ಅಗಲಿದ ಗಣ್ಯರಿಗೆ ವಿಧಾನ ಮಂಡಲ ಅಧಿವೇಶನದಲ್ಲಿ ಸಂತಾಪದ ನುಡಿಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ವೃತ್ತಿ ರಂಗಭೂಮಿ ಮತ್ತು ಚಲನಚಿತ್ರರಂಗದ ಜನಪ್ರಿಯ ಹಾಸ್ಯ ಕಲಾವಿದರಾಗಿದ್ದ ಎಂ.ಎಸ್. ಉಮೇಶ್ ಅವರು ತಮ್ಮ ವಿಶಿಷ್ಟ ಸಂಭಾಷಣೆ, ಅಭಿನಯ, ಅಭಿವ್ಯಕ್ತಿಗಳಿಂದ ಕನ್ನಡ ಚಿತ್ರರಸಿಕರ ಮನ ಗೆದ್ದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನಲ್ಲಿ ಜನಿಸಿದ ಉಮೇಶ್ ರವರಿಗೆ ಬಾಲ್ಯದಿಂದಲೇ ರಂಗಭೂಮಿಯ ನಂಟು. ಕೆ. ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ಅ.ನ.ಕೃ. ರವರ ಜಗಜ್ಯೋತಿ ಬಸವೇಶ್ವರನಾಟಕದಲ್ಲಿ ಬಿಜ್ಜಳನ ಮಗನ ಪಾತ್ರದಲ್ಲಿ ಇವರ ಅಭಿನಯ ಎಲ್ಲರ ಗಮನ ಸೆಳೆದಿತ್ತು.

- Advertisement - 

ಗುಬ್ಬಿ ವೀರಣ್ಣ, ಕೆ.ಹಿರಣ್ಣಯ್ಯ, ಎಂ.ಸಿ.ಮಹಾದೇವಸ್ವಾಮಿಯಂತಹ ರಂಗ ದಿಗ್ಗಜರ ಗರಡಿಯಲ್ಲಿ ಬೆಳೆದ ಉಮೇಶ್ ರವರು, ಹಲವು ದಶಕಗಳ ಕಾಲ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಸೇವೆ ಸಲ್ಲಿಸಿದರು. ಕಥಾ ಸಂಗಮತಪ್ಪಿದ ತಾಳ, ಅನುಪಮ, ಕಾಮನ ಬಿಲ್ಲು, ಶೃತಿ ಸೇರಿದಾಗ, ಗಜಪತಿ ಗರ್ವಭಂಗ, ಗುರು ಶಿಷ್ಯರು, ಡೇರ್ ಡೆವಿಲ್ ಮುಸ್ತಫಾ ಸೇರಿದಂತೆ ಸುಮಾರು 700ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.

ಬಹುಮುಖ ಪ್ರತಿಭೆಯಾಗಿದ್ದ ಇವರು ನಟನೆಯ ಜೊತೆಗೆ ಪಿಯಾನೋ ವಾದಕರಾಗಿ, ಕುಂಚ ಕಲಾವಿದರಾಗಿ, ಹಾಡುಗಾರರಾಗಿಯೂ ಖ್ಯಾತಿ ಗಳಿಸಿದ್ದರು.

- Advertisement - 

ಇವರ ಐದು ದಶಕಗಳ ಕಲಾ ಸೇವೆಯಲ್ಲಿ, ಕಥಾಸಂಗಮ ಚಿತ್ರದ ತಿಮ್ಮರಾಯಿಪಾತ್ರಕ್ಕೆ ಉತ್ತಮ ಪೋಷಕನಟ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೇ, ನಾಟಕ ಅಕಾಡೆಮಿ ಪ್ರಶಸ್ತಿ, ಮಹಾನಗರ ಪಾಲಿಕೆ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಹಿರಿಯ ನಟ ಎಂ.ಎಸ್. ಉಮೇಶ್ ರವರ ನಿಧನದಿಂದ ಕನ್ನಡ ಚಿತ್ರರಂಗ ಅನುಭವಿ ಹಾಗೂ ಉತ್ತಮ ನಟನನ್ನು ಕಳೆದುಕೊಂಡಂತಾಗಿದೆ.

ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪ-
ಬೈರಪ್ಪ ಇವರು ಕನ್ನಡ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರಾಗಿದ್ದವರು.
 ಇವರ ಹಲವು ಪುಸ್ತಕಗಳು ಇಂಗ್ಲೀಷ್ ಸೇರಿದಂತೆ ಭಾರತದ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ.

1931ರ ಆಗಸ್ಟ್ 20 ರಂದು ಹಾಸನ ಜಿಲ್ಲೆ ಸಂತೆಶಿವರ ಗ್ರಾಮದಲ್ಲಿ ಜನಿಸಿದ್ದ ಭೈರಪ್ಪನವರು, ಕಿತ್ತು ತಿನ್ನುವ ಬಡತನದ ನಡುವೆಯೂ ಅತಿ ಎತ್ತರಕ್ಕೆ ಬೆಳೆದ ವ್ಯಕ್ತಿತ್ವ.

ಹುಬ್ಬಳ್ಳಿಯ ಶ್ರೀ ಕಾಡಸಿದ್ಧೇಶ್ವರ ಕಾಲೇಜು, ಗುಜರಾತ್‌ನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯ, ದೆಹಲಿಯ ಎನ್‌ಸಿಇಆರ್‌ಟಿ ಮತ್ತು ಮೈಸೂರಿನ ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ತರ್ಕ ಮತ್ತು ಮನೋವಿಜ್ಞಾನದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.

ಇಂಗ್ಲೀಷ್‌ನಲ್ಲಿ ರಚಿಸಿದ ಸತ್ಯ ಮತ್ತು ಸೌಂದರ್ಯಎಂಬ ಮಹಾ ಪ್ರಬಂಧಕ್ಕೆ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಗಳಿಸಿದ್ದರು. ಹುಬ್ಬಳ್ಳಿ, ಗುಜರಾತ್, ದೆಹಲಿಯಲ್ಲಿ ಉಪನ್ಯಾಸಕ ವೃತ್ತಿ ಕೈಗೊಂಡಿದ್ದ ಭೈರಪ್ಪನವರು, ನಾಲ್ಕು ದಶಕಗಳಲ್ಲಿ 25 ಕಾದಂಬರಿಗಳನ್ನು ಬರೆದಿದ್ದಾರೆ.

1999ರಲ್ಲಿ ಕನಕಪುರದಲ್ಲಿ ನಡೆದ 67ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಪರ್ವ, ಗೃಹಭಂಗ, ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಸೇರಿದಂತೆ ಹಲವು ಕಾದಂಬರಿಗಳು ಮರಾಠಿ ಓದುಗರ ಮೆಚ್ಚುಗೆಗೂ ಪಾತ್ರವಾಗಿದ್ದವು.

ವಂಶವೃಕ್ಷಕ್ಕೆ 1966ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1975ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲಿಯೇ ಪರ್ವಅತ್ಯಂತ ಜನಪ್ರಿಯ. 94 ವರ್ಷ ಪೂರೈಸಿದರೂ ಸಹ ಭೈರಪ್ಪನವರು ಜೀವನದ ಬಗೆಗಿನ ಉತ್ಸಾಹವನ್ನು ಹಾಗೆಯೇ ಉಳಿಸಿಕೊಂಡಿದ್ದರು.

ಪದ್ಮಶ್ರೀ, ಪದ್ಮಭೂಷಣ, ಸರಸ್ವತಿ ಸಮ್ಮಾನ್, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಎನ್.ಟಿ.ಆರ್ ರಾಷ್ಟ್ರೀಯ ಪ್ರಶಸ್ತಿ, ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಭೈರಪ್ಪನವರು ತಮ್ಮದೇ ಆದ ದೊಡ್ಡ ಓದುಗ ಬಳಗವನ್ನ ಸೃಷ್ಟಿಸಿಕೊಂಡಿದ್ದರು. ಅನನ್ಯ ಸಾಹಿತಿ, ಅತ್ಯಂತ ಸರಳ ವ್ಯಕ್ತಿತ್ವದ ಭೈರಪ್ಪ ಅವರ ನಿಧನದಿಂದ ಸಾಹಿತ್ಯ ಪ್ರೇಮಿಗಳಿಗೆ ದೊಡ್ಡ ನಷ್ಟವುಂಟಾಗಿದೆ.

ಸಾಲುಮರದ ತಿಮ್ಮಕ್ಕನವರು 114 ವರ್ಷಗಳ ಕಾಲ ಬದುಕಿ ದೈವಾಧೀನರಾಗಿದ್ದಾರೆ. ಇವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದ್ದರು. ಮಕ್ಕಳಿಲ್ಲದ ತಿಮ್ಮಕ್ಕನವರು ಮರಗಿಡಗಳನ್ನೇ ತಮ್ಮ ಮಕ್ಕಳಂತೆ ಸಾಕುತ್ತಿದ್ದರು. ಅವರು ನೆಟ್ಟಿರುವ ಮರಗಳು ಇವತ್ತು ಹೆಮ್ಮರವಾಗಿ ಬೆಳೆದು ನಿಂತು ಜನರಿಗೆ ನೆರಳು ನೀಡುತ್ತಿವೆ. ಸುಮಾರು 4,000 ಕ್ಕೂ ಹೆಚ್ಚು ಮರಗಳನ್ನು ಬೆಳೆಸುವ ಮೂಲಕ ಸಾಲುಮರದ ತಿಮ್ಮಕ್ಕ ಎಂದೇ ಹೆಸರುವಾಸಿಯಾಗಿದ್ದರು.

ಅವರು ಬೆಳೆಸಿದ ಮರಗಳು ದಶಕಗಳಷ್ಟು ಹಳೆಯದಾಗಿದ್ದು, ಅವುಗಳು ಪರಿಸರಕ್ಕೆ ಮತ್ತು ಜೀವವೈವಿಧ್ಯಕ್ಕೆ ಅಪಾರ ಕೊಡುಗೆ ನೀಡಿವೆ. ಪರಿಸರವಾದಿಯಾಗಿದ್ದ ತಿಮ್ಮಕ್ಕನವರ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ತಿಮ್ಮಕ್ಕ ಅವರು ಬೇಲೂರಿನಲ್ಲಿ ತಿಮ್ಮಕ್ಕ ವಸ್ತು ಸಂಗ್ರಹಾಲಯವನ್ನು ಮಾಡಬೇಕು ಎಂದು ತಮ್ಮ ಕೊನೆಯ ಆಸೆಯನ್ನು ಪತ್ರ ಮುಖೇನ ತಿಳಿಸಿದ್ದು, ಈ ಬಗ್ಗೆ ಸರ್ಕಾರ ಪರಿಶೀಲಿಸಲಿದೆ.

ಗಿಡಗಳನ್ನು ಮಕ್ಕಳಂತೆ ಕಂಡು ಪೋಷಿಸಿ ಬೆಳೆಸಿದ್ದ ತಿಮ್ಮಕ್ಕ ಅವರ ಸಾಧನೆಗೆ 1995ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ ಸಂದಿದೆ. 1997ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಹಾಗೂ ನಾಡೋಜ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಪರಿಸರದ ಬಗೆಗಿನ ಇವರ ಅತೀವ ಕಾಳಜಿಯನ್ನು ಪರಿಗಣಿಸಿ ಸರ್ಕಾರವು ಇವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಪರಿಸರ ರಾಯಭಾರಿಯನ್ನಾಗಿ ನೇಮಿಸಿತ್ತು. ಅರಣ್ಯ ಇಲಾಖೆಯ ವತಿಯಿಂದ ಪರಿಸರವಾದಿಗಳಿಗೆ ಪ್ರತಿವರ್ಷ ತಿಮ್ಮಕ್ಕನವರ ಹೆಸರಿನಲ್ಲಿ ಪ್ರಶಸ್ತಿಯನ್ನು ಕೊಡುವ ಬಗ್ಗೆ ಈಗಾಗಲೇ ಘೋಷಣೆ ಮಾಡಿದ್ದೇವೆ.

ತಿಮ್ಮಕ್ಕ ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಸಾವಿನಿಂದ ಉಂಟಾದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಸಿಎಂ ಸಿದ್ದರಾಮಯ್ಯ ಪ್ರಾರ್ಥಿಸಿದರು.

ಮಾಜಿ ಸಚಿವರು, ಹಾಲಿ ಶಾಸಕರಾಗಿದ್ದ ಉತ್ತರ ಕರ್ನಾಟಕ ಭಾಗದ ಹಿರಿಯ ನಾಯಕರಾದ ಹೆಚ್.ವೈ.ಮೇಟಿ ಅವರು ದೀರ್ಘ ಕಾಲ ಜನಪರವಾಗಿ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯಷ್ಟೇ ಚಿಂತಿಸುತ್ತಿದ್ದ ಮುತ್ಸದ್ದಿ ನಾಯಕ. ನನ್ನ ಅನುಯಾಯಿಗಳಲ್ಲಿ ಮೇಟಿ ಅಗ್ರಗಣ್ಯರು.

ವೃತ್ತಿಯಲ್ಲಿ ಕೃಷಿಕರಾಗಿದ್ದ ಮೇಟಿಯವರು ಬಿಲ್‌ಕೆರೂರು ಮಂಡಳ ಪಂಚಾಯಿತಿ ಅಧ್ಯಕ್ಷರಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದರು.

ಬಾಗಲಕೋಟೆ ತಾಲ್ಲೂಕು ಕೃಷಿ ಹುಟ್ಟುವಳಿ ಮಾರಾಟ ಸಮಿತಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ, ಮತ್ತು ಎಂ.ಎಸ್.ಐ.ಎಲ್.ನ ಅಧ್ಯಕ್ಷರಾಗಿ ಡಿ.ಸಿ.ಸಿ ಬ್ಯಾಂಕ್ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 1983 ರಿಂದಲೂ ಹೆಚ್.ವೈ. ಮೇಟಿಯವರೊಂದಿಗೆ ಒಡನಾಡವಿತ್ತು. ನಾನು ಜನತಾ ಪಕ್ಷ, ಜನತಾ ದಳ ಹಾಗೂ ಕಾಂಗ್ರೆಸ್ ಪಕ್ಷದಲ್ಲಿದ್ದರೂ ನಾನು ಕೈಗೊಳ್ಳುವ ತೀರ್ಮಾನಗಳಿಗೆ ಬದ್ಧರಾಗಿದ್ದರು. ಅಹಿಂದ ಸಂಘಟನೆಯಲ್ಲಿ ನನ್ನೊಂದಿಗೆ ಹೆಗಲು ಕೊಟ್ಟು ದುಡಿದವರು.

ಶಾಸಕರಾಗಿ, ಸಂಸದರಾಗಿ, ಸಚಿವರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೇಟಿಯವರು, ಸಜ್ಜನ ರಾಜಕಾರಣಿ. ರಾಜಕೀಯ ತತ್ವಗಳನ್ನು ತಪ್ಪದೇ ಪಾಲಿಸುತ್ತಿದ್ದ ಅವರು ಜನರೊಂದಿಗೆ ಬೆರೆಯುವ ಗುಣವಿದ್ದು, ಜಾತ್ಯಾತೀತ ತತ್ವದ ಪಾಲಕರಾಗಿದ್ದರು. ಅವರು ಎಲ್ಲ ಜಾತಿ-ಧರ್ಮಗಳನ್ನು ಪ್ರೀತಿಯಿಂದ ಕಾಣುವ ಸ್ವಭಾವದವರಾಗಿದ್ದರು.
ಮಾಜಿ ಶಾಸಕ ಶಿವಶರಣಪ್ಪ ಗೌಡ ಪಾಟೀಲ್ ಅವರು ವಿವಿಧ ಸಂಘ-ಸಂಸ್ಥೆಗಳ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದವರು. ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗಿ
, ತುಂಗಭದ್ರಾ ಅಣೆಕಟ್ಟು ಮಂಡಳಿ ಹಾಗೂ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

1999ರಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದಿಂದ 11ನೇ ವಿಧಾನಸಭೆಗೆ ಚುನಾಯಿತರಾಗಿದ್ದರು. ಕ್ಷೇತ್ರದ ಜನರ ಹಾಗೂ ರೈತರ ಪರವಾಗಿ ಸದಾ ಶ್ರಮಿಸುತ್ತಿದ್ದರು. ಶಿವಶರಣಪ್ಪಗೌಡ ಪಾಟೀಲ್ ನಿಧನದಿಂದ ಒಬ್ಬ ಮುತ್ಸದ್ದಿ ಹಾಗೂ ರೈತರ ಪರ ನಾಯಕನನ್ನು ಕಳೆದುಕೊಂಡಂತಾಗಿದೆ.

ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಆರ್.ವಿ. ದೇವರಾಜ್ ಅವರು ವೃತ್ತಿಯಲ್ಲಿ ವ್ಯಾಪಾರಸ್ಥರಾಗಿದ್ದರು. ಉತ್ತಮ ಸಂಘಟಕರಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು.

ಅವರು 1989ರ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ್ತು 1999 ಹಾಗೂ 2013ರಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. 2004 ರಿಂದ 2010ರ ವರೆಗೆ ವಿಧಾನ ಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೇ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿಗೆ ಹೋಗಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿರುವುದು ಅತ್ಯಂತ ನೋವಿನ ಸಂಗತಿ.

ಇತ್ತೀಚೆಗೆ ನನ್ನನ್ನು ಭೇಟಿಯಾಗಿದ್ದ ದೇವರಾಜ್ ಅವರು ಕೆಲವು ವಿಚಾರಗಳ ಬಗ್ಗೆ ಚರ್ಚಿಸಿದ್ದರು. ಅವರ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದ್ದಾರೆ.

 

 

Share This Article
error: Content is protected !!
";