ಶಿರಾದಲ್ಲಿ 2ನೇ ಏರ್​​ಪೋರ್ಟ್ ಆಗುತ್ತಾ?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2ನೇ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಸರ್ಕಾರ ಗುರುತಿಸಿರೋ 3 ಸ್ಥಳಗಳನ್ನ ಬಿಟ್ಟು ಶಿರಾದಲ್ಲಿ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವಂತೆ ಶಾಸಕರಲ್ಲಿ ಬಹುದೊಡ್ಡ ಕೂಗು ಎದ್ದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಜಿ ಸಚಿವ ಟಿಬಿ ಜಯಚಂದ್ರ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಶಾಸಕರು ಪಕ್ಷಾತೀತವಾಗಿ ಪತ್ರ ಬರೆದು ಶಿರಾ ಸಮೀಪವೇ 2ನೇ ವಿಮಾನ ನಿಲ್ದಾಣ ಮಾಡುವಂತೆ ಒತ್ತಾಯಿಸಿದ್ದಾರೆ.

ಕನಕಪುರದಲ್ಲೂ ವಿಮಾನ ನಿಲ್ದಾಣಕ್ಕೆ ಜಾಗ ಪರಿಶೀಲಿಸಲಾಗಿದೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಒತ್ತಡವೇ ಕಾರಣ ಎಂದು ಕೆಲವರಿಂದ ಬೇಸರ ವ್ಯಕ್ತವಾಗಿದೆ. ಏರ್ಪೋರ್ಟ್ ಸ್ಥಾಪನೆ ವಿಚಾರದಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಎಂದು 30ಕ್ಕೂ ಹೆಚ್ಚು ಶಾಸಕರು ಧ್ವನಿ ಎತ್ತಿದ್ದು 2ನೇ ವಿಮಾನ ನಿಲ್ದಾಣ ಅಡಕತ್ತರಿಯಲ್ಲಿ ಸಿಲುಕಿದೆ.

ಕನಕಪುರ ರಸ್ತೆಯ ಭಾಗದಲ್ಲಿ 2ನೇ ಏರ್​​ಪೋರ್ಟ್​ ಬೇಡವೇ ಬೇಡ. ತುಮಕೂರು ಅಥವಾ ಶಿರಾ ಭಾಗದಲ್ಲಿ ಎಲ್ಲೇ ನಿರ್ಮಿಸಿದರೂ ಖುಷಿ ಇದೆ ಎಂದು ಉತ್ತರ ಕರ್ನಾಟಕ ಭಾಗದ ಶಾಸಕರು, ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಶಿರಾ ಭಾಗದಲ್ಲಿ ಏರ್ ಪೋರ್ಟ್ ಮಾಡಲು ಮೂಲ ಸೌಕರ್ಯ ಸಚಿವ ಎಂಬಿ ಪಾಟೀಲ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಈ ಕುರಿತು ಪ್ರತಿಕ್ರಿಯಿಸಿದ್ದು, ತುಮಕೂರು ಜಿಲ್ಲೆಯ ಶಿರಾ ಸಮೀಪ ಸರ್ಕಾರಿ ಭೂಮಿ ಇದೆ. ಅಲ್ಲೇ ಅಂತಾರಾಷ್ಟ್ರೀಯ ಏರ್​ಪೋರ್ಟ್​ ನಿರ್ಮಾಣ ಆಗಲಿ. 6 ತಿಂಗಳ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದೆ. ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಸೇರಿ ಎಲ್ಲದಕ್ಕೂ ಹತ್ತಿರ ಆಗುತ್ತೆ. ಅಧಿಕಾರಿಗಳು ಮೂರು ಸ್ಥಳ ವೀಕ್ಷಿಸಿದ್ದಾರೆ, ಅದರಲ್ಲಿ ಶಿರಾ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ವಿಮಾನ ನಿಲ್ದಾಣ ಪ್ರಾಧಿಕಾರದವರು ಅಂತಿಮ ತೀರ್ಮಾನ ಮಾಡಲಿದ್ದಾರೆ. ಆದರೆ ಶಿರಾದಲ್ಲಿ ಏರ್​ಪೋರ್ಟ್​ ಆಗಲಿ ಎಂದು ಕಾಂಗ್ರೆಸ್ ನ ಹಿರಿಯ ಶಾಸಕ ಜಯಚಂದ್ರ ಕೂಡಾ ಪಟ್ಟು ಹಿಡಿದಿದ್ದಾರೆ. ಶಿರಾ ಅಥವಾ ತುಮಕೂರು ಮಧ್ಯೆ ನಿರ್ಮಾಣವಾದರೂ ಪರವಾಗಿಲ್ಲ. ಈಗಾಗಲೇ ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಬಂದಿದ್ದೇನೆ. ಶಿರಾ ಭಾಗದಲ್ಲಿ ಏರ್​​ಪೋರ್ಟ್​ ಮಾಡೋದು ಎಎಐಗೆ ಬಿಟ್ಟಿದ್ದು. ಬೆಂಗಳೂರನ್ನು ಟ್ರಾಫಿಕ್ ಮುಕ್ತ ಮಾಡಬೇಕೆಂಬುದು ನಮ್ಮ ಉದ್ದೇಶ. ಸಿಎಂ ಜೊತೆ ಪರಮೇಶ್ವರ್, ಟಿ.ಬಿ.ಜಯಚಂದ್ರ ಮಾತನಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸ್ಥಳ ಪರಿಶೀಲನೆ- ಈಗಾಗಲೇ ಕನಕಪುರ ರಸ್ತೆಯ ಎರಡು ಪ್ರದೇಶಗಳಲ್ಲಿ ಮತ್ತು ನೆಲಮಂಗಲ-ಕುಣಿಗಲ್ ರಸ್ತೆಯ ಒಂದು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಮೂಲಕ, ಎರಡನೇ ವಿಮಾನ ನಿಲ್ದಾಣದ ರೇಸ್‌ನಲ್ಲಿದ್ದ ಬಿಡದಿ ಸ್ಪರ್ಧೆಯಿಂದ ಹೊರಡೆ ಬಿದ್ದಂತಾಗಿದೆ. ಅಲ್ಲದೆ ಸಚಿವ ಜಿ.ಪರಮೇಶ್ವರ್ ಹಾಗೂ ವಿ.ಸೋಮಣ್ಣ ಅವರ ಮನವಿಗೂ ಕ್ಯಾರೆ ಅನ್ನದೇ, ಈಗಾಗಲೇ ತುಮಕೂರನ್ನು ಸಹ ಕೈಬಿಡಲಾಗಿದೆ ಎನ್ನಲಾಗುತ್ತಿದೆ.

ಮತ್ತೊಂದೆಡೆ ಕನಕಪುರ ರಸ್ತೆ ಅಥವಾ ನೆಲಮಂಗಲ ಭಾಗದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಆಗಬಾರದು. ಶಿರಾದಲ್ಲಿ ಆಗಲಿ ಎಂದು 30ಕ್ಕೂ ಹೆಚ್ಚು ಶಾಸಕರು ಪಟ್ಟು ಹಿಡಿದಿದ್ದಾರೆ. ಆದರೆ, ಅಂತಿಮವಾಗಿ ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಯಾವ ಸ್ಥಳ ಗುರುತು ಮಾಡಲಾಗುತ್ತೆ? ಯಾರ ಕೈ ಮೇಲಾಗುತ್ತೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ರಾಜಕೀಯ ಲೆಕ್ಕಾಚಾರ. ಪರ ವಿರೋಧ ಏನೇ ಇದ್ದರೂ, ಅಂತಿಮವಾಗಿ ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆ ಮತ್ತು ಕೇಂದ್ರ ಸರ್ಕಾರವೇ ಜಾಗ ಫೈನಲ್ ಮಾಡಲಿದೆ. ಸದ್ಯ ಯಾವ ಸ್ಥಳ ಫೈನಲ್ ತೀರ್ಮಾನಿಸುತ್ತಾರೆ ಎನ್ನುವುದೇ ಕುತೂಹಲ ಮೂಡಿಸಿದ್ದು ಕಾಂಗ್ರೆಸ್ ಸಚಿವ, ಶಾಸಕರಲ್ಲೇ ಪೈಪೋಟಿ ಹೆಚ್ಚಾಗಿದೆ.

 

Share This Article
error: Content is protected !!
";