ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಲವು ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿರುವ ಶಾಸಕ ಮುನಿರತ್ನನನ್ನು ಏಕೆ ಉಚ್ಚಾಟನೆ ಮಾಡಿಲ್ಲ? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತೀಕ್ಷ್ಣವಾಗಿ ಬಿಜೆಪಿ ನಾಯಕರನ್ನ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಅವರು ಮಾತನಾಡಿದರು.
ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರುಗಳು ಯಾರನ್ನೂ ರೇಪ್ ಮಾಡಿಲ್ಲ. ಹೆಚ್ಐವಿ ಇಂಜೆಕ್ಷನ್ ಚುಚ್ಚಿದ್ದಾರಾ?. ಮುನಿರತ್ನ ಅವರ ವಿರುದ್ಧ ಹಲವು ತನಿಖೆಗಳು ನಡೆಯುತ್ತಿವೆ. ವಿಪಕ್ಷ ನಾಯಕರಿಗೆ ಇಂಜೆಕ್ಷನ್ ಚುಚ್ಚಲು ಹೋಗಿದ್ರು. ಯಡಿಯೂರಪ್ಪರನ್ನು ಟ್ರ್ಯಾಪ್ ಮಾಡಲು ಯತ್ನಿಸಿದ್ದರು. ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನಿಸಿ ಮುತ್ತು ರತ್ನಗಳನ್ನು ಬಿಜೆಪಿಯವರೇ ಇಟ್ಟುಕೊಳ್ಳಲಿ ಎಂದು ಟಾಂಗ್ ನೀಡಿದ್ದಾರೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬೆಂಗಳೂರಿನಲ್ಲಿರುವ ಹೆಚ್ಎಎಲ್ ಅನ್ನು ಆಂಧ್ರಕ್ಕೆ ಕೊಡಿ ಎಂಬ ಬೇಡಿಕೆ ಇಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರ ಹೆಚ್ಎಎಲ್ ಕೊಟ್ಟಿಲ್ಲ. ಟೆಕ್ನಿಕಲ್‌ನಲ್ಲಿ ಯುವಕರು ಬಹಳ ಶಕ್ತಿಶಾಲಿ ಇದ್ದಾರೆ, ಅವರು ಸದೃಢರಾಗಿದ್ದಾರೆ ಅಂತ ನೆಹರು ಕೊಟ್ಟಿದ್ದು. ಏರ್ ಬೇಸ್, ಏರ್ ಶೋ ಎಲ್ಲವೂ ಇಲ್ಲಿದೆ. ಬೆಂಗಳೂರಿನಲ್ಲಿ ಎರಡು ಏರ್ ಬೇಸ್ ಇದೆ. ನಮ್ಮ ಏರ್ ಬೇಸ್ ಉತ್ತಮವಾಗಿ ಕೆಲಸ ಮಾಡುತ್ತಿದೆ. ಚಂದ್ರಬಾಬು ನಾಯ್ಡು ಏನು ಬೇಕಾದ್ರೂ ಕೇಳಲಿ. ಹೊಸದಾಗಿ ಅವರು ಏನು ಬೇಕಾದರೂ ಮಾಡಿಸಿಕೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ನಮ್ಮಲ್ಲಿರುವುದನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಎಚ್ಎಎಲ್ ನಮ್ಮ ಆಸ್ತಿ, ನಮ್ಮ ಹಕ್ಕು. ನಮ್ಮ ಎಂಪಿಗಳು ಯಾಕೆ ಮಾತನಾಡುತ್ತಿಲ್ಲ?. ಸಂಜೆಯೊಳಗೆ ರಾಜ್ಯದ ಎಂಪಿಗಳು ಮಾತನಾಡಬೇಕು. ಇಲ್ಲಿರುವ ಯಾವ ಕಂಪನಿಯನ್ನೂ ನಾವು ಬಿಡಲ್ಲ. ಮುಂದೆ ನಾವು ಇದರ ಬಗ್ಗೆ ಮಾತನಾಡುತ್ತೇವೆ ಎಂದು ಡಿಸಿಎಂ ತಿಳಿಸಿದರು.
ಕಲಬುರ್ಗಿ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನಿ ಎಂದು ಬಿಜೆಪಿ ಎಂಎಲ್ಸಿ ರವಿಕುಮಾರ್ ನಿಂದಿಸಿರುವುದಕ್ಕೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಾನೂನು ಕ್ರಮ ಕೈಗೊಳ್ಳದೇ ಬೇರೆ ದಾರಿ ಇಲ್ಲ. ಕಲಬುರ್ಗಿಯ ಜಿಲ್ಲಾಧಿಕಾರಿ ರಾಷ್ಟ್ರಮಟ್ಟದ ಅಧಿಕಾರಿಯಾಗಿದ್ದು, ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.
ಅವರು ತಮ್ಮದೇ ಆದ ಘನತೆ ಹೊಂದಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ ಅವರ ಬೆನ್ನಿಗೆ ನಿಲ್ಲುತ್ತದೆ. ಈ ವಿಚಾರವಾಗಿ ಬಿಜೆಪಿ ನಾಯಕರು ಅದರಲ್ಲೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೇಂದ್ರ ಸಚಿವರುಗಳು ಪ್ರತಿಕ್ರಿಯೆ ನೀಡಬೇಕು ಎಂದು ಡಿಕೆ ಶಿನಕುಮಾರ್ ತಾಕೀತು ಮಾಡಿದರು.
ಬಿಜೆಪಿ ನಾಯಕರ ಹೇಳಿಕೆ ಕುರಿತು ಹಲವು ಐಎಎಸ್ ಅಧಿಕಾರಿಗಳು ನನ್ನನ್ನು ಭೇಟಿ ಮಾಡಿದ್ದಾರೆ. ಈ ವಿಚಾರವನ್ನು ಕಾನೂನು ದೃಷ್ಟಿಕೋನದಲ್ಲಿ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.