ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ತಾಲೂಕಿನ ವಾಣಿ ವಿಲಾಸ ಜಲಾಶಯ 130 ಅಡಿ ಭರ್ತಿಯಾಗಿ ಮೂರನೇ ಬಾರಿಗೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಮೈಸೂರು ಸಂಸ್ಥಾನದ ಮಹಾರಾಜರು ಹಾಗೂ ಸಂಸತ್ ಸದಸ್ಯರಾದ ಯಧುವೀರ್ ಶ್ರೀಕೃಷ್ಣದತ್ತ ಒಡೆಯರ್ ಅವರು ವಿವಿ ಸಾಗರ ಡ್ಯಾಂಗೆ ಮಂಗಳವಾರ ಬಾಗಿನ ಅರ್ಪಿಸಿದರು.
ಹಿರಿಯೂರು ನಗರಕ್ಕೆ ಆಗಮಿಸಿದ ಮಹಾರಾಜರನ್ನು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು. ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮೈಸೂರಿನ ರಾಜಮಾತೆ ಕೆಂಪನಂಜಮ್ಮಣ್ಣಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ನಂತರ ವಾಣಿ ವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿದ ಅವರು ವಾಣಿ ವಿಲಾಸ ಜಲಾಶಯ ಮೂರನೇ ಬಾರಿಗೆ ಕೋಡಿ ಬಿದ್ದಿರುವುದು ಸಂತಸ ತಂದಿದೆ. ಈ ಜಲಾಶಯಕ್ಕೆ ನಾನು ಎರಡನೇ ಬಾರಿಗೆ ಬಾಗಿನ ಅರ್ಪಿಸಿರುವುದು ನನಗೆ ಸಂತಸ ತಂದಿದೆ.
ಈ ಜಿಲ್ಲೆಯ ಜನರಿಗೆ ವರ್ಷ ಪೂರ್ತಿ ನೀರು ಲಭ್ಯವಾಗುವಂತಾಗಲಿ. ಈ ಜಲಾಶಯಕ್ಕೂ ನಮಗೂ ಮೊದಲಿನಿಂದಲೂ ಸಂಬಂಧ ಇರುವುದರಿಂದ ಬಾಗಿನ ಅರ್ಪಣೆ ಮಾಡಲಾಯಿತು. ಗಂಗಾ ಮಾತೆಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎಂದು ಜಲಾಶಯ ತುಂಬಿರುವುದನ್ನು ಬಣ್ಣಿಸಿದರು. ಬಾಗಿನ ಅರ್ಪಿಸುವ ಮೂಲಕ ನಮ್ಮ ವಂದನೆಗಳನ್ನು ಅರ್ಪಿಸುತ್ತೇವೆ. ಯಾರು ಅಧಿಕಾರದಲ್ಲಿ ಇರುತ್ತಾರೋ ಅವರು ಡ್ಯಾಂಗೆ ಬಾಗಿನ ಅರ್ಪಿಸುತ್ತಾರೆ.
ಅಧಿಕಾರ ಇದ್ದಾಗ ಪ್ರಕ್ರಿಯೆ ಏನಿದೆ ಅದನ್ನು ಅನುಸರಿಸುತ್ತಾರೆ. ನಮಗೆ ಹಿಂದೆಯೂ ವಿಶೇಷವಾಗಿ ಆಹ್ವಾನಿಸಿರಲಿಲ್ಲ. ಸ್ಥಳೀಯರು ನಮ್ಮನ್ನು ಆಹ್ವಾನಿಸುತ್ತಿದ್ದರು. ಇವತ್ತೂ ಹಾಗೆ ನಡೆದಿದೆ. ಇದರಲ್ಲಿ ರಾಜಕೀಯ ಮಾಡುವ ಯಾವ ಅವಶ್ಯಕತೆ ಇರುವುದಿಲ್ಲ. ದೇವರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯದಲ್ಲಿ ರಾಜಕೀಯ ಬೇಡ. ಬಿಜೆಪಿ ಬಣ ರಾಜಕೀಯದ ಬಗ್ಗೆ ನಾನು ಮಾತನಾಡೊಲ್ಲ. ಮೇಲ್ಮಟ್ಟದಲ್ಲಿ ನಡೆಯೋದನ್ನು ಕಾರ್ಯಕರ್ತನಾಗಿ ಅನುಭವಿಸುತ್ತೇನೆ. ಎಲ್ಲಾ ಸಮಸ್ಯೆಗಳನ್ನು ಹೈಕಮಾಂಡ್ ಬಗೆಹರಿಸುತ್ತೆ ಎಂದರು.
ಈ ಸಂದರ್ಭದಲ್ಲಿ ಎಂಎಲ್ ಸಿ ಕೆ.ಎಸ್. ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಜಯಣ್ಣ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್. ಆರ್. ಲಕ್ಷ್ಮೀಕಾಂತ್, ಕರ್ನಾಟಕ ರಾಜ್ಯ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ, ಜೀವದಾತೆ ಫೌಂಡೇಶನ್ ಸಂಸ್ಥಾಪಕ ಕೆ. ಅಭಿನಂದನ್, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಯಶೋಧರ್ , ಮುಖಂಡರಾದ ದ್ಯಾಮೇಗೌಡ,
ಶಿವಶಂಕರ್, ಜೆಜಿ ಹಳ್ಳಿ ಮಂಜುನಾಥ್, ಎ. ರಾಘವೇಂದ್ರ, ಎಂಎಸ್ ರಾಘವೇಂದ್ರ, ಹರ್ಷ, ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತರಾಯ, ಟಿ. ಶಂಕರಮೂರ್ತಿ, ಕೇಶವಮೂರ್ತಿ, ರೈತ ಸಂಘದ ಅಧ್ಯಕ್ಷ ಕೆಟಿ. ತಿಪ್ಪೇಸ್ವಾಮಿ, ಆಲೂರು ಸಿದ್ದರಾಮಣ್ಣ ಮುಂತಾದವರು ಉಪಸ್ಥಿತರಿದ್ದರು.