ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ದಸರಾ ೨೦೨೪ರ ಅಂಗವಾಗಿ ಅಕ್ಟೋಬರ್ ೧೨ ವಿಜಯದಶಮಿ ದಿನದಂದು ನಡೆಯುವ ಜಂಬೂಸವಾರಿ ಕಾರ್ಯಕ್ರಮದ ಪೂರ್ವ ತಾಲೀಮು ವೈಭವಯುತವಾಗಿ ಜರಗಿತು.
ನಗರದ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ್ ಅವರು ದಸರಾ ಮೆರವಣಿಗೆ ತಾಲೀಮಿಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಭವ್ಯ ಅಲಂಕೃತಗೊಂಡ ಕಾಡು ಸಿದ್ದೇಶ್ವರ ಮಠದ ಲಕ್ಷ್ಮಿ ಹಾಗೂ ಕರಿಬಸವೇಶ್ವರ ಮಠದ ಲಕ್ಷ್ಮಿ ಆನೆಗಳು ಗಜ ಗಾಂಭೀರ್ಯದೊಂದಿಗೆ ಹೆಜ್ಜೆ ಹಾಕಿದವು.
ಮೆರವಣಿಗೆಯ ಮುಂದಡಿಯಲ್ಲಿ ಚಿಟ್ ಮೇಳ, ಕರಡಿ ಮಂಜಲು, ಗಿಳಿ ಕುಣಿತ, ನಂದಿ ಧ್ವಜ ಕುಣಿತ, ನಾಸಿಕ್ ಡೋಲ್ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳು ಭಾಗವಹಿಸಿ ಆಕರ್ಷಕ ಪ್ರದರ್ಶನ ನೀಡಿದವು. ಅಲ್ಲದೆ ಜಿಲ್ಲೆಯ ರಾಷ್ಟ್ರೀಯ ಚಾಂಪಿಯನ್ ಕ್ರೀಡಾಪಟುಗಳು ಮತ್ತು ಸಾಂಪ್ರದಾಯಿಕ ಉಡುಗೆ ತೊಟ್ಟ ಸುಮಾರು ೧೦೦೦ಕ್ಕೂ ಹೆಚ್ಚು ಯುವಜನತೆ ಮೆರವಣಿಗೆ ರಂಗು ನೀಡಿದರು.