ಮಹಿಳೆಯರು ಸದೃಢ ಮತ್ತು ಆರೋಗ್ಯವಾಗಿರಲು ಪೌಷ್ಟಿಕ ಆಹಾರ ಸೇವನೆ ಅಗತ್ಯ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕುಟುಂಬಗಳ ಆಧಾರಸ್ತಂಭ ಮಹಿಳೆಯರು. ಕುಟುಂಬಗಳು ಸಮೃದ್ಧಿಯಾಗಿ ಬೆಳೆದು ಅಭಿವೃದ್ಧಿಯಾಗಬೇಕಾದರೆ ಕುಟುಂಬದ ಮಹಿಳೆಯರ ಆರೋಗ್ಯ ಸದೃಢವಾಗಿರಬೇಕು ಎಂದು ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕಿ ಸಣ್ಣ ರಂಗಮ್ಮ ತಿಳಿಸಿದರು.

ಚಿತ್ರದುರ್ಗ ಕಬೀರಾನಂದ ನಗರದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪೌಷ್ಟಿಕ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಯಾವುದೇ ಮನುಷ್ಯ ಸದೃಢವಾಗಿರಲು ಪೌಷ್ಟಿಕ ಆಹಾರ ಸೇವನೆ ಅಗತ್ಯ. ಪೌಷ್ಟಿಕ ಆಹಾರದೊಂದಿಗೆ ಯೋಗ ಮಾಡುವುದರಿಂದ ಆರೋಗ್ಯವಂತರಾಗಿರಬಹುದು ಎಂದು ತಿಳಿಸಿದರು.

- Advertisement - 

ಪೌಷ್ಟಿಕ ಆಹಾರಕ್ಕೆ ದುಬಾರಿ ಹಣವನ್ನು ತೆರಬೇಕಾಗಿಲ್ಲ. ನಮ್ಮಲ್ಲಿ ಲಭ್ಯವಿರುವ ಸಿರಿಧಾನ್ಯ, ಸೊಪ್ಪು, ತರಕಾರಿ, ಹಣ್ಣುಗಳನ್ನು ಕ್ರಮಬದ್ಧವಾಗಿ ಸೇವಿಸಿದರೆ ಸದೃಢ ಆರೋಗ್ಯ ಪಡೆಯಬಹುದು ಎಂದು ಕಿವಿ ಮಾತುಹೇಳಿದರು. 

ಗ್ರಾಮೀಣ ಪ್ರದೇಶದ ಮಕ್ಕಳ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಅಂಗನವಾಡಿ ಕೇಂದ್ರದ ಮೂಲಕ ಪೌಷ್ಟಿಕ ಆಹಾರ ಸರಬರಾಜು ಮಾಡುತ್ತಿದೆ. ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿ ಉತ್ತಮ ಅಹಾರ ನೀಡಿ ಅವರ ಆರೋಗ್ಯ ವೃದ್ಧಿಗೆ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಪಡಬೇಕು ಎಂದು ತಿಳಿಸಿದರು.

- Advertisement - 

ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಏಕಾಂತಮ್ಮ ಮಾತನಾಡಿ ಇಂದಿನ ಆಹಾರ ಪದ್ಧತಿ ರೋಗರುಜಿನಗಳಿಗೆ ಕಾರಣವಾಗಿದೆ. ಸಾವಯುವ ಆಹಾರ ಸೇವಿಸದೆ ಪೊಟ್ಟಣ ಹಾಗೂ ರೆಡಿಮೇಡ್‌ ಆಹಾರದ ಮೊರೆಹೋಗಿ ನಾನಾ ರೋಗಗಳನ್ನು ಪಡೆಯುತ್ತಿದ್ದೇವೆ. ಎಲ್ಲರೂ ಉತ್ತಮ ತರಕಾರಿ, ಬೇಳೆಕಾಳು, ಸಿರಿಧಾನ್ಯಗಳನ್ನು ಬಳಸಿ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬೇಕು ಎಂದರು.

ಡೆಂಗ್ಯೂ, ಮಲೇರಿಯಾ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳಿಂದ ದೂರ ಉಳಿಯಬೇಕಾದರೆ ಪರಿಸರ ಸ್ವಚ್ಛವಾಗಿರಬೇಕು. ಮನೆಯ ಸುತ್ತಮುತ್ತಲಿನ ಚರಂಡಿಗಳನ್ನು ಸ್ವಚ್ಛತೆಯಾಗಿ ಇಡಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತಾಯಂದಿರಿಗೆ ಪೌಷ್ಟಿಕಾಂಶಗಳ ಮತ್ತು ಕುಟುಂಬ ಯೋಜನೆಗಳು, ತೀವ್ರತೆಯ ಅತಿಸಾರ ಭೇದಿ ಹಾಗೂ ಹೆಚ್ಚೆತ್ತಿರುವ ಜನಸಂಖ್ಯೆಯಿಂದ ಆಗುವ ತೊಂದರೆಗಳ ಕುರಿತು ಅರಿವು ಮೂಡಿಸಲಾಯಿತು.

ಆಶಾ ಕಾರ್ಯಕರ್ತೆ ಶಿಲ್ಪ, ಅಂಗನವಾಡಿ ಕಾರ್ಯಕರ್ತೆ ಸರಳಾ ಸೇರಿದಂತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Share This Article
error: Content is protected !!
";