ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಅನಧಿಕೃತ ಗೂಡಂಗಡಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾ, ಹೆದ್ದಾರಿಗಳ ಇಕ್ಕೆಲಗಳು, ಬೈಪಾಸ್ ರಸ್ತೆಗಳು ಸೇರುವ ಸ್ಥಳ ಹಾಗೂ ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ರಸ್ತೆಗಳ ಅಕ್ಕಪಕ್ಕದಲ್ಲಿ ಅನಧಿಕೃತವಾಗಿ ಗೂಡಂಗಡಿಗಳನ್ನು ಹಾಕಿಕೊಂಡಿರುವುದರಿಂದ, ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ, ಅಲ್ಲದೆ ಅಪಘಾತಗಳಿಗೂ ಕಾರಣವಾಗುತ್ತಿವೆ. ಹಿರಿಯೂರು ನಗರದಲ್ಲಿ ಬೈಪಾಸ್ ರಸ್ತೆಯ ಅಕ್ಕಪಕ್ಕದಲ್ಲಿ ಹೆಚ್ಚಿನ ಗೂಡಂಗಡಿಗಳು ಇದ್ದು, ಇಲ್ಲಿ ಸಾಲು ಸಾಲಾಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ಅಲ್ಲದೆ ಟೋಲ್ ಸಂಗ್ರಹಿಸುವ ಕಡೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಗೂಡಂಗಡಿಗಳ ಬಗ್ಗೆ ಮಾಹಿತಿ ಪಡೆದು, ಈ ಅಂಗಡಿಗಳು ನಿರ್ಮಿಸಿರುವ ಸ್ಥಳ ಯಾರಿಗೆ ಸೇರಿದ್ದು, ಕೃಷಿಯೇತರ ಭೂಮಿಯಾಗಿ ಪರಿವರ್ತಿಸಲಾಗಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು.
ಅನಧಿಕೃತ ಗೂಡಂಗಡಿಗಳಿಗೆ ವಿದ್ಯುತ್ ಸಂಪರ್ಕ ನೀಡಿದ್ದಲ್ಲಿ, ಬೆಸ್ಕಾಂ ಅವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು. ಇಂತಹ ಕ್ರಮಗಳಿಗೆ ಅವಕಾಶ ನೀಡದೆ, ಬೆಸ್ಕಾಂ ಇಲಾಖೆ ಅಧಿಕಾರಿಗಳು ಅನಧಿಕೃತ ಗೂಡಂಗಡಿಗಳಿಗೆ ಒದಗಿಸಿರುವ ವಿದ್ಯುತ್ ಸಂಪರ್ಕವನ್ನು ತ್ವರಿತವಾಗಿ ಕಡಿತಗೊಳಿಸಬೇಕು. ವಿರೋಧ ಕಂಡುಬಂದಲ್ಲಿ, ಪೊಲೀಸ್ ಬಂದೋಬಸ್ತ್ ಪಡೆದು ಕೂಡಲೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅಪಘಾತದ ಗಂಭೀರತೆ ಅರಿಯದ ಅಧಿಕಾರಿಗಳ ನಡೆಗೆ ಡಿಸಿ, ಎಸ್‍ಪಿ ತೀವ್ರ ಬೇಸರ:
ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಪ್ರಮುಖ ರಾಜ್ಯ ಹೆದ್ದಾರಿಗಳು ಹಾದುಹೋಗಿದ್ದು, ಪದೇ ಪದೇ ಅಪಘಾತ ಸಂಭವಿಸುವ ಸ್ಥಳಗಳನ್ನು ಬ್ಲಾಕ್ ಸ್ಪಾಟ್ ಎಂದು ಗುರುತಿಸಿ, ವೈಜ್ಞಾನಿಕವಾಗಿ ಸಮಸ್ಯೆ ನಿವಾರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಈ ಹಿಂದಿನ ಹಲವು ಸಭೆಗಳಲ್ಲಿ ಸೂಚನೆ ನೀಡಿದ್ದರೂ, ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಅಪಘಾತಗಳ ಸಂಖ್ಯೆಯಲ್ಲಿ ರಾಜ್ಯದಲ್ಲಿಯೇ ಚಿತ್ರದುರ್ಗ ಜಿಲ್ಲೆ ನಾಲ್ಕನೆ ಸ್ಥಾನದಲ್ಲಿದೆ. ಈ ಕುರಿತಂತೆ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿ, ಅಪಘಾತಗಳ ಸಂಖ್ಯೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಕುರಿತಂತೆ ಹಲವು ಬಾರಿ ಸಭೆಗಳಲ್ಲಿ ಸಲಹೆ, ಸೂಚನೆಗಳನ್ನು ನೀಡಿದರೂ ಪಾಲನೆ ಮಾಡುತ್ತಿಲ್ಲ. ಮತ್ತೆ ಸಭೆ ಸೇರಿದಾಗಲೇ ಈ ಬಗ್ಗೆ ಮಾತನಾಡುತ್ತೀರಿ. ಸಭೆಯಲ್ಲಿ ನಾವೇನು ಭಜನೆ ಮಾಡಲು ಸೇರುತ್ತೇವೆಯೇ ಎಂದು ಅಧಿಕಾರಿಗಳ ನಡೆಗೆ ತೀವ್ರ ಬೇಸರ ಹೊರಹಾಕಿದ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು, ಅಪಘಾತಗಳು ಸಂಭವಿಸಿದ ವಿಷಯಗಳಲ್ಲಿ ನಿರ್ಲಕ್ಷ್ಯ ತೋರುವಂತಹ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಬೆಸ್ಕಾಂ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಸೇರಿದಂತೆ ಆಯಾ ಅಧಿಕಾರಿಗಳನ್ನು ಕೂಡ ಪ್ರತಿವಾದಿಗಳನ್ನಾಗಿ ಮಾಡಿ ಎಫ್‍ಐಆರ್ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಸುಮಾರು 25 ಸಾವಿರಕೂ ಹೆಚ್ಚು ಟ್ರ್ಯಾಕ್ಟರ್ ಟ್ರ್ಯಾಲಿಗಳಿವೆ, ಎಷ್ಟು ಟ್ರ್ಯಾಕ್ಟರ್‍ಗಳಿಗೆ ರಿಫ್ಲೆಕ್ಟರ್ ಸ್ಟಿಕರ್ ಅಳವಡಿಸಿದ್ದೀರಿ, ಎಂಬುದಾಗಿ ಎಸ್‍ಪಿ ರಂಜಿತ್ ಕುಮಾರ್ ಬಂಡಾರು ಅವರು ಮೋಟಾರು ವಾಹನ ನಿರೀಕ್ಷಕರಿಗೆ ಪ್ರಶ್ನಿಸಿದರು. ಇದಕ್ಕೆ ಉತ್ತಿರಿಸಿದ ಅವರು, ಆರ್‍ಟಿಒ ಕಚೇರಿಗೆ ವಿವಿಧ ಕಾರ್ಯಗಳಿಗೆ ಬಂದಂತಹ 450 ಟ್ರ್ಯಾಕ್ಟರ್‍ಗಳಿಗೆ ಅಳವಡಿಸಿದ್ದೇವೆ ಎಂದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಎಸ್‍ಪಿ ಅವರು, ಕತ್ತಲಲ್ಲಿ ಟ್ರ್ಯಾಕ್ಟರ್ ಟ್ರ್ಯಾಲಿಗಳು ರಸ್ತೆಗಳಲ್ಲಿ ಹೋಗುತ್ತಿದ್ದರೂ ವಾಹನ ಸವಾರರಿಗೆ ಗೋಚರಿಸುವುದಿಲ್ಲ, ಇತ್ತೀಚೆಗಷ್ಟೇ ಕಾರು ಟ್ರ್ಯಾಕ್ಟರ್ ಅಪಘಾತವಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ. ವಿಶೇಷ ಅಭಿಯಾನ ಮಾಡಿ, ಟ್ರ್ಯಾಕ್ಟರ್ ಟ್ರ್ಯಾಲಿಗಳಿಗೆ ರಿಫ್ಲೆಕ್ಟರ್ ಸ್ಟಿಕರ್ ಅಳವಡಿಸುವಂತೆ ಸೂಚನೆ ನೀಡಲಾಗಿತ್ತು, ಆದರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕ್ರಮ ವಹಿಸಿಲ್ಲ ಎಂದು ಎಸ್‍ಪಿ ರಂಜಿತ್ ಕುಮಾರ್ ಬಂಡಾರು ಅಸಮಾಧಾನ ವ್ಯಕ್ತಪಡಿಸಿದರು.
ಅಪಘಾತ ವಲಯ ಜಂಟಿ ಸಮೀಕ್ಷೆಗೆ ಸೂಚನೆ:
ಜಿಲ್ಲೆಯಲ್ಲಿರುವ ಅಪಘಾತ ವಲಯಗಳ ಜಂಟಿ ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಫಘಾತಗಳನ್ನು ಇಳಿಮುಖಗೊಳಿಸಲು ಹಾಗೂ ಅಪಘಾತ ವಲಯಗಳಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಹಾಗೂ ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಸೇರಿದಂತೆ ವಿವಿಧ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಪಘಾತಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಹಂಪ್ಸ್, ಸೂಚನಾ ಫಲಕ, ಸಿಗ್ನಲ್ ಅಳವಡಿಕೆ ಸೇರಿದಂತೆ ಅಗತ್ಯ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡರೆ ಜನರ ಜೀವಗಳನ್ನು ಉಳಿಸಬಹುದಾಗಿದೆ ಹಾಗೂ ಅಪಘಾತಗಳ ಸಂಖ್ಯೆಯನ್ನು ಇಳಿಮುಖಗೊಳಿಸಲು ಸಹಕಾರಿಯಾಗಲಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
ಚಿತ್ರದುರ್ಗ ನಗರ ಟ್ರಾಫಿಕ್ ಸಮಸ್ಯೆಗೆ ಕ್ರಮ ವಹಿಸಿ:
ಚಿತ್ರದುರ್ಗ ನಗರದ ವಿವಿಧ ಪ್ರದೇಶಗಳಲ್ಲಿ ಅಪಘಾತ ಸಂಭವಿಸಬಹುದಾದ ತೆರೆದ ಚರಂಡಿಗಳು, ರಾಜಕಾಲುವೆ, ಡ್ರೈನೇಜ್‍ಗಳು, ರಸ್ತೆಯಲ್ಲಿಯೇ ಬೋರ್‍ವೆಲ್ ಮುಂತಾದ ವಿವರಗಳೊಂದಿಗೆ ಫೋಟೋಗಳ ಸಹಿತ ಸಂಚಾರ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ವಿಶ್ವನಾಥ್ ಅವರು ಸಭೆಯಲ್ಲಿ ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಅಪಘಾತ ಸಂಭವಿಸಬಹುದಾದ ಸ್ಥಳಗಳಲ್ಲಿ ಕೈಗೊಳ್ಳಬೇಕಾದ ದುರಸ್ತಿ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಚಿತ್ರದುರ್ಗ ನಗರದಲ್ಲಿ ಟ್ರಾಫಿಕ್ ಸಿಗ್ನಲ್‍ಗಳ ನಿರ್ವಹಣೆ, ರಬ್ಬರ್ ಹಂಪ್ಸ್, ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಿಕೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಚಿತ್ರದುರ್ಗ ನಗರದ ಪ್ರಮುಖ ರಸ್ತೆಯಲ್ಲಿ ಬಸ್ ಸಂಚಾರವನ್ನು ನಿರ್ಬಂಧಿಸಿರುವುದರಿಂದ, ವಯೋವೃದ್ಧರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬುದಾಗಿ ರೈತ ಸಂಘಟನೆಗಳು ತಿಳಿಸಿವೆ. ಹೀಗಾಗಿ ಚಳ್ಳಕೆರೆ ಗೇಟ್‍ನಿಂದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದವರೆಗೂ ಸಹ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಎರಡು ನಗರ ಸಾರಿಗೆ ಬಸ್ ಕಾರ್ಯಾಚರಣೆ ನಡೆಸುವಂತೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ತಿಳಿಸಿದ ಅವರು, ಒಂದು ತಿಂಗಳ ಕಾಲ ನಗರದಲ್ಲಿ ನಗರ ಸಾರಿಗೆ ಕಾರ್ಯಾಚರಣೆ ನಡೆಸಿ, ಅದರ ಸಾಧಕ-ಬಾಧಕಗಳ ಕುರಿತು ಚರ್ಚಿಸಿ, ಬಸ್ ಕಾರ್ಯಾಚರಣೆ ಮುಂದುವರಿಕೆ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
20 ವರ್ಷಗಳ ಮೇಲ್ಪಟ್ಟ ಮೈನ್ಸ್ ಲಾರಿಗಳು ಓಡಾಟ ಈಗಾಗಲೇ ನಿರ್ಬಂಧಿಸಲಾಗಿದ್ದು, ಒಂದು ವೇಳೆ ಇಂತಹ ಲಾರಿಗಳು ಸಂಚಾರ ಮಾಡಿದರೆ ಅಂತಹ ವಾಹನಗಳನ್ನು ಸೀಜ್ ಮಾಡಬೇಕು. 20 ವರ್ಷ ಮೇಲ್ಪಟ್ಟ ವಾಹನಗಳ ಓಡಾಟ ಇಲ್ಲದಿರುವ ಬಗ್ಗೆ ದೃಢೀಕರಣ ನೀಡುವಂತೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ ಅವರು, ರಸ್ತೆ ಮಧ್ಯದಲ್ಲಿ ವಾಹನ ತಪಾಸಣೆ ನಡೆಸುವುದರಿಂದ ವಾಹನಗಳ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಲಿದೆ. ಯಾವುದೇ ಕಾರಣಕ್ಕೂ ವಾಹನಗಳನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ ವಾಹನ ತಪಾಸಣೆ ನಡೆಸಬಾರದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ನಾಗರಾಜ್, ಡಿವೈಎಸ್‍ಪಿ ಗಳಾದ ದಿನಕರ್, ಶಿವಕುಮಾರ್, ಸತ್ಯನಾರಾಯಣ ರಾವ್ ನಗರಸಭೆ ಪೌರಾಯುಕ್ತೆ ಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

