ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ನೂರಾರು ಬಾಣಂತಿಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಕಣ್ಣುಮುಚ್ಚುತ್ತಿದ್ದರೂ ಸರ್ಕಾರ ಮಾತ್ರ ಕುರುಡಾಗಿದೆ. ಕಾಂಗ್ರೆಸ್ಸಿಗರು ಹೇಳುವ ಮಹಿಳಾ ಸಬಲೀಕರಣ ಬರೀ ಭಾಷಣಕ್ಕೆ ಸೀಮಿತ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಕಳಪೆ ಐವಿ ದ್ರಾವಣ ಪೂರೈಸಿದ ಕಂಪನಿಗೂ ಸರ್ಕಾರಿ ಆಡಳಿತಕ್ಕೂ ಇರುವ ʼಗಂಟಿನʼ ನಂಟೇನು? ಕಳಪೆ ಎಂದು ತಿಳಿದ ಮೇಲೂ ಬಡ ರೋಗಿಗಳು ದಿನನಿತ್ಯ ಚಿಕಿತ್ಸೆಗೆಂದು ಬರುವ ಸರ್ಕಾರಿ ಆಸ್ಪತ್ರೆಗಳಿಗೆ ಅದನ್ನು ಪೂರೈಕೆ ಮಾಡಿದ್ದು ಏಕೆ? ಇಷ್ಟೆಲ್ಲಾ ನಡೆಯುತ್ತಿದ್ದರೂ ಆರೋಗ್ಯ ಸಚಿವರಿಗೆ ತನ್ನ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬುದೇ ತಿಳಿದಿಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.
ರಾಜ್ಯದಲ್ಲಿ ಸರ್ಕಾರ ಆರೋಗ್ಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿದರೆ ಜೀವಂತವಾಗಿ ಹೊರಬರುತ್ತೇವೆಂಬುದರ ಬಗ್ಗೆ ಯಾವುದೇ ಭರವಸೆಯಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಇದುವರೆಗೂ ನಡೆದಿರುವ ಬಾಣಂತಿಯರ ಸಾವುಗಳ ಎಲ್ಲ ಪ್ರಕರಣಗಳ ನ್ಯಾಯಾಂಗ ತನಿಖೆ ನಡೆಸಿ, ಮೃತರಿಗೆ ನ್ಯಾಯ ಒದಗಿಸಿ ಎಂದು ಬಿಜೆಪಿ ಆಗ್ರಹ ಮಾಡಿದೆ.