ಎರಡು ವರ್ಷ ಚಿತ್ರದುರ್ಗ ಕೋಟೆ ಆಳಿದ ಈಕೆ ಯಾರೆಂಬುದು ಬೆಳಕಿಗೆ ಬಂದಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ದುರ್ಗದ ದೊರೆ ಹಿರೆಮದಕರಿನಾಯಕರ ಧರ್ಮಪತ್ನಿ ಗಂಡೋಬಳವ್ವ ನಾಗತಿ ಎರಡು ವರ್ಷಗಳ ಕಾಲ ಚಿತ್ರದುರ್ಗದ ಕೋಟೆಯನ್ನು ಆಳಿದ್ದಾಳಾದರೂ ಈಕೆ ಯಾರೆಂಬುದು ಇನ್ನು ಬೆಳಕಿಗೆ ಬರದಿರುವುದು ನೋವಿನ ಸಂಗತಿ ಎಂದು ಖ್ಯಾತ ಕಾದಂಬರಿಕಾರ ಡಾ.ಬಿ.ಎಲ್.ವೇಣು ವಿಷಾದಿಸಿದರು.

ಚಿತ್ರದುರ್ಗ ಇತಿಹಾಸ ಕೂಟದ ಸದಸ್ಯ ಕುಮಾರ್ ಬಡಪ್ಪ ಚಿತ್ರಕಾರ ಸುಲ್ತಾನ್‌ರವರಿಂದ ಬರೆಸಿರುವ ಗಂಡೋಬಳವ್ವನಾಗತಿಯ ಭಾವಚಿತ್ರವನ್ನು ತಮ್ಮ ನಿವಾಸದಲ್ಲಿ ಭಾನುವಾರ ಅನಾವರಣಗೊಳಿಸಿ ಮಾತನಾಡಿದರು.

- Advertisement - 

ರಾಯದುರ್ಗದ ಕೃಷ್ಣಪ್ಪ ನಾಯಕನ ಜೊತೆ ಹೋರಾಡಿ ಗೆದ್ದ ಗಂಡೋಬಳವ್ವನಾಗತಿಯ ಇತಿಹಾಸ ಎಲ್ಲರಿಗೂ ಗೊತ್ತಾಗಬೇಕು. ಒನಕೆಯಿಂದ ಶತ್ರಗಳನ್ನು ಸದೆ ಬಡಿದ  ಒನಕೆ ಓಬವ್ವ ಚಿರಪರಿಚಿತಳು. ಅದೇ ರೀತಿ ಗಂಡೋಬಳವ್ವ ನಾಗತಿಯ ಪರಾಕ್ರಮ ಸಮಾಜಕ್ಕೆ ತಿಳಿಯಬೇಕಿದೆ. ಜಾನಕಲ್‌ನಲ್ಲಿದ್ದ ಹನ್ನೆರಡು ವರ್ಷದ ಬಾಲಕ ಮದಕರಿನಾಯಕನನ್ನು ಕರೆತಂದು ಪಟ್ಟ ಕಟ್ಟಿ ವಿದ್ಯೆ, ಶಸ್ತ್ರಾಸ್ತ್ರವನ್ನು ಕಲಿಸುತ್ತಾಳೆ. ಎಲ್ಲವನ್ನು ಸಮರ್ಥವಾಗಿ ಎದುರಿಸುವಷ್ಟು ಶಕ್ತಿಶಾಲಿಯಾಗಿದ್ದ ಗಂಡೋಬಳವ್ವನಾಗತಿ ಶೌರ್ಯ

ನೆಲ, ಜಲ, ಕೋಟೆ, ಕೊತ್ತಲಗಳ ಇತಿಹಾಸ ತಿಳಿದುಕೊಳ್ಳುವಷ್ಟು ಆಸಕ್ತಿ ಯಾರಲ್ಲಿಯೂ ಇಲ್ಲದಂತಾಗಿರುವುದು ಬೇಸರವೆನಿಸುತ್ತದೆ. ರಾಜಕಾರಣಿಗಳಿಗಂತೂ ಇಲ್ಲವೆ ಇಲ್ಲ. ಚಿತ್ರದುರ್ಗದ ಕೋಟೆ ಇತಿಹಾಸದ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಆಸಕ್ತಿ ಮೂಡಿಸುವ ಕೆಲಸವಾಗಬೇಕೆಂದು ತಿಳಿಸಿದರು.

- Advertisement - 

ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ ಗಂಡೋಬಳವ್ವನಾಗತಿ ಯಾವ ರೀತಿ ಇರಬಹುದೆಂದು ಊಹಿಸಿಕೊಂಡು ಸುಲ್ತಾನ್ ಅದ್ಬುತವಾಗಿ ಫೋಟೋ ಬಿಡಿಸಿದ್ದಾರೆ. ಚಿತ್ರದುರ್ಗವನ್ನು ಆಳಿದ ಹದಿಮೂರು ರಾಜರ ಭಾವಚಿತ್ರಗಳು ಇದೆ ರೀತಿ ಸುಲ್ತಾನ್‌ರವರ ಕುಂಚದಿಂದ ಮೂಡಿಬರುವಂತಾಗಲಿ ಎಂದು ಹಾರೈಸಿದರು.

ಕುಮಾರ್ ಬಡಪ್ಪ ಮಾತನಾಡಿ ಚಿತ್ರದುರ್ಗದ ಕೋಟೆಯನ್ನು ಆಳಿದ ರಾಜರ ಇತಿಹಾಸವನ್ನು ಸ್ಮರಣೆ ಮಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಬೇಕು. ಗಂಡೋಬಳವ್ವ ನಾಗತಿ ಪರಾಕ್ರಮಿಯಾಗಿದ್ದು, ಬಹಳಷ್ಟು ಜನರಿಗೆ ಇದುವರೆವಿಗೂ ಗೊತ್ತಿಲ್ಲದಿರುವುದು ವಿಪರ್ಯಾಸ ಎಂದು ನುಡಿದರು.

ಮದಕರಿನಾಯಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ರಾಜವಂಶಸ್ಥರಾದ ಮದಕರಿ ಜಯಚಂದ್ರನಾಯಕ, ಇತಿಹಾಸ ಸಂಶೋಧಕ ಡಾ.ಎನ್.ಎಸ್.ಮಹಂತೇಶ್, ಅಜಯ್ ಮದಕರಿ ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Share This Article
error: Content is protected !!
";