ಡಾ.ರಾಜ್‌ನಿವಾಸದಲ್ಲಿ ಅಭೂತಪೂರ್ವ ಸ್ವಾಗತ, ಸನ್ಮಾನಕ್ಕೆ ಒಳಗಾದ ವಿಶ್ವ ಕಪ್ ಗೆದ್ದ ಅಂಧ ಆಟಗಾರ್ತಿಯರು

News Desk

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂಧರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಐತಿಹಾಸಿಕ ಜಯ ಸಾಧಿಸಿ, ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತ ತಂಡದ ಕರ್ನಾಟಕ ರಾಜ್ಯದ ಆಟಗಾರ್ತಿಯರಿಗೆ ಡಾ.ರಾಜ್‌ಕುಮಾರ್ ಅವರ ನಿವಾಸದಲ್ಲಿ ಅಭೂತಪೂರ್ವ ಸ್ವಾಗತ, ಸನ್ಮಾನ ಮಾಡಲಾಯಿತು.

ಡಾ.ರಾಜ್​ಕುಮಾರ್​ ಕುಟುಂಬದಿಂದ ವಿಶ್ವವಿಜೇತ ತಂಡವನ್ನು ನಟ ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಯುವ ರಾಜ್‌ಕುಮಾರ್ ಅವರು ಅತ್ಯಂತ ಪ್ರೀತಿ ಹಾಗೂ ಗೌರವದಿಂದ ಬರಮಾಡಿಕೊಂಡು ಸನ್ಮಾನಿಸಿದರು.

- Advertisement - 

ವಿಶ್ವ ಕಪ್ ಸಾಧಕಿಯರಿಗೆ ಸಿಹಿ ಹಂಚಿ, ಶಾಲು ಹೊದಿಸಿ ಸನ್ಮಾನಿಸುವ ಮೂಲಕ ರಾಜ್ ಕುಟುಂಬದ ಸದಸ್ಯರು ಆಟಗಾರ್ತಿಯರ ಸಾಧನೆ ಕೊಂಡಾಡಿದರು. ಕ್ರೀಡಾಪಟುಗಳೊಂದಿಗೆ ಆತ್ಮೀಯವಾಗಿ ಬೆರೆತ ರಾಘವೇಂದ್ರ ರಾಜ್‌ಕುಮಾರ್ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.

ವಿಶ್ವಕಪ್ ಗೆದ್ದ ಭಾರತೀಯ ತಂಡವು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಅವರಿಂದಲೂ ಶುಭ ಹಾರೈಕೆಗಳನ್ನು ಪಡೆದಿತ್ತು. ಅದಕ್ಕೂ ಮೊದಲು ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿಯಾಗಿ ಸರ್ಕಾರದ ವತಿಯಿಂದ ಅಭಿನಂದಿಸಿದ್ದರು.

- Advertisement - 

ಸನ್ಮಾನ ಮುಂದುವರೆದ ಭಾಗವಾಗಿ ಕನ್ನಡದ ಸಾಂಸ್ಕೃತಿಕ ಪ್ರತೀಕದಂತಿರುವ ಡಾ.ರಾಜ್ ಅವರ ಮನೆಯಲ್ಲಿ ಸಿಕ್ಕ ಗೌರವವು ಆಟಗಾರ್ತಿಯರ ಸಂತಸ ಇಮ್ಮಡಿಗೊಳಿಸಿದೆ.

ಈ ವಿಶೇಷ ಸಂದರ್ಭದಲ್ಲಿ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮಹಾಂತೇಶ್ ಕಿವಡಸಣ್ಣವರ್ ಅವರು ಉಪಸ್ಥಿತರಿದ್ದರು.

ರಾಜಕುಮಾರ್ ಕುಟುಂಬದ ಆತಿಥ್ಯ ಮತ್ತು ಸರಳತೆ ಕಂಡು ಅವರು ಭಾವುಕರಾದರು. ಡಾ.ರಾಜ್ ಕುಟುಂಬವು ಕಲೆಗೆ ಮಾತ್ರವಲ್ಲ, ಕ್ರೀಡೆ ಮತ್ತು ಸಾಮಾಜಿಕ ಕಳಕಳಿಗೂ ಸದಾ ಮುಂಚೂಣಿಯಲ್ಲಿರುತ್ತದೆ. ವಿಶ್ವಕಪ್ ಗೆದ್ದ ನಮ್ಮ ಹೆಣ್ಣು ಮಕ್ಕಳನ್ನು ತಮ್ಮ ಮನೆಗೇ ಆಹ್ವಾನಿಸಿ, ಪ್ರೀತಿಯಿಂದ ಸನ್ಮಾನಿಸಿರುವುದು ನಮ್ಮ ಸಂಸ್ಥೆಗೆ ಮತ್ತು ಅಂಧ ಕ್ರಿಕೆಟ್ ಸಮುದಾಯಕ್ಕೆ ಸಂದ ದೊಡ್ಡ ಗೌರವ ಎಂದು ಮಹಾಂತೇಶ್ ಸಂತಸ ವ್ಯಕ್ತಪಡಿಸಿದರು.

 

Share This Article
error: Content is protected !!
";