ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಕಂಪನಿಗಳ ಕಾಟದಿಂದ ಅಮಾಯಕ ಜನರು ಬಲಿಯಾಗುತ್ತಿರುವುದಕ್ಕೆ ನೇರವಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಲಕ್ಷ್ಮಿಹೆಬ್ಬಾಳ್ಕರ್ ಅವರೇ ಹೊಣೆ ಎಂದು ಜೆಡಿಎಸ್ ನೇರ ಆರೋಪ ಮಾಡಿದೆ.
ಕಾಂಗ್ರೆಸ್‌ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ರಾಜ್ಯದ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ “ಗೃಹಲಕ್ಷ್ಮಿ” ಹಣ ಹಾಕುವುದಾಗಿ ಆಸೆ ತೋರಿಸಿ, ಈಗ ಸಮಯಕ್ಕೆ ಸರಿಯಾಗಿ ಕೊಡದೆ ಸತಾಯಿಸುತ್ತಿದೆ.
ಕಳೆದ 6 ತಿಂಗಳಿಂದ ಗೃಹಲಕ್ಷ್ಮಿ ಹಣ ಮಹಿಳೆಯರಿಗೆ ಅಕೌಂಟ್‌ಗೆ ಬಂದಿಲ್ಲ. ಪ್ರತಿ ತಿಂಗಳು ನೆಟ್ಟಗೆ ಹಣವನ್ನು ಹಾಕಲು ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ. ಇದರಿಂದ ಗೃಹಲಕ್ಷ್ಮಿ ಹಣವನ್ನೇ ನಂಬಿಕೊಂಡು, ಪ್ರತಿ ತಿಂಗಳು ಸಾಲದ ಕಂತು ಕಟ್ಟಬಹುದು ಎಂದು ನಂಬಿದ್ದ ಜನರೇ ಈಗ ಮೈಕ್ರೋ ಫೈನಾನ್ಸ್‌ಸಂಸ್ಥೆಗಳ ಕಾಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಗೃಹಲಕ್ಷ್ಮಿ ಗ್ಯಾರಂಟಿ ನೆಚ್ಚಿಕೊಂಡು, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಾಲದ ಆಸೆಗೆ ಬೀಳುವ ಬಹುತೇಕ ಜನರು ಈಗ ಕಂತು, ಬಡ್ದಿ ಕಟ್ಟಲಾಗದೇ ಕಿರುಕುಳ ಹಾಗೂ ಬೆದರಿಕೆಗಳಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ದೂರಿದೆ.