ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನಸೌಧದ DCP ಅವರು ಐಪಿಎಲ್ ವಿಜಯೋತ್ಸವ ಆಯೋಜಿಸಲು ಹೆಚ್ಚಿನ ಕಾಲಾವಕಾಶ, ಪೂರ್ವಸಿದ್ಧತೆ, ಮುಂಜಾಗ್ರತಾ ಕ್ರಮಗಳು ಅಗತ್ಯವಿದೆ ಎಂದು ಬುಧವಾರದಂದು (04-06-2025) ಸರ್ಕಾರಕ್ಕೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಈ ಲಿಖಿತ ಎಚ್ಚರಿಕೆಯನ್ನೂ ಕಡೆಗಣಿಸಿ ವಿಜಯೋತ್ಸವ ಆಚರಿಸಲು ಮುಂದಾಗಿದ್ದು ಯಾಕೆ? ಪೊಲೀಸ್ ಅಧಿಕಾರಿಗಳ ಎಚ್ಚರಿಕೆಯನ್ನೂ ಲೆಕ್ಕಿಸದೆ ವಿಜಯೋತ್ಸವ ಆಚರಿಸಲು ಹಠಕ್ಕೆ ಬಿದ್ದಿದ್ದು ಯಾರು? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ಉತ್ತರಿಸಬೇಕಾದ ಪ್ರಶ್ನೆಗಳು ಬಹಳಷ್ಟಿವೆ. ಆದರೆ ಒಂದಂತೂ ನೂರಕ್ಕೆ ನೂರು ಗ್ಯಾರೆಂಟಿ. ಇದೊಂದು ಸರ್ಕಾರಿ ಪ್ರಾಯೋಜಿತ ಕಾಲ್ತುಳಿತ, ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ವಿಪಕ್ಷ ನಾಯಕರು ವಾಗ್ದಾಳಿ ಮಾಡಿದ್ದಾರೆ.