ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಕ್ಫ್ ಬೋರ್ಡ್ ರೈತರಿಗೆ ನೀಡಿರುವ ನೋಟಿಸ್‌ವಾಪಸ್ ಪಡೆಯುವಂತೆ ಸೂಚಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ರೈತರ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಗುರುತಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತರಿಗೆ ನೀಡಿದ್ದ ನೋಟಿಸ್ ಹಿಂಪಡೆಯುವುದಾಗಿ ವಕ್ಫ್ ಮಂಡಳಿಯವರು ತಿಳಿಸಿದ್ದು ಈಗ ಆಗಿರುವ ತಪ್ಪಿನ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಪಾಟೀಲ್ ಹೇಳಿದರು.
ಸರ್ಕಾರಕ್ಕೆ ರೈತರ ಜಮೀನು ಕಬಳಿಕೆ ಮಾಡುವ ಉದ್ದೇಶವಿಲ್ಲ. ಬಿಜೆಪಿಯವರು ಈ ವಿಷಯದಲ್ಲಿ ಅನಾವಶ್ಯಕವಾಗಿ ರಾಜಕೀಯ ಮಾಡುತ್ತಿದ್ದಾರೆ. ಇಂತಹ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾಡೋದು ಸೂಕ್ತವಲ್ಲ. ರೈತರಿಗೆ ನೋಟಿಸ್‌ಹೋಗಿದ್ದರೆ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಎಂ. ಬಿ ಪಾಟೀಲ್ ಈಗಾಗಲೇ ಹೇಳಿದ್ದು ಸರ್ಕಾರ ನೋಟಿಸ್‌ವಾಪಸ್ ಪಡೆಯಲಿದೆ ಎಂದು ತಿಳಿಸಿದರು.
ವಿಜಯಪುರದ ತಹಶೀಲ್ದಾರ್ ತಪ್ಪು ಮಾಡಿದ್ದಾರೆ. ಹೀಗಾಗಿ ನೋಟಿಸ್‌ವಾಪಸ್ ಪಡೆಯೋ ಕೆಲಸ ಮಾಡ್ತೀವಿ. ರಾಜಕೀಯವಾಗಿ ಆರೋಪ ಮಾಡೋದು ಸರಿಯಲ್ಲ. ತಪ್ಪುಮಾಡಿರೋದು ತಹಶೀಲ್ದಾರ್, ಜಮೀರ್ ಯಾಕೆ ರಾಜೀನಾಮೆ ಕೊಡಬೇಕು? ಎಂದು ಹೆಚ್.ಕೆ.ಪಾಟೀಲ್ ಪ್ರಶ್ನಿಸಿದರು.
ಬಿಜೆಪಿ ಅವರು ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆಗೆ ಪಟ್ಟು ಹಿಡಿದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಜಮೀರ್ ಯಾಕೆ ರಾಜೀನಾಮೆ ಕೊಡಬೇಕು? ತಹಶೀಲ್ದಾರ್ ತಪ್ಪುಮಾಡಿರೋದು. ತಹಶೀಲ್ದಾರ್ ನೋಟಿಸ್ ಕೊಟ್ಟಿದ್ದರೆ ಜಿಲ್ಲಾಧಿಕಾರಿಗಳು ನೋಡ್ತಾರೆ. ಅದಕ್ಕೂ ಮೇಲೆ ಸರ್ಕಾರ ಇದೆ. ಹೀಗಿರುವಾಗ ಜಮೀರ್ ಯಾಕೆ ರಾಜೀನಾಮೆ ನೀಡಬೇಕು? ಎಂ.ಬಿ ಪಾಟೀಲ್ ಎಲ್ಲಾ ಗೊಂದಲಗಳನ್ನ ನಿವಾರಣೆ ಮಾಡಿದ್ದಾರೆ. ಈಗ ಯಾವುದೇ ಗೊಂದಲಇಲ್ಲ ಎಂದು ಪಾಟೀಲ್ ತಿಳಿಸಿದರು.
ರೈತರ ಭೂಮಿಯನ್ನು ವಕ್ಫ್ ಆಸ್ತಿಯನ್ನಾಗಿ ಪರಿವರ್ತಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ. ತಪ್ಪಿದಲ್ಲಿ ಅದನ್ನು ಸರಿಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗ ಆಗಿರುವ ತಪ್ಪನ್ನು ಗಮನಿಸಿ, ನೀಡಿರುವ ನೋಟಿಸ್‌ಗಳನ್ನು ಹಿಂಪಡೆಯಲಾಗುವುದು. ಜಿಲ್ಲಾಧಿಕಾರಿಗಳು ಈ ಬಗ್ಗೆ ವಿಚಾರಣೆ ನಡೆಸಲಿದ್ದು, ನೀಡಿರುವ ನೋಟಿಸ್ ಹಿಂಪಡೆಯಲು ಕ್ರಮ ಕೈಗೊಳ್ಳಲು ಒಂದೆರಡು ದಿನ ಬೇಕು.
ವಿಷಯ ಸೂಕ್ಷ್ಮವಾಗಿದೆ, ನಾನು ಸಂಕ್ಷಿಪ್ತವಾಗಿ ಹೇಳಬಲ್ಲೆ. ರೈತರ ಭೂಮಿಯನ್ನು ವಕ್ಫ್ ಆಸ್ತಿಯನ್ನಾಗಿ ಪರಿವರ್ತಿಸಲಾಗುತ್ತಿದೆ ಎಂಬ ಆರೋಪ ಸರಿಯಲ್ಲ. ಸರ್ಕಾರಕ್ಕೆ ಅಂತಹ ಉದ್ದೇಶವಿಲ್ಲ. ಯಾರಾದರೂ ಅಂತಹ ತಪ್ಪು ಮಾಡಿದ್ದರೆ, ಅದನ್ನು ಸರಿಪಡಿಸಲಾಗುವುದು ಮತ್ತು ಹೊಣೆಗಾರರಿಗೆ ಶಿಕ್ಷೆಯಾಗಲಿದೆ. ಭೂಮಿ ಯಾರಿಗೆ ಸೇರಬೇಕೋ ಅವರಿಗೆ ಸೇರಿದ್ದು ಎಂದು ಹೆಚ್.ಕೆ.ಪಾಟೀಲ್ ಅವರು ಹೇಳಿದರು.