ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಶಿಕ್ಷಕರಿಗೆ ಮೋಸ ಮಾಡಿ ಜಾತಿ ಹೆಸರು ಬಳಸಿ, ಹಣ ಹಂಚಿ ಗೆದ್ದಿರುವ ಎಂಎಲ್ಸಿ ಎಲ್ಲಿದ್ದಾರೆ ಎಂದು ಹುಡುಕುವ ಪರಿಸ್ಥಿತಿ ಇದೆಮಾಜಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಲ್ಲಿನ ಎಂಎಲ್ ಸಿ ಇಲ್ಲಿಯವರೆಗೆ ಎಷ್ಟು ಶಾಲೆಗಳಿಗೆ ಭೇಟಿ ಕೊಟ್ಟಿದ್ದಾರೆ. ಎಷ್ಟು ಸಲ ಶಿಕ್ಷಕರ ಪರವಾಗಿ ಧ್ವನಿ ಎತ್ತಿದ್ದಾರೆ, ಎಷ್ಟು ಜಿಲ್ಲೆಗೆ ಭೇಟಿ ಕೊಟ್ಟಿದ್ದಾರೆ, ಏನು ಕೆಲಸ ಮಾಡಿದ್ದಾರೆ ಎಂಬುದರ ಲೆಕ್ಕ ಕೊಡಬೇಕು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಶಿಕ್ಷಕರು ಉಪನ್ಯಾಸಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಂಬಳಕ್ಕೂ ಅಧಿಕಾರಿಗಳ ಕಾಲಿಗೆ ಬೀಳುವ ಪರಿಸ್ಥಿತಿ ಇದೆ. ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕರಿಗೆ ಪಠ್ಯೇತರ ಚಟುವಟಿಕೆಗಳೇ ಹೆಚ್ಚಾಗಿವೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಶಿಕ್ಷಕರಿಗೆ ಪದವೀಧರರಿಗೆ ಕೊಟ್ಟ ಆಶ್ವಾಸನೆ ಈಡೇರಿಸಿಲ್ಲ. ಪಿಯು, ಹೈಸ್ಕೂಲ್ ನಲ್ಲಿ ಒಂದು ಹುದ್ದೆಯು ಭರ್ತಿಯಾಗಿಲ್ಲ. ಎನ್ ಪಿಎಸ್ ತೆಗೆದು ಓಪಿಎಸ್ ಕೊಡುವುದಾಗಿ ಮರುಳು ಮಾಡಿದರು. ಇದೇ ರೀತಿ ಇನ್ನೂ ಎಷ್ಟು ದಿನ ಶಿಕ್ಷಕರನ್ನು ವಂಚಿಸುತ್ತೀರಿ. ಕನ್ನಡ ಬಾರದ ಮಂತ್ರಿ ಇಟ್ಟುಕೊಂಡು ಏನು ಸಾಧಿಸುತ್ತೀರಿ. ಈ ಬಗ್ಗೆ ಶಿಕ್ಷಕರಿಗೆ ಉತ್ತರ ಕೊಡಲೇಬೇಕು ಎಂದು ಆಗ್ರಹಿಸಿದರು.
ಹಿರಿಯೂರಿನಲ್ಲಿ ಬಿಜೆಪಿ ಬಲಿಷ್ಠ-ಮಾಜಿ ಎಂಎಲ್ಸಿ ವೈ.ಎ. ನಾರಾಯಣಸ್ವಾಮಿ ನಗರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಮಾಜಿ ವಿಪ ಸದಸ್ಯ ವೈ.ಎ. ನಾರಾಯಣಸ್ವಾಮಿ, ನನಗೆ ಕಳೆದ 40 ವರ್ಷಗಳ ರಾಜಕೀಯ ಅನುಭವವಿದೆ.

ಶಾಸಕರಾಗಿ, ವಿಧಾನ ಪರಿಷತ್ ಸದಸ್ಯನಾಗಿ, ಸಿಂಡಿಕೇಟ್ ಸದಸ್ಯನಾಗಿ, ಕಾಲೇಜಿನ ಅನುಭವ ಉಪನ್ಯಾಸಕನಾಗಿ, ಕಾಲೇಜು ಕಮಿಟ್ಟಿಗಳಲ್ಲಿ ಅಧ್ಯಕ್ಷನಾಗಿ ಸೇವೆಯ ಅನುಭವ ಇದೆ. ನಾವು ರಾಜಕೀಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ದೇಶದ ಭವಿಷ್ಯದ ಮೇಲಿರುತ್ತದೆ.
ಯಾವ ದೇಶದಲ್ಲಿ ರಾಜಕೀಯ ವ್ಯವಸ್ಥೆ ಗಟ್ಟಿಯಾಗಿರುತ್ತದೆ ಅಲ್ಲಿ ದೇಶ ಅಭಿವೃದ್ಧಿ ಹೊಂದುತ್ತದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಕಾದಾಟ ನಡೆಸುತ್ತಿದ್ದು ಕಳೆದ ಮೂರು ತಿಂಗಳುಗಳಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ರಾಜ್ಯದಲ್ಲಿ ಯಾವುದೇ ಜನಪರ ಕೆಲಸಗಳು ಆಗಿಲ್ಲ. ಆಗಾಗಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯವಾಗಿದೆ. ಮುಂಬರುವ ಆಜ್ಞೆಯ ಪದವೀಧರ ಕ್ಷೇತ್ರದ ಮತದಾರರು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ ಅಭಿನಂದನ್ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಮಂಡಲ ಅಧ್ಯಕ್ಷ ವಿಶ್ವನಾಥ್, ಮುಖಂಡರಾದ ಕೆ.ದ್ಯಾಮೇಗೌಡ, ಸೋಮಣ್ಣ, ರಾಘವೇಂದ್ರ, ಕೇಶವಮೂರ್ತಿ, ಜೆಬಿ. ರಾಜು, ಬಸವರಾಜ್ ನಾಯಕ,
ವೆಂಕಟೇಶ್, ಮಂಜುಳ, ಸಿದ್ದಮ್ಮ, ನಿತೀನ್ ಗೌಡ, ಯೋಗೇಶ್, ಮಂಜುನಾಥ್, ಹನುಮಂತ್, ಪ್ರಜ್ವಲ್, ರಂಗಸ್ವಾಮಿ, ವೇದಮೂರ್ತಿ, ಯಶೋಧರ್, ವಾಸುದೇವ, ಪಾರ್ಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

