ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇತ್ತೀಚಿನ ದಿನಗಳಲ್ಲಿ ಆಳ ಅರ್ಥವಿರುವ ‘ಅನುಯಾಯಿ‘ ಅನ್ನುವ ಪದ ಬಹಳ ಸಂಕುಚಿತವಾದ ಅರ್ಥವನ್ನು ಪಡೆಯುತ್ತಿದೆ. ಇದಕೆ ಕಾರಣ ಅತಿಯಾದ ತಂತ್ರಜ್ಞಾನ ಬಳಕೆಯಿಂದ ಮಾನವನ ಮೆದುಳು ತುಕ್ಕು ಹಿಡಿಯತ್ತಿರುವುದೇ ಆಗಿದೆ! ಬಯಸಿದ್ದೆಲ್ಲವೂ ಕ್ಷಣಾರ್ಧದಲ್ಲಿ ನಮ್ಮ ಕೈ ಸೇರುವ ಈ ಅನಾಯಸದ ವ್ಯವಸ್ಥೆಗೆ ಮುಗುಳ್ನಗುತ್ತಾ ನಮ್ಮ ಸೃಜನಶೀಲ ಚೆಂತನೆಗಳಿಗೆ ಪೂರ್ಣವಿರಾಮವಿನಿಟ್ಟು ಆಲಸ್ಯವನ್ನ ನಮ್ಮ ಮೈಮನವೆಲ್ಲಾ ತುಂಬಿಕೊಂಡು ಅಜ್ಞಾನಕ್ಕೆ ಹತ್ತಿರವಾಗುತ್ತಿದ್ದೇವೆ! ಕ್ಷಣಕಾಲ ಕಣ್ಮುಚ್ಚಿ ಶಾಂತವಾಗಿ ಯೋಚಿಸಿ ನೋಡಿ..
ಬುದ್ದನ ಅನುಯಾಯಿಯೆಂದರೆನಮ್ಮೊಳಗೆ ‘ಪ್ರೇಮ‘, ಪ್ರವಾದಿಯವರ ಅನುಯಾಯಿಯೆಂದರೆ ನಾವಿಡುವ ಪ್ರತಿ ಹೆಜ್ಜೆಯಲೂ ‘ಮಾನವೀಯತೆ‘, ಬಸವಣ್ಣನವರ ಅನುಯಾಯಿಯೆಂದರೆಮೈಮನವೆಲ್ಲಾ ‘ಸಮಾನತೆ‘ ತುಂಬಿ ತುಳುಕಾಡಬೇಕು. ಅದೇ ರೀತಿ ನಾವು ಅಂಬೇಡ್ಕರ್ ಅವರ ಅನುಯಾಯಿಗಳು ಎಂದು ಹೇಳಬೇಕಾದರೆನಮ್ಮೊಳಗೆ ಅಪಾರ ಜ್ಞಾನ,ತಿಳುವಳಿಕೆ ವೈಚಾರಿಕತೆ, ವೈಜ್ಞಾನಿಕತೆ,ಭಾವೈಕ್ಯತೆಗಳೆಲ್ಲವೂ ತುಂಬಿ ತುಳಕಬೇಕು. ಆ ಎಲ್ಲಾಗುಣಗಳು ನಮ್ಮೊಳಗೆ ಬರಬೇಕಾದರೆ,ಬಾಬಾ ಸಾಹೇಬರು ನಡೆದ ಶಿಕ್ಷಣದ ಹಾದಿಯಲ್ಲಿ ನಾವು ಸಾಗಬೇಕು! ರವಿ ಮಾಹೆ.ಜಿ ಅವರು ಅಂಬೇಡ್ಕರ್ ವಾದವನ್ನು ‘ಹೊಸ ಜನ್ಮ‘ ಎಂದು ವ್ಯಾಖ್ಯಾನಿಸುತ್ತಾರೆ. ಮಾನಸಿಕ ಬಂಧನಗಳು ಮತ್ತು ಜಾತಿಯ ಗುಲಾಮಗಿರಿಯಿಂದ ಮುಕ್ತರಾದವರು ಅಂಬೇಡ್ಕರ್ ವಾದಿಗಳು ಎಂದು ನಾನು ಭಾವಿಸುತ್ತೇನೆ. ಜಾತಿ, ಧರ್ಮ, ಭಾಷೆ ಅಥವಾ ಪ್ರದೇಶವನ್ನು ಲೆಕ್ಕಿಸದೆ ಜಾತಿ ವಿರೋಧಿ ಚಳುವಳಿಯ ಬಗ್ಗೆ ಜಾಗೃತಿ ಮೂಡಿಸುತ್ತಾ ಜ್ಞಾನ ಮಾರ್ಗದಲ್ಲಿ ನಡೆಯುವವರು ಅಂಬೇಡ್ಕರ್ ವಾದಿಗಳು” ಎಂದು ಹೇಳುತ್ತಾರೆ.
ಇತಿಹಾಸವನ್ನ ಕೊಂಚ ಮೆಲುಕು ಹಾಕೋಣಾ:
ಭಾರತದ ಸಂವಿಧಾನ ಶಿಲ್ಪಿಗಳಾದ ಡಾ| ಬಿ.ಆರ್ ಅಂಬೇಡ್ಕರ್ ಅವರು ತುಳಿತಕ್ಕೆ ಒಳಗಾಗಿದ್ದವರ ದನಿಯಾಗಿ ಅಂತಹ ಜನರ ಹಿತ ಕಾಪಾಡಲು ಹೋರಾಟ ನಡೆಸಿದ ಮಹಾನ್ ಚೇತನವಾಗಿದ್ದಾರೆ. ಅಷ್ಟೇಯಲ್ಲ, ಈ ದೇಶದ ಸಮಗ್ರ ಅಭಿವೃದ್ಧಿಯ ಕನಸನ್ನು ಕಂಡ ಅವರಿಗೆ ಸ್ವಾತಂತ್ರ್ಯೋತ್ತರ ಭಾರತದ ನಿರ್ಮಾತೃಗಳ ಸಾಲಿನಲ್ಲಿ ಅತೀ ಮುಖ್ಯವಾದ ಸ್ಥಾನವಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಏಕೆಂದರೆ, ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಸಮಾನತೆಯ ಪ್ರತಿಪಾದಕರಾಗಿ ಕಾನೂನು ತಜ್ಞರಾಗಿ,ದಾರ್ಶನಿಕರಾಗಿ ದೇಶ ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಪಡೆದ ಅವರು ಎಲ್ಲಾ ದುರ್ಬಲ ವರ್ಗಗಳಿಗೂ ಪ್ರೇರಣೆಯನ್ನು ನೀಡುವ ಬೆಳಕಾಗಿ ನಿಂತಿದ್ದಾರೆ. ದೇಶದಲ್ಲಿ ಸಮಗ್ರತೆ ಸಮಾನತೆ ಅಂತಹ ಆದರ್ಶಗಳನ್ನು ಕಾಪಿಟ್ಟುಕೊಳ್ಳುವಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಅವರ ಬದುಕೇ ನಮಗೊಂದು ಕೈಗನ್ನಡಿಯಂತಿದೆ.

ಸಾಮಾಜಿಕ ಭೇದಭಾವಕ್ಕೊಳಗಾಗಿ ನರಳುತ್ತಿದ್ದ ಬಡ ಕುಟುಂಬದಲ್ಲಿ ಹುಟ್ಟಿದ ಅವರು ತಮ್ಮ ಇಡೀ ಜೀವಮಾನವನ್ನು ಈ ಸಮಾಜದ ಎಲ್ಲ ಪಿಡುಗುಗಳಿಗೂ ಕಾರಣವಾಗಿರುವ ಜಾತಿ ಪದ್ಧತಿಯ ವಿರುದ್ಧ ಹೋರಾಡುವ ಮೂಲಕ ಇಂದಿನ ನಮ್ಮ ಹಸನಾದ ಬದುಕಿಗೆ ಭದ್ರ ಬುನಾದಿ ಹಾಕಿಕೊಟ್ಟರು, ಶಿಕ್ಷಣ ಎಂಬ ಮಹಾಕ್ರಾಂತಿಯ ಮಾಡಿ ನಮಗೆಲ್ಲಾ ಬೆಳಕ ತೋರುವ ದೀವಿಗೆಯಾಗಿ ಇತಿಹಾಸವನ್ನೇ ಸೃಷ್ಟಿಸಿದರು. ಸಾಮಾಜಿಕ ಆರ್ಥಿಕ ಸಂಕಷ್ಟಗಳನ್ನು ಮೀರಿ ನಿಂತು ಅನೇಕ ಪ್ರಥಮಗಳನ್ನು ಅವರು ಸಾಧಿಸಿದರು. ಕಾಲೇಜು ಶಿಕ್ಷಣವನ್ನು ಪಡೆದ ಮೊದಲ ಅಸಪೃಶ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಶಿಕ್ಷಣ ಉಳ್ಳವರ ಮೆಲ್ವರ್ಗದವರ ಸ್ವತ್ತಲ್ಲ ಎಂಬುದನ್ನ ಇಡೀ ಜಗತ್ತಿಗೆ ಸಾರಿದರು. ನ್ಯಾಯಶಾಸ್ತ್ರ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಸಂಬಂಧವಾದ ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಕೊಲಂಬಿಯಾದಂತ ವಿಶ್ವವಿದ್ಯಾಲಯದಿಂದ ಲಂಡನಿನ ಅರ್ಥಶಾಸ್ತ್ರ ಶಾಲೆಯಿಂದ ಡಾಕ್ಟರೇಟ್ ಪದವಿಗಳನ್ನು ಪಡೆದ ಮಹನೀಯರಲ್ಲಿ ಒಬ್ಬರಾಗುವ ಮೂಲಕ ಶ್ರದ್ಧೆಯಿಂದ ಓದಿದರೆ ಉನ್ನತ ಸ್ಥಾನಮಾನಗಳು ಜಾತಿ,ಧರ್ಮ ಮೇಲು ಕೀಳು ನೋಡದೆ ನಮ್ಮಮುಡಿಗೇರುತ್ತವೆ ಎಂಬುದನ್ನ ಸಾಧಿಸಿ ತೋರಿಸಿದರು.
ಹೀಗೆ ಶ್ರೇಷ್ಠ ವಿದ್ವಾಂಸರಾಗಿ ಭಾರತಕ್ಕೆ ಹಿಂದಿರುಗಿ ಬಂದವರು ಸಮಾಜದ ಕೆಲ ವರ್ಗಗಳ ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ರಾಜಕೀಯ ಹಕ್ಕುಗಳಿಗಾಗಿ ಅಹರ್ನಿಶಿ ಹೋರಾಟ ಮಾಡಿದರು. ಇಂತಹ ಮಹಾಚೇತನದ ಅನುಯಾಯಿಗಳು ನಾವಾಗಬೇಕಾದರೆ ನಾವು ಅವರಂತೆ ಜ್ಞಾನ ಮಾರ್ಗದಲಿ ಸಾಗಬೇಕಲ್ಲವೇ? ಅನಾದಿ ಕಾಲದಿಂದ ಬಂದ ಅರ್ಥಹೀನ ಶೋಷಣೆಯಿಂದ ನಾವು ಆಚೆ ಬರಬೇಕಾದರೆ ಶಿಕ್ಷಣವೊಂದೇ ದೊಡ್ಡ ಅಸ್ತೃ! ಅದನ್ನ ಗಳಿಸಿ ನಮ್ಮ ಬದುಕಿನ ಬತ್ತಳಿಕೆಗೆ ಸೇರಿಸಿ,ಸಕಾಲಕ್ಕೆ ಆ ಅಸ್ತ್ರದ ಪ್ರಯೋಗ ಮಾಡಿ ಯಶಸ್ಸು ಸಾಧಿಸದಾಗ ಮಾತ್ರ ನಾವು ಬಾಬಾಸಾಹೇಬರ ಅನುಯಾಯಿಗಳಾಗಲು ಸಾಧ್ಯ ಎಂಬುದನ್ನ ನಾವು ಅರ್ಥಮಾಡಿಕೊಳ್ಳಬೇಕು.
ಆತ್ಮಾವಲೋಕನದ ಸಮಯ:
ಈಗ ನಮ್ಮನ್ನೆ ನಾವು ಆತ್ಮಾವಲೋಕನ ಮಾಡಿಕೊಳ್ಳೋಣಾ. ನಮ್ಮ ಮನೆಯಲ್ಲಿ ಎಷ್ಟು ಮಂದಿ ಇದ್ದೇವೆ, ಅವರಲ್ಲಿ ಎಷ್ಟು ಜನ ಸುಶಿಕ್ಷಿತರಾಗಿ ತಮ್ಮ ಕಾಲಮೇಲೆ ತಾವು ನಿಂತುಕೊಂಡಿದ್ದಾರೆ? ಮಹಿಳೆಯರ ಶಿಕ್ಷಣಕ್ಕೆ ಎಷ್ಟು ಒತ್ತು ಕೊಟ್ಟಿದ್ದೇವೆ? ನಮ್ಮ ಮನೆಯ ಮಗಳು ಸ್ವಾಲಂಬಿಯಾಗಿ ಸುಶಿಕ್ಷಿತಳಾಗಿ ಜೀವನ ನಡೆಸುತಿದ್ದಾಳಾ? ಪದವಿಧರರ ಸಂಖ್ಯೆ ಎಷ್ಟಿದೆ? ಕೆಎಎಸ್,ಐಎಎಸ್ ಎಷ್ಟು ಮಂದಿ ಪಾಸಾಗಿದ್ದಾರೆ? ಶಿಕ್ಷಣ ಪಡೆದು ಉನ್ನತ ಕೆಲಸ ಗಿಟ್ಟಿಸಿಕೊಂಡು ಅಂತರ್ಜಾತಿ ವಿವಾಹವಾಗಿ ಸಮಾನತೆಯ ಮೆಟ್ಟಿಲು ಹತ್ತಿ ಇತರರಿಗೆ ಮಾದರಿಯಾದವರು ಎಷ್ಟು ಮಂದಿ ಇದ್ದಾರೆ? ಹೀಗೆ ಯೋಚಿಸಿ ನೋಡಿದರೆ ನಾವು ಬಾಬಾ ಸಾಹೇಬರು ಹಾಕಿಕೊಟ್ಟ ಹಸನಾದ ಜ್ಞಾನ ಮಾರ್ಗದಲಿ ನಡೆಯುತಿದ್ದೇವಾ,ಇಲ್ಲವಾ ಎಂದು ನಮಗೆ ಸ್ಪಷ್ಟವಾಗಿಬಿಡುತ್ತದೆ!.
ಶಿಕ್ಷಣ ಮೊಟಕುಗೊಳಿಸದಂತೆ ನಾವೇನು ಮಾಡಬೇಕು:
೧) ಹದಿಹರೆಯದಲ್ಲಾಗುವ ವಯೋಸಹಜ ಆಕರ್ಷಣೆಗೆ ಒಳಗಾಗಬಾರದು: ಇತ್ತೀಚಿನ ದಿನಗಳಲ್ಲಿ ಮದುವೆಯ ವಯಸ್ಸಿಗೆ ಬರುವ ಮೊದಲೇ ಪರಸ್ಪರ ಆಕರ್ಷಣೆಗೆ ಒಳಗಾಗಿ ಮನೆಯವರ ಒಪ್ಪಿಗೆಯಿಲ್ಲದೆ ಮದುವೆಯಾಗಿ ಸಂಕಷ್ಟಕ್ಕೆ ಸಿಲುಕಿ ನಲುಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತಿದ್ದು, ಅದು ಪ್ರತಿನಿತ್ಯದ ಖಾಯಂ ಸುದ್ದಿಯಾಗಿಬಿಟ್ಟಿದೆ! ಇದರ ಪರಿಣಾಮವಾಗಿ ಹೃದಯ ವಿದ್ರಾವಕಗೊಳಿಸುವ ಮರ್ಯಾದಾಹತ್ಯೆಗಳು ಬೇರೆ ಸಂಭವಿಸುತ್ತಿವೆ! (ಹೆತ್ತಪ್ಪನಿಂದಲೆ ಮಗಳ ಕೊಲೆ,ಹುಬ್ಬಳ್ಳಿ,ಮೈಸೂರು) ಒಂದು ವೇಳೆ ಆ ಜೋಡಿಗಳು ಉನ್ನತ ಶಿಕ್ಷಣ ಮುಗಿಸಿ ನೌಕರಿ ಪಡೆದುಕೊಂಡು ಸ್ವಾವಲಂಬಿಗಳಾಗಿದ್ದರೆ ಇಂತಹ ಮರ್ಯಾದಾಹತ್ಯೆಗಳು ನಡೆಯುತ್ತಿರಲಿಲ್ಲ ಅಲ್ಲವೇ? ಏಕೆಂದರೆ ಕೀಳು ಜಾತಿಯೆಂಬ ಭಾವನೆಯನ್ನ ಅಳಿಸಿ ಹಾಕುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ. ಅದನ್ನರಿತು ಶಿಕ್ಷಣ ಪೂರ್ಣಗಿಳಿಸುವ ಕಡೆ ನಾವು ಏಕಾಗ್ರತೆ ವಹಿಸಬೇಕು. ಎಲ್ಲಾ ಸೆಟಲ್ ಆದ ಮೇಲೆ ಪ್ರೇಮ & ಮದುವೆ ಎರಡೂ ಸುಗಮವಾಗಿ ಬಿಡುತ್ತವೆ. ಯಾರ ವಿರೋಧವೂ ಇರುವುದಿಲ್ಲ, ಜಾತಿಯ ವಿವಾದವೂ ಸಹ! ಇದನ್ನ ಇಂದಿನ ಯುವಕ/ತಿಯರಿಗೆ ಮನದಟ್ಟು ಮಾಡಿಸಬೇಕು. ಇದಕ್ಕೆ ಪೂರಕವಾದ ವಾತಾವರಣವನ್ನು ಶಿಕ್ಷಕರು ಪೋಷಕರು & ಸಮಾಜ ನಿರ್ಮಾಣ ಮಾಡಿಕೊಡಬೇಕು. ಶಿಕ್ಷಣವೇ ಮೊದಲು ಎಂದು ಜಪ ಮಾಡುವಂತೆ ಸಿದ್ಧಗೊಳಿಸಬೇಕು. ಶಿಕ್ಷಣ ಮೊಟಕುಗೊಳಿಸಿ ಜೀವನ ಹಾಳು ಮಾಡಿಕೊಂಡವರ ಉದಾಹರಣೆ ನೀಡಿ ಆ ತಪ್ಪು ಇವರಿಂದ ಆಗದಂತೆ ಜಾಗೃತಿ ಮೂಡಿಸಬೇಕು.
೨) ‘ಮಗಳೆಂಬ ಭಾರ ಇಳಿಯುವುದು ಮದುವೆಯಿಂದ‘ ಎಂಬ ದುರಾಲೋಚನೆಯಿಂದ ದೂರವಿರಬೇಕು:
ಅದೆಷ್ಟೋ ಪೋಷಕರು ಮಗಳು ಋತುಮತಿಯಾದರೆ ಸಾಕು, ಅಂದಿನಿಂದಲೇ ಆಕೆಯನ್ನು ಮಮತೆಯ ಮಗಳಾಗಿ ನೋಡುವ ಬದಲು ಜವಾಬ್ದಾರಿ,ರಕ್ಷಣೆ ಎಂಬ ಹೆಸರಲಿ ಇಲ್ಲಸಲ್ಲದ ನಿರ್ಬಂಧಗಳನ್ನ ಹೇರಿ ಅಸಹಜವಾಗಿ ಬದುಕುವಂತೆ ಮಾಡಿಬಿಡುತ್ತಾರೆ. ಮಗಳ ಬದುಕ ಬಗ್ಗೆ ಚಿಂತನೆ ನಡೆಸುವ ಬದಲು ಚಿಂತೆ ಮಾಡಿ,ಶಿಕ್ಷಣ ಮೊಟಕುಗೊಳಿಸಿ ಅವಸರದಲಿ ಗಂಡು ಹುಡುಕಿ ಮದುವೆ ಮಾಡಿಯೇ ಬಿಡುತ್ತಾರೆ. ಇನ್ನೆಲ್ಲಿ ಬಾಬಾಸಾಹೇಬರ ಕನಸು ನನಸಾಗುವುದು? “ಒಂದು ಸಮುದಾಯದ ಪ್ರಗತಿಯನ್ನು ನಾನು ಆ ಸಮುದಾಯದ ಮಹಿಳೆಯರ ಪ್ರಗತಿಯಿಂದ ಅಳೆಯುತ್ತೇನೆ’ – ಎಂದು ೧೯೪೨ರಲ್ಲಿ ನಾಗಪುರದಲ್ಲಿ ಮಾಡಿದ ಭಾಷಣವೊಂದರಲ್ಲಿ ಅಂಬೇಡ್ಕರ್ ಅವರು ಹೇಳಿದ್ದರು. ಅವರು ಮಹಿಳೆಯರ ಶಿಕ್ಷಣಕ್ಕೆ ಎಷ್ಟು ಒತ್ತು ನೀಡಿದ್ದರು ಎಂಬುದು ಈ ಮಾತಿನಿಂದ ಅರ್ಥವಾಗುತ್ತದೆ. ತಾಯಿಯೆ ಮೊದಲ ಗುರುವಾದ್ದರಿಂದ ಆಕೆಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಶಿಕ್ಷಣ ಕೊಡಿಸಬೇಕು. ಯಾವುದೇ ಕಾರಣಕ್ಕೂ ಆಕೆಯ ಶಿಕ್ಷಣ ಮೊಟಕುಗೊಳಿಸಿದಂತೆ ಎಚ್ಚರ ವಹಿಸಬೇಕು. ಶಿಕ್ಷಣ ಪೂರೈಸಿದರೆ ಆಕೆಯ ಬದುಕು ಭದ್ರವಾಗುತ್ತದೆ ಎಂಬುದನ್ನ ಪೋಷಕರು ಅರ್ಥ ಮಾಡಿಕೊಂಡು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು. ಅವಸರಕ್ಕೆ ಮದುವೆ ಮಾಡಿ ಮಗಳ ಜೀವನ ಹಾಳು ಮಾಡುವ ಬದಲು ಶಿಕ್ಷಣ ಕೊಡಿಸಿ ಸ್ವಾಲಂಬಿಯಾಗಿ ಬದುಕುವಂತೆ ಪ್ರೇರೇಪಿಸಬೇಕು. ‘ಅಂಬೇಡ್ಕರ್ ವಾದಿಗಳೆಂದರೆ ಸ್ತ್ರೀ ವಾದಿಗಳು‘ ಎಂಬ ಮಾತಿನಂತೆ ಮಹಿಳೆಯ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು.
೩)ಆಡಂಬರದ ಅಭಿಮಾನದಿಂದ ದೂರವಿದ್ದು ಅರಿವಿಗೆ ಹತ್ತಿರವಾಗುವುದು: ‘ಅನುಯಾಯಿಗಳು‘ ಎಂಬ ಪದ ‘ಆಡಂಬರದ ಅಭಿಮಾನ‘ ಎಂಬ ಪರ್ಯಾಯ ಅರ್ಥ ಪಡೆದುಕೊಂಡಿದಿಯೇನೊ ಎಂಬಂತೆ ಇಂದಿನ ಯುವಕರು ವರ್ತಿಸುತಿದ್ದಾರೆ. ಬಣ್ಣ ಬಣ್ಣದ ಶಲ್ಯ ಹಾಕಿಕೊಂಡು ಡಿಜೆ ಹಾಕಿ ಕುಣಿದು ಕುಪ್ಪಳಿಸಿದರೆ ನಾನು ದೊಡ್ಡ ಅನುಯಾಯಿ ಎಂಬ ಅಂಧಾಭಿಮಾನದಲಿ ಮುಳುಗಿ ತಮಗರಿವಿಲ್ಲದೆ ತಮ್ಮ ಜೀವನವನ್ನ ಅಜ್ಞಾನದ ಕೂಪದಲ್ಲಿ ಬಿಳಿಸಿ ಮೇಲೆದ್ದಳಲಾಗದೆ ಒದ್ದಾಡುತಿದ್ದಾರೆ!.
ಅಬ್ಬರದ ಪ್ರಚಾರ ಹಾರ,ಶಾಲು,ಕುಣಿತ ಇವುಗಳಿಂದ ಹೊರ ಬಂದು ಅರಿವಿನ ಮೊರೆ ಹೋಗಬೇಕಿದೆ. ಬಾಬಾಸಾಹೇಬರು ಹೇಳಿದಂತೆ, ನಮ್ಮಲಿ ಎರಡು ರೂಪಾಯಿ ಇದ್ದರೆ, ಒಂದು ರೂಪಾಯಿ ಊಟಕೆ ಮತ್ತೊಂದು ರೂಪಾಯಿ ಶಿಕ್ಷಣಕೆ ಮೀಸಲಿಡಿ ಎಂಬ ಮಾತನ್ನ ಅರಿತು ಅದರಂತೆ ಯುವಕರು ಶಿಕ್ಷಣ ಮೊಟಕುಗೊಳಿಸದಂತೆ ಜಾಗೃತಿ ಮೂಡಿಸಬೇಕಿದೆ. ಅದರೊಟ್ಟಿಗೆ ಬಾಬಾಸಾಹೇಬರ ಮತ್ತೊಂದು ಮೌಲ್ಯಯುತವಾದ ಮಾತು, “ಶಿಕ್ಷಣದ ಮೂಲಕ ಜನರ ಚಾರಿತ್ರ್ಯ ನಿರ್ಮಾಣ ಆಗದಿದ್ದರೆ ಅಂಥವರಿಂದ ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ. ಚಾರಿತ್ರ್ಯ ಹಾಗೂ ನಮ್ರತೆಯಿಲ್ಲದ ಶಿಕ್ಷಿತ ವ್ಯಕ್ತಿ ಪ್ರಾಣಿಗಿಂತಲೂ ಹೆಚ್ಚು ಅಪಾಯಕಾರಿ. ಆತನ ಮನಸ್ಥಿತಿ ಜನಸಾಮಾನ್ಯರ ಏಳ್ಗೆಗೆ ವಿರುದ್ಧವಾಗಿದ್ದರೆ ಆತ ಸಮಾಜಕ್ಕೊಂದು ಶಾಪ. ಚಾರಿತ್ರ್ಯವು ಶಿಕ್ಷಣಕ್ಕಿಂತಲೂ ಮುಖ್ಯವಾದದ್ದು” (ಇದು 1938ರಲ್ಲಿ ನಡೆದ ಮುಂಬೈ ಪ್ರಾಂತ ಶೋಷಿತ ವರ್ಗಗಳ ಯುವಸಮ್ಮೇಳನದಲ್ಲಿ ಅಂಬೇಡ್ಕರ್ ಅವರಾಡಿದ ಮಾತು)ಇದನ್ನ ಇಂದಿನ ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡಬೇಕು. ಆಗ ನಾವು ನಿರೀಕ್ಷಿಸಿದಂತೆ ಅವರ ಆಲೋಚನೆಗಳು ಉನ್ನತವಾಗುತ್ತಾ ಹೋಗುತ್ತವೆ. ನಿಜವಾದ ಅನುಯಾಯಿಯೆಂದರೆ,ನಾವು ಪ್ರೀತಿಸುವ & ಅನುಸರಿಸುವ ನಮ್ಮ ನಾಯಕರು,ದಾರ್ಶನಿಕರು ಪಾಲಿಸಿದ ತತ್ವಕ್ಕೆ ನಾವು ಅಂಟಿಕೊಳ್ಳಬೇಕೆ ವಿನಾ ಅವರ ಹೆಸರಿಗಲ್ಲ! ಎಂಬುದರ ಅರಿವು ಮೂಡಿಸಬೇಕಿದೆ.
ಶಿಕ್ಷಣ ಕುರಿತು ಹೀಗೆ ಜಾಗೃತಿ ಮೂಡಿಸುವ ಮೂಲಕ ಶಿಕ್ಷಿತರಾಗಿರಿ! ಸಂಘಟಿತರಾಗಿರಿ! ಪ್ರತಿಭಟಿಸಿ!’ ಎಂಬ ಬಾಬಾಸಾಹೇಬರ ಪ್ರಸಿದ್ಧ ಘೋಷಣೆಗೆ ಜೀವ ತುಂಬುವ ಮೌಲಿಕ ಕಾರ್ಯ ಮಾಡೋಣಾ. ಏಕೆಂದರೆ,ಶಿಕ್ಷಣವೇ ಸಮಾಜದ ಎಲಾ ಕಾಯಿಲೆಗಳಿಗೆ ದಿವ್ಯ ಔಷಧವಾಗಿದೆ. ಬಾಲ್ಯದಿಂದಲೂ ಶೋಷಣೆ, ನಿರ್ಲಕ್ಷ್ಯ, ಅವಮಾನಗಳಿಗೆ ಒಳಗಾದ ಅಸ್ಪೃಶ್ಯ ಭೀಮರಾವ್ ಅಂಬೇಡ್ಕರ್ ಅವರು ಇಂದು ದೇಶಕಂಡ ಅಪರೂಪದ ವಿದ್ವಾಂಸರಾಗಿ, ಸಂವಿಧಾನ ಶಿಲ್ಪಿಯಾಗಿ, ದಮನಿತರ ದನಿಯಾಗಿ ಬೆಳೆದುದರ ಹಿಂದೆ ಇದ್ದುದು ಇದೇ ಶಿಕ್ಷಣವೆಂಬ ಶಕ್ತಿ ಎಂಬುದನ್ನ ನಾವು ಸದಾ ನೆನಪಿನಲಿಟ್ಟುಕೊಂಡು ಆ ಹಾದಿಯಲ್ಲೆ ಸಾಗೋಣಾ. ಆಗ ಮಾತ್ರ ನಾವು ಅಂಬೇಡ್ಕರ್ ಅವರ ಅನುಯಾಯಿ ಎಂದು ಹೆಮ್ಮೆಯಿಂದ ಹೇಳಬಹುದು! ಅಲ್ಲವೇ?.
ಲೇಖನ: ಡಿ.ಶಬ್ರಿನಾ ಮಹಮದ್ ಅಲಿ, ಚಳ್ಳಕೆರೆ.

