ಡಿಸಿಎಂ ಡಿಕೆಶಿ, ಗೃಹ ಸಚಿವ ಪರಮೇಶ್ವರ್ ಮಧ್ಯ ತೀವ್ರ ಪೈಪೋಟಿ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಮೂರು ಸ್ಥಳಗಳನ್ನು ಗುರುತಿಸಿ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಈಗಾಗಲೇ ರಾಜ್ಯ ಸರ್ಕಾರ ಸಲ್ಲಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ.
ಐಡೆಕ್ ಸಂಸ್ಥೆ ಅಧ್ಯಯನ ಮಾಡಿ ಸ್ಥಳ ಪರಿಶೀಲಿಸಿ ನೀಡಿದ ವರದಿ ಅನುಗುಣವಾಗಿ ಮೂರು ಸ್ಥಳಗಳ ಹೆಸರನ್ನು ಶಾರ್ಟ್‌ಲಿಸ್ಟ್‌ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.
ಬೆಂಗಳೂರು-ಕನಕಪುರ ರಸ್ತೆಯಲ್ಲಿ ಎರಡು ಸ್ಥಳಗಳನ್ನು ಗುರುತಿಸಲಾಗಿದೆ. ಹಾಗೂ ನೆಲಮಂಗಲ – ಕುಣಿಗಲ್‌ನಡುವೆ ಇರುವ ಸೋಲೂರು ಬಳಿ 2ನೇ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳ ಗುರುತು ಮಾಡಿ ಕೇಂದ್ರದ ನಾಗರಿಕರ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಐಡೆಕ್ ಸಂಸ್ಥೆಯು ತಾಂತ್ರಿಕ ಸಂಭಾವ್ಯತೆ, ರಸ್ತೆ ಸಂಪರ್ಕ, ಮೆಟ್ರೋ ಸೇರಿದಂತೆ ಎಲ್ಲಾ ರೀತಿಯ ಅಧ್ಯಯನ ನಡೆಸಿ ಈ ಮೂರು ಸ್ಥಳಗಳನ್ನು ಗುರುತಿಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು.
2ನೇ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಂಜೂರಾದರೆ ವರ್ಷಕ್ಕೆ 10 ಕೋಟಿ ಜನರನ್ನು ನಿರ್ವಹಿಸಲಿದೆ ಎಂದು ಅಂದಾಜಿಸಲಾಗಿದೆ. 2ನೇ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಮಾರು 4,500 ರಿಂದ 5,000 ಎಕರೆ ಭೂಮಿಯ ಅಗತ್ಯವಿದೆ.
ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಮದಟ್ಟಾದ ಭೂಮಿಯ ಅವಶ್ಯಕತೆ ಇದೆ. ಸರ್ಕಾರದ ಭೂಮಿ ಹೆಚ್ಚಿರೋ ಕಡೆ ಏರ್‌ಪೋರ್ಟ್‌ನಿರ್ಮಿಸಿದರೆ ನಿರ್ಮಾಣ ವೆಚ್ಚ ಕಡಿಮೆಯಾಗಲಿದೆ. ಸ್ಥಳ ಫೈನಲ್‌ಮಾಡುವ ವೇಳೆ ಸರ್ಕಾರ ಇದನ್ನು ಪ್ರಮುಖವಾಗಿ ಗಮನಕ್ಕೆ ತೆಗೆದುಕೊಂಡಿದೆ ಎನ್ನಲಾಗಿದೆ.
ಈಗಾಗಲೇ ಗುರುತಿಸಿರುವ ಮೂರು ಸ್ಥಳಗಳನ್ನು ಶಾರ್ಟ್‌ಲಿಸ್ಟ್‌ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.
ಕಳೆದ ಮೂರ್ನಾಲ್ಕು ತಿಂಗಳಿಂದ ಚರ್ಚೆಯಾಗುತ್ತಿದ್ದರೂ ಇದೇ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ ಎನ್ನುವುದು ಅಂತಿಮವಾಗಿಲ್ಲ. ಡಿಸಿಎಂ ಡಿಕೆ ಶಿವಕುಮಾರ್‌ಸೇರಿ ಅನೇಕ ಪ್ರಭಾವಿಗಳು ಬೆಂಗಳೂರು ದಕ್ಷಿಣದಲ್ಲಿ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂದು ಪಟ್ಟು ಹಿಡಿದಿದ್ದರೆ, ಗೃಹ ಸಚಿವ ಜಿ ಪರಮೇಶ್ವರ್‌ಸೇರಿ ಹಲವರು ತುಮಕೂರು ಜಿಲ್ಲೆಯ ಸೋಲೂರು ಬಳಿ ವಿಮಾನ ನಿಲ್ದಾಣ ನಿರ್ಮಾಣ ಆಗಲಿ ಎಂದು ಹೇಳುತ್ತಿದ್ದಾರೆ.
ಈ ಹಿನ್ನೆಲೆ ಸರ್ಕಾರ ಎರಡು ಕಡೆ ಮೂರು ಸ್ಥಳಗಳಲ್ಲಿ ಅಗತ್ಯವಿರುವ ಭೂಮಿ ಗುರುತಿಸಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪಟ್ಟಿ ಕಳುಹಿಸಿದೆ. ಕನಕಪುರ ರಸ್ತೆಯಲ್ಲಿ ಎರಡು ಸ್ಥಳಗಳನ್ನು ಗುರುತಿಸಿರುವುದರಿಂದ ಬೆಂಗಳೂರು ದಕ್ಷಿಣದಲ್ಲಿಯೇ ವಿಮಾನ ನಿಲ್ದಾಣ ಆಗಲಿದೆ ಎನ್ನಲಾಗುತ್ತಿದೆ.
ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯನ್ನು ಕೇಂದ್ರ ಅವಲೋಕಿಸಲಿದೆ. ರಾಜ್ಯ ನಿಗದಿಪಡಿಸಿರುವ 3 ಸ್ಥಳಗಳಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಆ ಬಳಿಕ ಒಂದು ಜಾಗವನ್ನು ಅಂತಿಮಗೊಳಿಸಿ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಾಗುತ್ತದೆ ಎನ್ನಲಾಗಿದೆ.
ಸ್ಥಳ ಅಂತಿಮವಾದ ನಂತರ ರಾಜ್ಯ ಸರ್ಕಾರ, ವಿಮಾನ ನಿಲ್ದಾಣ ನಿರ್ಮಾಣದ ಕಾರ್ಯ ಸಾಧ್ಯತೆಗಳ ಮೌಲ್ಯಮಾಪನ ಮಾಡಲಿದೆ. ಸಂಪೂರ್ಣ ಅಧ್ಯಯನದ ಬಳಿಕ ಮುಖ್ಯಮಂತ್ರಿಗಳ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡ ಬಳಿಕ ವಿಮಾನ ನಿಲ್ದಾಣದ ನಿರ್ಮಾಣದ ಕಾಮಗಾರಿಗೆ ಚಾಲನೆ ಸಿಗಲಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿದ ನಂತರ ಇಂಥದ್ದೇ ಜಾಗ ಎಂದು ಅಂತಿಮ ಆಗಲಿದೆ. ಅಲ್ಲಿಯ ತನಕ ಊಹಾಪೋಹಗಳ ಸುದ್ದಿಗಳು ಹರಿದಾಡತ್ತಾ ಇರುತ್ತವೆ.