ಯುದ್ಧ ಬೇಕೆ ಯುದ್ಧ….. ನಗು ಅಥವಾ ದು:ಖ…

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:

ಯುದ್ಧ ಬೇಕೆ ಯುದ್ಧ…..

ನಗು ಅಥವಾ ದು:ಖ…

ಮನೆ ಅಥವಾ ಸ್ಮಶಾನ….

ಹೂವು ಅಥವಾ ಬಂದೂಕು…

ಶಾಂತಿ ಅಥವಾ ಸರ್ವನಾಶ…..

ನಮ್ಮ ಆಯ್ಕೆ ಯಾವುದು……

ವಿಶ್ವ ಈಗಾಗಲೇ ಕಂಡಿರುವ ಎರಡು ಬೃಹತ್ ಯುದ್ಧಗಳೆಂದರೆ ಮೊದಲನೇ ಮಹಾಯುದ್ಧ ಮತ್ತು ಎರಡನೇ ಮಹಾಯುದ್ಧ.

1914 ಮತ್ತು 18ರ ನಡುವಿನ ಮೊದಲ ಮಹಾಯುದ್ಧ ಮತ್ತು 1939 ರಿಂದ 1945 ರವರೆಗಿನ ಎರಡನೇ ಮಹಾಯುದ್ಧ. ತದನಂತರ ಎರಡು ದೇಶಗಳ ನಡುವೆ ಸಾಕಷ್ಟು ಯುದ್ಧ ನಡೆದಿದೆ ಮತ್ತು ನಡೆಯುತ್ತಿದೆಯಾದರು ಇದೀಗ ಮೂರನೇ ಮಹಾಯುದ್ಧದ ಸಾಧ್ಯತೆ ಮತ್ತೆ ಗೋಚರಿಸುತ್ತಿದೆ..

ಮೊದಲ ಎರಡು ಮಹಾ ಯುದ್ಧಗಳು ವಿಸ್ತರಣವಾದ, ರಾಷ್ಟ್ರೀಯತೆ, ಸಂಪನ್ಮೂಲಗಳ ಕ್ರೂಡೀಕರಣ, ದುರಹಂಕಾರದ ಕಾರಣದಿಂದ ನಡೆದಿದ್ದರೆ, ಈಗಿನ ಯುದ್ಧ ಪ್ರದೇಶಗಳ ಹಿಡಿತ ಮತ್ತು ಧಾರ್ಮಿಕ ಕಾರಣಕ್ಕಾಗಿ ನಡೆಯುವ ಸಾಧ್ಯತೆ ಕಾಣುತ್ತಿದೆ…..

ಮುಖ್ಯವಾಗಿ ಈ ಕ್ಷಣದಲ್ಲಿ ರಕ್ಷಣಾತ್ಮಕ ಮತ್ತು ಸೈನಿಕ ಸಾಮರ್ಥ್ಯದ ದೃಷ್ಟಿಯಿಂದ ಅತ್ಯಂತ ಶಕ್ತಿಶಾಲಿಯಾಗಿ ಹೊರಹೊಮ್ಮಿರುವ ಇಸ್ರೇಲ್ ಯುದ್ಧದ ಎಲ್ಲಾ ನೀತಿ, ನಿಯಮ, ಸಂಯಮ ಎಲ್ಲವನ್ನೂ ಮೀರಿ ತನ್ನ ಶತ್ರುಗಳ ವಿರುದ್ಧ ಅತ್ಯಂತ ನಿರ್ದಾಕ್ಷಿಣ್ಯವಾಗಿ ಯುದ್ಧವನ್ನು ಮಾಡುತ್ತಿದೆ.

ಈ ಕ್ಷಣಕ್ಕೆ ಅದು ತಾನು ತನ್ನ ಎಲ್ಲಾ ಶತ್ರುಗಳನ್ನು ನಾಶ ಮಾಡಿ ಅವರಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಭಾವಿಸಿರಬಹುದು ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತಿರಬಹುದು. ಆದರೆ ವಿಶ್ವದ ಯುದ್ಧ ಇತಿಹಾಸವನ್ನು ಅಧ್ಯಯನ ಮಾಡಿ, ಆ ಯುದ್ಧದ ತಿರುವುಗಳನ್ನು ಗಮನಿಸಿದರೆ, ಖಂಡಿತವಾಗಲೂ ಯಾರೊಬ್ಬರೂ, ಎಷ್ಟೇ ಬಲಶಾಲಿಯಾದರು, ನಿರಂತರವಾಗಿ ತಮ್ಮ ಸಾಮರ್ಥ್ಯವನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ. ಶತ್ರುಗಳು ಒಂದಲ್ಲ ಒಂದು ರೂಪದಲ್ಲಿ ಬೇರೆ ಬೇರೆ ರೀತಿಯಲ್ಲಿ ಕಾಲವನ್ನು ಮೀರಿ ಮತ್ತೆ ಪ್ರತಿ ದಾಳಿ ಮಾಡುವ ಎಲ್ಲ ಸಾಧ್ಯತೆಯೂ ಇರುತ್ತದೆ.

ಅದರಲ್ಲೂ ಈಗಿನ ತಂತ್ರಜ್ಞಾನದ ಯುಗದಲ್ಲಿ, ಅಣುಬಾಂಬುಗಳ ಕಾಲದಲ್ಲಿ, ವೈರಸ್ ಗಳನ್ನು ಹರಡಿಸುವ ಸಾಧ್ಯತೆ ಇರುವಲ್ಲಿ ಯಾರೋ ಒಬ್ಬ, ಯಾವುದೋ ರೂಪದ, ಅತ್ಯಂತ ಮಾರಕವಾದ ತಂತ್ರಜ್ಞಾನವನ್ನು ರೂಪಿಸಿ, ಮುಂದೊಂದು ದಿನ ತನ್ನ ಶತ್ರುವಿನ ಮೇಲೆ ದಾಳಿ ಮಾಡಿ ಬಿಡಬಹುದು. ಆಗ ಯಾರೇ ಆಗಲಿ ಅದನ್ನು ನಿಯಂತ್ರಿಸಲಾಗದೆ ಸರ್ವನಾಶ ಹೊಂದುತ್ತಾರೆ.

ಇದು ವಿಶ್ವದ ಎಲ್ಲಾ ನಾಗರಿಕರಿಗೂ, ಎಲ್ಲ ದೇಶಗಳಿಗೂ, ಎಲ್ಲ ಧರ್ಮಗಳಿಗೂ ಸಮನಾಗಿ ಅನ್ವಯಿಸುತ್ತದೆ. ಯಾರು ಎಷ್ಟೇ ಬಲಿಷ್ಠವಾದರೂ ಆ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಬೇಕೆ ಹೊರತು ದುರುಪಯೋಗಪಡಿಸಿಕೊಳ್ಳಬಾರದು. ಎಲ್ಲಾ ಧರ್ಮಗಳ ದೈವಭಕ್ತರು ಗಮನಿಸಬೇಕಾದ ಅಂಶವೆಂದರೆ ದುಷ್ಟತನಕ್ಕೆ ಯಾವಾಗಲೂ ಸೋಲಾಗೇ ಆಗುತ್ತದೆ. ಜೊತೆಗೆ ನಮ್ಮ ಶಕ್ತಿಯನ್ನು ನಾವು ಲೋಕಹಿತಕ್ಕಾಗಿ ಬಳಸಿದಾಗ ಅದು ಉಜ್ವಲವಾಗುತ್ತದೆ ಮತ್ತು ಪ್ರಜ್ವಲವಾಗುತ್ತದೆ. ಅದನ್ನು ಲೋಕವಿನಾಶಕ್ಕಾಗಿ ಬಳಸಿದಾಗ ಮುಂದೊಂದು ದಿನ ಅದು ನಮ್ಮನ್ನೇ ಸರ್ವನಾಶ ಮಾಡುತ್ತದೆ.

ಇಲ್ಲಿ ಇಸ್ರೇಲ್ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕು ಅಥವಾ ಹಮಾಸ್ ಉಗ್ರರು ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕು ಎಂಬುದು ಮುಖ್ಯವಲ್ಲ. ಒಂದು ರೀತಿಯಲ್ಲಿ ಇಬ್ಬರು ಅಪರಾಧಿಗಳೇ. ಈಗ ಆಗಬೇಕಾಗಿರುವುದು ಹಿಂದಿನದೆಲ್ಲವನ್ನು ಮರೆತು ಹೊಸ ವಿಶ್ವಕ್ಕಾಗಿ, ಹೊಸ ಅಧ್ಯಾಯವನ್ನು, ಹೊಸ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಿರುವುದು. ಇಂದು ಎಲ್ಲರೂ ತಮ್ಮ ಹಠಮಾರಿ ಧೋರಣೆಯನ್ನು,, ಧಾರ್ಮಿಕ ಅಂಧತ್ವವನ್ನು ಮರೆತು, ಒಂದು ಪರಿಹಾರ ರೂಪದ ಕಾರ್ಯ ಯೋಜನೆಯನ್ನು ಕಂಡುಕೊಳ್ಳಬೇಕಿದೆ…..

ಈ ಯುದ್ಧದಿಂದ ಈಗಾಗಲೇ 50,000ಕ್ಕೂ ಹೆಚ್ಚು ಅಮಾಯಕರು ಬಲಿಯಾಗಿದ್ದಾರೆ. ಲಕ್ಷಾಂತರ ಜನರು ನಿರ್ವಸಿತರಾಗಿದ್ದಾರೆ ಮತ್ತು ವಲಸೆ ಹೋಗಿದ್ದಾರೆ.
ಅವರು ಯಾವ ಧರ್ಮದವರು, ಯಾವ ದೇಶದವರು ಎಂಬುದು ಮುಖ್ಯವಲ್ಲ. ನಮ್ಮದೇ ರೀತಿಯ ಮನುಷ್ಯ ಪ್ರಾಣಿಗಳು ಎಂಬುದು ಮುಖ್ಯ….

ಸಾಮಾನ್ಯ ಜನರು ಕೂಡ ಇಲ್ಲಿ ಯೋಚಿಸಬೇಕಾದ ವಿಷಯವಿದೆ. ಯುದ್ಧ ನಡೆದಾಗ ನಮ್ಮ ದೇಶಕ್ಕೆ ಜಯವಾಗುತ್ತದೆ ಎಂದು ಯುದ್ಧವನ್ನು ಬೆಂಬಲಿಸುವ ಮೂರ್ಖತನ ಮತ್ತು ಅಮಾನವೀಯ ನಡೆಗಳನ್ನು ಸಾಮಾನ್ಯ ಜನ ಪ್ರದರ್ಶಿಸಬಾರದು ಮತ್ತು ಸಹಿಸಿಕೊಳ್ಳಬಾರದು. ಯುದ್ಧದ ಸಾಧ್ಯತೆ ಕಂಡು ಬಂದ ತಕ್ಷಣ ಅಲ್ಲಿನ ಸಾಮಾನ್ಯ ಜನ ತನ್ನದೇ ದೇಶದ ಸರ್ಕಾರಗಳ ವಿರುದ್ಧ ಧ್ವನಿ ಎತ್ತಬೇಕು. ಯಾವ ಕಾರಣಕ್ಕೂ ಯುದ್ಧವಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರೇ ಪ್ರತಿಭಟನೆಗಳನ್ನು ಮಾಡಬೇಕು. ಎರಡೂ ಕಡೆಯ ಪ್ರಜೆಗಳು ಈ ರೀತಿ ಶಾಂತಿಯ ಕೂಗನ್ನು ದೊಡ್ಡ ಧ್ವನಿಯಲ್ಲಿ ಮೊಳಗಿಸಿದರೆ ಖಂಡಿತವಾಗಲೂ ಯುದ್ಧಗಳು ನಡೆಯುವ ಸಾಧ್ಯತೆ ತುಂಬಾ ಕಡಿಮೆ.

ಸಾರ್ವಜನಿಕರೇ ಮನಸ್ಸಿನಲ್ಲಿ ಯುದ್ದೋತ್ಸಾಹಿಗಳಾದರೆ ಅದರ ದುಷ್ಪರಿಣಾಮ ಸಾರ್ವಜನಿಕರೇ ಎದುರಿಸಬೇಕು. ಏಕೆಂದರೆ ಯುದ್ಧದಲ್ಲಿ ಯಾವ ರಾಜಕಾರಣಿಗಳು, ಯಾವ ಪತ್ರಕರ್ತರು, ಯಾವ ಧಾರ್ಮಿಕ ಮುಖಂಡರು ಹೋರಾಡುವುದಿಲ್ಲ. ಸಾಮಾನ್ಯ ಜನರ ಕರುಳ ಬಳ್ಳಿಗಳಾದ ಬಲಿಷ್ಠ ಯೋಧರೇ ಈ ಯುದ್ಧದಲ್ಲಿ ಭಾಗವಹಿಸುವುದು ಮತ್ತು ಅದೇ ಯೋಧರೆ ಇನ್ನೊಂದು ದೇಶದ ಅಮಾಯಕ ಜನರನ್ನು ಕೊಲ್ಲುವುದು. ಯುದ್ಧವೆಂಬುದು ಸಂಬಂಧವೇ ಇಲ್ಲದ ಮುಗ್ಧ ಜನರ ರಕ್ತದೊಕುಳಿಯಾಟ.

ಆದ್ದರಿಂದ ಯಾವಾಗಲೂ ಯುದ್ಧದ ಸಾಧ್ಯತೆ, ಅದನ್ನು ತಡೆಗಟ್ಟಲು ಕ್ರಿಯಾಶೀಲ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಈ ಮಾಧ್ಯಮಗಳ ರೋಚಕ ಸುದ್ದಿಗಳಿಗೆ, ವಿವೇಚನೆ ಇಲ್ಲದ ಅಭಿಪ್ರಾಯಗಳಿಗೆ ಮಾನ್ಯತೆ ನೀಡಬಾರದು.

ಇನ್ನೊಬ್ಬರನ್ನು ಕೊಂದು ಗೆಲ್ಲುವುದು ಅದು ಯಾವ ಗೆಲುವು. ಅದು ನಿಮ್ಮ ದೇವರುಗಳಿಗೆ, ಧರ್ಮಕ್ಕೆ ಮಾಡುವ ಅಪಚಾರವಲ್ಲವೇ, ನಂಬಿಕೆ ದ್ರೋಹವಲ್ಲವೇ…

ಯುದ್ಧಗಳು ಚೆಲ್ಲುವುದು ರಕ್ತವನ್ನು,
ಯುದ್ಧಗಳು ನಿಲ್ಲಿಸುವುದು ಮನುಷ್ಯರ ಉಸಿರನ್ನು ,
ಯುದ್ಧಗಳು ಉಂಟುಮಾಡುವುದು ದುಃಖವನ್ನು,
ಯುದ್ಧಗಳು ಸೃಷ್ಟಿ ಮಾಡುವುದು ಅನಾಥರನ್ನು…..

ಆದರೆ ಅದೇ ಯುದ್ಧವಲ್ಲದ ಶಾಂತಿ ಪ್ರಕ್ರಿಯೆಯು ಸೃಷ್ಟಿ ಮಾಡುವುದು ಜೀವನದ ಘನತೆಯನ್ನು,
ಬದುಕಿನ ನೆಮ್ಮದಿಯನ್ನು, ಮನುಷ್ಯನ ಸಂತೋಷವನ್ನು,
ಅವನ ಮುಖದ ನಗುವನ್ನು……

ಈ ಆಯ್ಕೆ ಈಗ ನಮ್ಮ ಮುಂದಿದೆ…

ಕೆಲವು ಮತಾಂಧ ಮಾಧ್ಯಮಗಳು, ಧಾರ್ಮಿಕ ಮುಖಂಡರು, ಸಾಮಾನ್ಯ ವ್ಯಕ್ತಿಗಳು ಇಸ್ರೇಲ್ ನ ಶಕ್ತಿಯನ್ನು ಅದ್ಬುತವೆನ್ನುವಂತೆ ವರ್ಣಿಸಿ ಆತ್ಮ ವಂಚನೆ ಮಾಡಿಕೊಂಡು ತಮ್ಮ ಅಜ್ಞಾನದ ಪರಮಾವಧಿಯಲ್ಲಿ ತೇಲಿ ಮುಖವಾಡವನ್ನು ಕಳಚಿಕೊಂಡಿದ್ದಾರೆ. ಹಾಗೆಯೇ ಇನ್ನೊಂದಿಷ್ಟು ಜನ ಇಂದಲ್ಲ ನಾಳೆ ನಮ್ಮ ದೇವರು ಮತ್ತು ಧರ್ಮ ಇಸ್ರೇಲನ್ನು ಸಂಪೂರ್ಣ ನಾಶ ಮಾಡುತ್ತದೆ ನೋಡುತ್ತಿರಿ ಎಂದು ಮತ್ತೊಂದು ವಿಕೃತ ಮನಸ್ಥಿತಿಯಲ್ಲಿ ಇದ್ದಾರೆ.

ಆದರೆ ನಿಜವಾಗಲೂ ಮನುಷ್ಯರಾದವರು ಹಿಂದುವಾಗಲಿ, ಕ್ರಿಶ್ಚಿಯನ್ನರಾಗಲಿ, ಮುಸ್ಲಿಮರಾಗಲಿ, ಇಸ್ರೇಲ್ ನವರಾಗಲಿ, ಲೆಬನಾನ್ ನವರಾಗಲಿ, ಇರಾನ್ ನವರೇ ಆಗಿರಲಿ, ಯಾರೇ ಆಗಿರಲಿ, ಸಹಜ, ಸ್ವಾಭಾವಿಕ ಸಾವುಗಳನ್ನು ಹೊರತುಪಡಿಸಿ, ಅಪರಾಧಿಗಳ ಶಿಕ್ಷೆಯನ್ನು ಹೊರತುಪಡಿಸಿ, ಇತರ ಯಾವುದೇ ರೀತಿಯ ಹಿಂಸೆಯನ್ನು ನಾವು ಖಂಡಿತವಾಗಲೂ ಯೋಚಿಸಬಾರದು ಮತ್ತು ಆಶಿಸಬಾರದು. ಮನುಷ್ಯನ ನಿಜವಾದ ಜೀವಶಕ್ತಿ ಶಾಂತಿ ಮಾತ್ರ. ಅದನ್ನು ಈ ನಾಗರಿಕ ಸಮಾಜ ಅಳವಡಿಸಿಕೊಂಡರೆ ಉತ್ತಮ. ಇಲ್ಲದಿದ್ದರೆ ವಿನಾಶ ಖಂಡಿತ…..

ಏನಾದರಾಗಲಿ ಮೂರನೆಯ ವಿಶ್ವ ಯುದ್ಧ ನಮ್ಮ ಕಣ್ಣ ಮುಂದೆ, ನಮ್ಮ ಜೀವಿತಾವಧಿಯಲ್ಲಿ ನಡೆಯದಿರಲಿ ಎಂದು ಆಶಿಸುತ್ತಾ……
*********************
ಮೊನ್ನೆ ದಿನಾಂಕ 24/09/2024 ರ ಮಂಗಳವಾರ ಮಂಡ್ಯ ಜಿಲ್ಲೆಯ ನಾಗಮಂಗಲದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಮತ್ತು ಅಲ್ಲಿನ ಸರ್ಕಾರಿ ಐಟಿಐ ಕಾಲೇಜಿನ ಎರಡು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮಾನವೀಯ ಮೌಲ್ಯಗಳನ್ನು ಕುರಿತು ಮಾತನಾಡಿದೆನು…..
*********************
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ, ಲೇಖನ-ವಿವೇಕಾನಂದ. ಎಚ್. ಕೆ. 9844013068…….

- Advertisement -  - Advertisement - 
Share This Article
error: Content is protected !!
";