ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕಾರ್ಮಿಕರು ಧ್ವನಿಯಾಗಬೇಕೆಂದು ಸಿಪಿಐ ರಾಜ್ಯ ಕಾರ್ಯದರ್ಶಿ ಕಾಂ.ಸಾತಿ ಸುಂದರೇಶ್ ಕರೆ ನೀಡಿದರು.
ಭಾರತ ಕಮ್ಯುನಿಸ್ಟ್ ಪಕ್ಷ, ಜಿಲ್ಲಾ ಕಾರ್ಮಿಕರ ಸಾಮೂಹಿಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಎ.ಐ.ಟಿ.ಯು.ಸಿ. ಕಚೇರಿ ಮುಂಭಾಗ ಗುರುವಾರ ನಡೆದ ೪೮ ವರ್ಷದ ಹುತಾತ್ಮರ ಕಾರ್ಮಿಕರ ಮೇ. ದಿನಾಚರಣೆಯನ್ನು ಗಂಜರ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
೧೮೮೬ ರಲ್ಲಿ ಅಮೇರಿಕಾದ ಚಿಕಾಗೋದಲ್ಲಿ ಕಾರ್ಮಿಕರು ಎಂಟು ಗಂಟೆ ಕೆಲಸ, ೮ ಗಂಟೆ ವಿಶ್ರಾಂತಿ, ೮ ಗಂಟೆಗಳ ಕಾಲ ಮನೋರಂಜನೆ ಇರಬೇಕೆಂದು ಹೋರಾಟ ಆರಂಭಿಸಿದಾಗ ಏಳು ಪೊಲೀಸರು, ನಾಲ್ಕು ಮಂದಿ ನಾಗರೀಕರು ಬಲಿಯಾಗುತ್ತಾರೆ. ಕೆಲವು ಕಾರ್ಮಿಕ ಮುಖಂಡರು ಗಲ್ಲಿಗೇರುತ್ತಾರೆ. ಅಂದಿನಿಂದ ಪ್ರತಿ ವರ್ಷವೂ ಕಾರ್ಮಿಕ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇಂದಿನ ಕಾರ್ಮಿಕರ ಸ್ಥಿತಿಗತಿ ಕುರಿತು ಚರ್ಚಿಸಬೇಕಾಗಿದೆ. ಸರ್ಕಾರ ಮತ್ತು ಸಿರಿವಂತರು ಸೇರಿಕೊಂಡು ಕಾರ್ಮಿಕರನ್ನು ಶೋಷಣೆ ಮಾಡುತ್ತಿರುವುದರ ವಿರುದ್ದ ಕಾರ್ಮಿಕರು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಕೆಲಸಕ್ಕೆ ತಕ್ಕಂತೆ ಕಾರ್ಮಿಕರಿಗೆ ವೇತನ ಸಿಗುತ್ತಿಲ್ಲ. ರಾಜ್ಯದಲ್ಲಿ ೨೭ ಲಕ್ಷ ಕಾರ್ಮಿಕ ಕುಟುಂಗಳಿಗೆ ಸೂರಿಲ್ಲ. ಸರ್ಕಾರ ಜಾತಿ ಗಣತಿಯೊಂದೆ ನಡೆಸಬಾರದು. ಶಿಕ್ಷಣ ಮತ್ತು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವವರ ಮಾಹಿತಿ ಪಡೆದು ವರದಿ ಸಿದ್ದಪಡಿಸಬೇಕು. ಶಿಕ್ಷಣ ಖಾಸಗೀಕರಣವಾಗುತ್ತಿರುವುದರಿಂದ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಭೂಮಿ ಮತ್ತು ವಸತಿಗಾಗಿ ಹೋರಾಟ ಶುರುವಾಗಿದೆ. ದಿನಕ್ಕೆ ಎಂಟು ಗಂಟೆ ಬದಲಿಗೆ ಹನ್ನೆರಡು ಗಂಟೆಗಳ ಕಾಲ ಕೆಲಸ ಮಾಡುವಂತೆ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತಂದಿರುವುದರ ವಿರುದ್ದ ನಮ್ಮ ಹೋರಾಟ. ಕಾರ್ಮಿಕರು ಮತ್ತು ರೈತರ ಹಿತ ಕಾಪಾಡಬೇಕಾಗಿದೆ ಎಂದರು.
ಎ.ಐ.ಟಿ.ಯು.ಸಿ. ಜಿಲ್ಲಾ ಮಂಡಳಿ ಅಧ್ಯಕ್ಷ ಕಾಂ.ಬಿ.ಬಸವರಾಜ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಗಳದಿಂದ ಕಾರ್ಮಿಕರು, ಜನಸಾಮಾನ್ಯರು ಬಡವಾಗುತ್ತಿದ್ದಾರೆ. ಕಾರ್ಮಿಕರ ಕಾಯಿದೆಗಳನ್ನು ಸರ್ಕಾರ ತಿದ್ದುಪಡಿ ಮಾಡಿದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆಯಿಲ್ಲ. ದಿನಕ್ಕೆ ಹನ್ನೆರಡು ಗಂಟೆ ಕೆಲಸ ಎನ್ನುವುದು ಎಷ್ಟು ಸರಿ ಎನ್ನುವ ಬಗ್ಗೆ ಆಲೋಚನೆಯಾಗಬೇಕು. ಸೂರಿಗಾಗಿ ಸಮರ ಆರಂಭವಾಗಿದೆ ಎಂದು ತಿಳಿಸಿದರು.
ರೈತ ಮುಖಂಡ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು ಮಾತನಾಡಿ ರೈತರು, ಕಾರ್ಮಿಕರು ಒಂದಾದಾಗ ಮಾತ್ರ ದೇಶದಲ್ಲಿ ಅಧಿಕಾರ ಹಿಡಿಯಬಹುದು. ಕೇಂದ್ರ ಸರ್ಕಾರ ರೈತ ವಿರೋಧಿ ಕಾಯಿದೆಗಳನ್ನು ಜಾರಿಗೆ ತರುತ್ತಿರುವುದರ ವಿರುದ್ದ ಹೋರಾಟ ನಿರಂತರವಾಗಿರಬೇಕೆಂದು ನುಡಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‌ಬಾಬು ಮಾತನಾಡಿ ವಸತಿಗಾಗಿ ೧೫೦೦ ಅರ್ಜಿಗಳು ಬಂದಿವೆ. ಆರು ಪಂಚಾಯಿತಿಗಳಲ್ಲಿ ಪಿ.ಡಿ.ಓ.ಗಳಿಗೆ ಅರ್ಜಿಗಳನ್ನು ಕೊಡಲಾಗಿದೆ. ಪ್ರತಿ ಹಳ್ಳಿಗಳಲ್ಲಿಯೂ ನಿವೇಶನರಹಿತರ ಸರ್ವೆ ನಡೆಸಿ ಪಟ್ಟಿ ಕೊಡುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲಾ ಪಂಚಾಯಿತಿ ಸಿ.ಇ.ಓ.ಗಳಿಗೆ ಸೂಚಿಸಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಪ್ರತಿಫಲ ಎಂದು ಹರ್ಷ ವ್ಯಕ್ತಪಡಿಸಿದರು.
ರಾಜೀವ್‌ಗಾಂಧಿ ವಸತಿ ನಿಗಮಗಳಲ್ಲಿ ಅರ್ಜಿಗಳನ್ನು ಕೊಡುಸುತ್ತಿದ್ದೇವೆ. ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ನಮ್ಮ ಹೋರಾಟದ ಮುಖ್ಯ ಉದ್ದೇಶ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಕಮ್ಯುನಿಸ್ಟ್‌ನ ಪ್ರಾಮಾಣಿಕ ಕಾರ್ಯಕರ್ತರನ್ನು ಕಣಕ್ಕಿಳಿಸಲಾಗುವುದು. ಅಂಗನವಾಡಿ ಕಾರ್ಯಕರ್ತೆಯರು ಚುನಾವಣೆಗೆ ಸಜ್ಜಾಗಬೇಕು. ಹಳ್ಳಿಗಳಲ್ಲಿ ಕಾರ್ಮಿಕರ ಸಂಘಟನೆಗಳ ಹೆಸರಿನಲ್ಲಿ ನಿವೇಶನ ಮನೆ ಕೊಡಿಸುವುದಾಗಿ ಯಾರಾದರೂ ಹಣ ವಸೂಲಿಗೆ ಇಳಿದರೆ ಪೊಲೀಸರಿಗೆ ದೂರು ಕೊಡಲಾಗುವುದೆಂದರು.
ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಕಾಂ.ಟಿ.ಆರ್.ಉಮಾಪತಿ ಮಾತನಾಡಿ ಕೇಂದ್ರ ಸರ್ಕಾರ ೨೯ ಕಾಯಿದೆಗಳನ್ನು ರದ್ದುಪಡಿಸಿ ಕೇವಲ ನಾಲ್ಕು ಲೇಬರ್ ಕೋಡ್‌ಗಳನ್ನು ಮಾತ್ರ ಉಳಿಸಿಕೊಂಡಿದೆ. ಕಾರ್ಮಿಕರಿಗೆ ಮಾರಕವಾಗಿರುವ ಈ ಕಾನೂನನ್ನು ಜಾರಿಗೆ ತರಲು ನಾವುಗಳು ಬಿಡುವುದಿಲ್ಲ. ಮುಷ್ಕರದಿಂದ ನ್ಯಾಯಯುತವಾದ ಹಕ್ಕುಗಳನ್ನು ಪಡೆಯುತ್ತೇವೆ. ಮೇ.೨೦ ರಂದು ಅಖಿಲ ಭಾರತ ಮುಷ್ಕರವಿದೆ ಎಂದು ತಿಳಿಸಿದರು.
ಎಐಟಿಯುಸಿ ಜಿಲ್ಲಾ ಗೌರವಾಧ್ಯಕ್ಷ ಕಾಂ.ಸಿ.ವೈ.ಶಿವರುದ್ರಪ್ಪ, ಸಿ.ಪಿ.ಐ.ಜಿಲ್ಲಾ ಸಹ ಕಾರ್ಯದರ್ಶಿ ಕಾಂ.ದೊಡ್ಡುಳ್ಳಾರ್ತಿ ಕರಿಯಣ್ಣ, ಜಿಲ್ಲಾ ಸಹ ಕಾರ್ಯದರ್ಶಿ ಕಾಂ.ಬಿ.ಹೆಚ್.ಹನುಮಂತಪ್ಪ, ಕಾಂ.ಭಾಗ್ಯಮ್ಮ, ಕಾಂ.ಜಾಫರ್, ಕಾಂ.ಪರ್ವಿನ್, ಕಾಂ.ಜಯದೇವಮೂರ್ತಿ, ಕಾಂ.ಕುಮಾರಣ್ಣ, ರೈತ ಮುಖಂಡ ಧನಂಜಯ ಹಂಪಯ್ಯನಮಾಳಿಗೆ ಇವರುಗಳು ವೇದಿಕೆಯಲ್ಲಿದ್ದರು.
ಎ.ಐ.ಟಿ.ಯು.ಸಿ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಾಂ.ಕೆ.ಇ.ಸತ್ಯಕೀರ್ತಿ ಸೇರಿದಂತೆ ನೂರಾರು ಕಮ್ಯುನಿಸ್ಟ್ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮೇ. ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.