ಬಯಲು ಬಸವಣ್ಣ ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯಾವಳಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಡೆಯ ಕಾರ್ತೀಕ ಸೋಮವಾರ ಹಾಗೂ ಬಯಲು ಬಸವಣ್ಣ ಕಡಲೆಕಾಯಿ ಪರಿಷೆ ಪ್ರಯುಕ್ತ ದೊಡ್ಡಬಳ್ಳಾಪುರ ತಾಲೂಕು ಕುಸ್ತಿ ಸಂಘದ ವತಿಯಿಂದ ನವೆಂಬರ್-
25ರಂದು ಸೋಮವಾರ ಕೊಂಗಡಿಯಪ್ಪ ಕಾಲೇಜ್ ಮುಂಭಾಗದ ಬಯಲಿನಲ್ಲಿ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ನಡೆಯಲಿದೆ.

          ಕುಸ್ತಿ ಪಂದ್ಯಾವಳಿ ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಕುಸ್ತಿ ಸಂಘದಿಂದ ನಡೆದ ಪತ್ರಿಕಾಗೋಷ್ಟಿಯಲ್ಲಿ ಕೋಟೆ ಗರಡಿಯ ಹಿರಿಯ ಕುಸ್ತಿಪಟು ಫೈಲ್ವಾನ್ ಚೌಡಪ್ಪ ಮಾತನಾಡಿ ದೊಡ್ಡಬಳ್ಳಾಪುರ ಒಂದು ಕಾಲಕ್ಕೆ ಕುಸ್ತಿ ಪಟುಗಳಿಗೆ ಹಾಗೂ ಕುಸ್ತಿ ಪಂದ್ಯಗಳಿಗೆ ಹೆಸರಾಗಿದ್ದು, ನಗರದ ಎಲ್ಲಾ ಗರಡಿ ಮನೆಗಳಲ್ಲೂ ಫೈಲ್ವಾನರೇ ತುಂಬಿದ್ದರು. ಹೊರಜಿಲ್ಲೆಗಳಿಂದ ಇಲ್ಲಿನ ಗರಡಿ ಮನೆಗಳಲ್ಲಿ ತರಬೇತಿ ಪಡೆದು ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದಂತ ಹಲವಾರು ಕುಸ್ತಿ ಪಟುಗಳಿದ್ದಾರೆ.

ಆದರೆ ದಿನಗಳೆದಂತೆ ಆದುನಿಕತೆ ಹೆಚ್ಚಾದಂತೆ ಕುಸ್ತಿ ಪಂದ್ಯಗಳು ಕಡಿಮೆಯಾಗಿ ಗರಡಿ ಮನೆಗಳು ಫೈಲ್ವಾನರಿಲ್ಲದೆ ಬಣಗುಡುತ್ತಿವೆ. ಹಿಂದಿನ ಕುಸ್ತಿ ಪಂದ್ಯಗಳ ವೈಭವವನ್ನು ಮಾರುಕಳಿಸುವ ಸಲುವಾಗಿ ನಗರದ ಎಲ್ಲಾ ಗರಡಿ ಮನೆಗಳ ಹಿರಿಯ ಕುಸ್ತಿ ಪಟುಗಳೆಲ್ಲ ಒಗ್ಗೂಡಿ ದೊಡ್ಡಬಳ್ಳಾಪುರ ತಾಲೂಕು ಕುಸ್ತಿ ಸಂಘವನ್ನು ಸ್ಥಾಪಿಸಿದ್ದೇವೆ. ಸಂಘದ ಮೂಲಕ ದೊಡ್ಡಬಳ್ಳಾಪುರ ದಲ್ಲಿ ಕುಸ್ತಿ ಪಟುಗಳನ್ನು ಹುಟ್ಟುಹಾಕಿ ಪೋಶಿಸಿ ಕುಸ್ತಿ ಪಂದ್ಯಾವಳಿಗಳನ್ನು ನಡೆಸುವುದು ನಮ್ಮ ಗುರಿಯಾಗಿದೆ. ಅದರ ಮೊದಲ ಪ್ರಯತ್ನವಾಗಿ ಬಯಲು ಬಸವಣ್ಣ ಜಾತ್ರೆ ಪ್ರಯುಕ್ತ 9ಜಿಲ್ಲೆಗಳ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

         ಎಸ್. ಆರ್. ಸಿ. ಗರಡಿಯ ಫೈಲ್ವಾನ್ ಲಕ್ಷ್ಮೀನಾರಾಯಣ ಮಾತನಾಡಿ ಈ ಪಂದ್ಯಾವಳಿಯಲ್ಲಿ ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಸೇರಿದಂತೆ ಹಳೆ ಮೈಸೂರು ಭಾಗದ 9ಜಿಲ್ಲೆಗಳ ಕುಸ್ತಿ ಪಟುಗಳು ಭಾಗವಹಿಸಲಿದ್ದಾರೆ. ಪಂದ್ಯಾವಳಿಗಳು 60ಕೆಜಿ ಒಳಗಿನ ವಿಭಾಗದ ದೊಡ್ಡಬಳ್ಳಾಪುರ ಯುವ ಕಿಶೋರ, 70 ಕೆಜಿ ಒಳಗಿನ ದೊಡ್ಡಬಳ್ಳಾಪುರ ಕಿಶೋರ, 80ಕೆಜಿ ಒಳಗಿನ ದೊಡ್ಡಬಳ್ಳಾಪುರ ಕುಮಾರ,

90ಕೆಜಿ ಒಳಗಿನ ದೊಡ್ಡಬಳ್ಳಾಪುರ ಕೇಸರಿ, 90ಕೆಜಿಗೂ ಹೆಚ್ಚಿನ ಓಪನ್ ವಿಭಾಗದ ದೊಡ್ಡಬಳ್ಳಾಪುರ ಕಂಠೀರವ 60ಕೆಜಿ ಒಳಗಿನ ಮಹಿಳಾ ವಿಭಾಗದ ದೊಡ್ಡಬಳ್ಳಾಪುರ ಕಿಶೋರಿ ಸೇರಿದಂತೆ ಹಲವು ವಿಭಾಗಗಳಲ್ಲಿ ಪಂದ್ಯಾವಳಿ ನಡೆಯಲಿವೆ. ಇದಲ್ಲದೆ ಕುಸ್ತಿ ಸಂಘದ ವತಿಯಿಂದ ಮುಂಬರುವ ದಿನಗಳಲ್ಲಿ ಹಲವಾರು ಯುವ ಕುಸ್ತಿ ಪಟುಗಳನ್ನು ಹುಟ್ಟುಹಾಕುವ ಸಲುವಾಗಿ ಕೋಟೆಗರಡಿ, ವೆಂಕಟರಮಣಪ್ಪ ಗರಡಿ, ಎಸ್. ಆರ್. ಸಿ. ಗರಡಿ ಮನೆಗಳಲ್ಲಿ ನುರಿತ ತರಬೇತು ಧಾರರಿಂದ ಯುವ ಪ್ರತಿಭೆಗಳಿಗೆ ಉಚಿತವಾಗಿ ಕುಸ್ತಿ ತರಬೇತಿಯನ್ನು ನೀಡಲು ಯೋಜನೆ ರೂಪಿಸಲಾಗಿದೆ ಎಂದರು.

          ಕೋಟೆಗರಡಿಯ ಫೈಲ್ವಾನ್ ಶ್ರೀನಿವಾಸ್ ಮಾತನಾಡಿ ನಗರದ ಕೋಟೆ ಗರಡಿ, ಎಸ್. ಆರ್. ಸಿ. ಗರಡಿ ಹನುಮಾನ್ ಗರಡಿ, ಬಾಲಾಂಜಿನೇಯ ಗರಡಿ ಹಾಗೂ ದೇಶದಪೇಟೆ ಗರಡಿಯ ಎಲ್ಲಾ ಕುಸ್ತಿ ಪಟುಗಳನ್ನು ಒಗ್ಗೂಡಿಸಿ ಕುಸ್ತಿ ಸಂಘ ಸ್ಥಾಪನೆಯಾಗಿದೆ.

ಎಲ್ಲಾ ಗರಡಿ ಮನೆಯ ಹಿರಿಯ ಅನುಭವಿ ಫೈಲ್ವಾನರ ಮಾರ್ಗದರ್ಶದಲ್ಲಿ ಕುಸ್ತಿ ಪಂದ್ಯಾವಳಿ ನಡೆಯಲಿದ್ದು ಇದರಲ್ಲಿ ಬೆಡ್ ಕುಸ್ತಿ ಹೊರತು ಪಡಿಸಿ ಮಟ್ಟಿ ಕುಸ್ತಿಗೆ ಆದ್ಯತೆ ನೀಡಲಾಗಿದೆ. ಪಂದ್ಯಾವಳಿಗಳ ಎಲ್ಲಾ ವಿಭಾಗ ಗಳ ಮೊದಲ ಬಹುಮಾನ ವಾಗಿ ಗದೆಗಳನ್ನು ಕೊಡಲಾಗುವುದು. ಸುಮಾರು ನೂರಕ್ಕೂ ಹೆಚ್ಚು ಕುಸ್ತಿ ಪಂದ್ಯಗಳು ನಡೆಯುವ ಸಾಧ್ಯತೆಗಳಿವೆ. ಈಗಾಗಲೇ ಪಂದ್ಯಾವಳಿಗಾಗಿ ಊರಿನ ಎಲ್ಲರ ಸಹಕಾರದಿಂದ ಸಿದ್ಧತೆಗಳು ನಡೆದಿದ್ದು, ಹಿಂದಿನ ಕುಸ್ತಿ ಪಂದ್ಯಗಳ ವೈಭವವನ್ನು ಮರುಕಳಿಸುವಂತೆ ಮಾಡುವುದು ಸಂಘದ ಉದ್ದೇಶವಾಗಿದೆ ಎಂದು ಹೇಳಿದರು.

        ಫೈಲ್ವಾನ್ ಫಿಳ್ಳಣ್ಣ, ರಾಜಘಟ್ಟ ಗಣೇಶ್, ವಿಶ್ವನಾಥ್, ನಗರಸಭಾ ಸದಸ್ಯ ಪದ್ಮನಾಭ, ಮುನಿವೆಂಕಟೇಶ್, ಸುಬ್ಬಣ್ಣ ಸೇರಿದಂತೆ ಸಂಘದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";