಟಿ ನೀಡಿ ಇಲ್ಲಿನ ರೋಗಿಗಳ ತಪಾಸಣೆ ಮಾಡುತ್ತಿದ್ದರು. ಈಗ ಆ ಸೌಲಭ್ಯ ಇಲ್ಲವಾಗಿದೆ.
ವೈದ್ಯರು ಹಿಂಡಸಕಟ್ಟೆ ಗ್ರಾಮಕ್ಕೆ ಬಂದಾಗ ಸ್ವಲ್ಪ ಹೊತ್ತು ಸಮುದಾಯ ಭವನದಲ್ಲಿದ್ದು ಆರೋಗ್ಯ ತಪಾಸಣೆ ಮಾಡಿ ಹೋಗುತ್ತಿದ್ದಾರೆ. ಆದರೆ ವೈದ್ಯರು ಕೂಡ ಸಕಾಲಕ್ಕೆ ಆಗಮಿಸದಿರುವ ಹಿನ್ನೆಲೆ ರೋಗಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಪ್ರಾಥಮಿಕ ಆರೋಗ್ಯ ಉಪಕೇಂದ್ರ ತೆರೆಯಲು ಗ್ರಾಮಸ್ಥರು ಹಲವು ಬಾರಿ ಆರೋಗ್ಯ ಇಲಾಖೆಯ ತಾಲೂಕು ವೈದ್ಯಾಧಿಕಾರಿಗಳಿಗೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಏನು ಪ್ರಯೋಜನವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಇತ್ತ ಗಮನ ನೀಡಿ ದುರಸ್ತಿ ಮಾಡಿಸಬೇಕು. ಜೊತೆಯಲ್ಲಿ ಕಾಯಂ ಆಗಿ ಓರ್ವ ನರ್ಸ್ ಒಬ್ಬರನ್ನು ನೇಮಕ ಮಾಡಿ ಗ್ರಾಮದಲ್ಲೇ ಉಳಿಯುವಂತೆ ಮಾಡಬೇಕು ಎನ್ನುವುದು ಗ್ರಾಮಸ್ಥರ ಕಳಕಳಿಯ ಮನವಿ ಆಗಿದೆ.
ಕಟ್ಟಡದ ದುಸ್ಥಿತಿ-

ಚಿಕಿತ್ಸೆ ದೊರೆಯಲಿ ಎಂಬ ಕಾರಣಕ್ಕಾಗಿ ಆರೋಗ್ಯ ಉಪ ಕೇಂದ್ರ ನಿರ್ಮಿಸಲಾಗಿತ್ತು. ಆದರೆ ಸಮರ್ಪಕ ನಿರ್ವಹಣೆ ಇಲ್ಲದ ಹಿನ್ನೆಲೆ ಆಸ್ಪತ್ರೆಯ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಆರೋಗ್ಯ ಉಪ ಕೇಂದ್ರದ ಆವರಣದಲ್ಲಿರುವ ಕಟ್ಟಡದ ಒಳಗೆ ಹೋಗುವುದಕ್ಕೂ ಕೂಡ ಜನತೆ ಹೆದರುವಂತಹ ಪರಿಸ್ಥಿತಿ ಉದ್ಬವಿಸಿದೆ.

ಹಿಂಡಸಕಟ್ಟೆ ಗ್ರಾಮದಲ್ಲಿ ಪಾಳು ಬಿದ್ದಿರುವ ಆರೋಗ್ಯ ಉಪ ಕೇಂದ್ರ ಮತ್ತು ವಸತಿ ಗೃಹಕ್ಕೆ ಮರುಜೀವ ನೀಡಲು ತಾಲೂಕು ಮತ್ತು ಜಿಲ್ಲಾಡಳಿತ ಮುಂದಾಗಬೇಕಾಗಿದೆ.

ಡಿಹೆಚ್ಒ, ಟಿಹೆಚ್ಒ ಅವರು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪ ಕೇಂದ್ರಗಳಿಗೆ ಕಾಲ ಕಾಲಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡಬೇಕಿತ್ತು. ಆದರೆ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕುಗ್ರಾಮ ಆರೋಗ್ಯ ಸೇವೆಯಿಂದ ವಂಚಿತವಾಗಿದೆ. ನಗರ ಪ್ರದೇಶದಿಂದ 15-20 ಕಿಲೋ ಮೀಟರ್ ದೂರದಲ್ಲಿರುವ ಹಿಂಡಸಕಟ್ಟೆ ಸೇರಿದಂತೆ ಸುತ್ತ ಮುತ್ತಲ ಹತ್ತಾರು ಹಳ್ಳಿಗಳು ಕೇವಲ ಆರೋಗ್ಯ ಸೇವೆಯಿಂದ ಮಾತ್ರ ವಂಚಿತವಾಗಿಲ್ಲ, ಗ್ರಾಮೀಣ ಸಾರಿಗೆ ಸೌಲಭ್ಯದಿಂದಲೂ ವಂಚಿತವಾಗಿದ್ದು ಒಂದೇ ಒಂದು ಬಸ್ ಸಂಚಾರದ ವ್ಯವಸ್ಥೆ ಇಲ್ಲವಾಗಿದೆ. ಕುಗ್ರಾಮದಲ್ಲಿ ರಾತ್ರಿ ಸಮಯದಲ್ಲಿ ಜನರಿಗೆ ಹುಷಾರಿಲ್ಲ ಎಂದಾದರೆ, ಆರೋಗ್ಯ ಸಮಸ್ಯೆ ಕಾಡಿದರೆ ನಗರಕ್ಕೆ ಬರಬೇಕಾದರೆ ನೂರಾರು ರೂ.ಗಳ ಖರ್ಚು ಆಗಲಿದೆ. ಸಾರಿಗೆ ವ್ಯವಸ್ಥೆ ಬೇರೆ ಇಲ್ಲ. ಹಾಗಾಗಿ ಕೂಡಲೇ ಪಾಳು ಬಿದ್ದಿರುವ ವಸತಿ ಗೃಹ ಮತ್ತು ಆಸ್ಪತ್ರೆ ಕಟ್ಟಡ ದುರಸ್ತಿ ಮಾಡಿಸಿ ರಾತ್ರಿ ಸಮಯದಲ್ಲಿ ನರ್ಸ್ ಅಲ್ಲೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರ ಸಮಸ್ಯೆ ಕೇಳಿ ಸಮಸ್ಯೆ ನಿವಾರಣೆ ಮಾಡುವಂತೆ ದೂರವಾಣಿ ಮೂಲಕ ಆರೋಗ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ, ಹಾಗೂ ಚಿತ್ರದುರ್ಗ ಡಿಎಚ್ಓ ರವರಿಗೆ ಸೂಚನೆ ನೀಡಿದ್ದರು. ಆದರೆ ಯಾವುದೇ ಕ್ರಮ ವಹಿಸಿಲ್ಲದಿರುವುದು ಈ ಭಾಗದ ಜನರ ದೌರ್ಭಾಗ್ಯವಾಗಿದೆ.

ಆರೋಗ್ಯ ಉಪ ಕೇಂದ್ರ ನಿತ್ಯ ತೆರೆದು ವೈದ್ಯಕೀಯ ಸೇವೆ ನೀಡಿದ್ದರೆ  ಸುತ್ತ ಮುತ್ತಲ ಬಡವರಿಗೆ ತುಂಬಾ ಅನುಕೂಲವಾಗುತಿತ್ತು ಇದನ್ನ ಅರಿಯದ ಅಧಿಕಾರಿಗಳ ನಿರ್ಲಕ್ಷ್ಯೆ, ಹೊಣಗೇಡಿ ತನದ ವರ್ತನೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಹಿಂಡಸಕಟ್ಟೆ ಗ್ರಾಮದ ಆರೋಗ್ಯ ಉಪ ಕೇಂದ್ರ ಪಾಳು ಬಿದ್ದಿದ್ದು ಕೂಡಲೇ ನವೀಕರಣಗೊಳಿಸಿ ಬಡ ಜನರಿಗೆ ಅನುಕೂಲವಾಗುವಂತೆ ಮಾಡಬೇಕು. ವಸತಿ ಗೃಹದಲ್ಲಿ ನರ್ಸ್ ಉಳಿದುಕೊಳ್ಳಬೇಕು. ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಬೇಗ ರಿಪೇರಿ ಮಾಡಿಸಬೇಕು, ಆರೋಗ್ಯ ಇಲಾಖೆ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ವಹಿಸಬೇಕು”. ರಾಮಕೃಷ್ಣಪ್ಪ, ನಿವಾಸಿ, ಹಿಂಡಸಕಟ್ಟೆ, ಹಿರಿಯೂರು ತಾಲೂಕು.

 

 

- Advertisement -  - Advertisement - 
Share This Article
error: Content is protected !!
";