ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ಬಿಜೆಪಿಯ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳ ಪಂಗಡಗಳ ಮುಖಂಡರ ಸಭೆಯನ್ನು ದಾವಣಗೆರೆ ನಗರದ ಸಮೃದ್ಧಿ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.
ಸಭೆಯಲ್ಲಿ ಸೇರಿದ್ದ ಎಲ್ಲ ಲಿಂಗಾಯಿತ ನಾಯಕರು, ಮುಖಂಡರು ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರ ನಾವಿದ್ದೇವೆ ಎನ್ನುವ ಸ್ಪಷ್ಟ ಸಂದೇಶ ಸಾರಲಾಯಿತು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾರ್ಚ್ 4ರಂದು ಮಹಾಸಂಗಮ ಸಭೆ ಹಮ್ಮಿಕೊಂಡಿದ್ದು ಹಾಸನ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳ ವೀರಶೈವ ಲಿಂಗಾಯತ ಸಮಾಜದ ಒಳಪಂಗಡದ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ವೀರಶೈವ ಲಿಂಗಾಯಿತ ಸಮಾಜದ ಎಲ್ಲ ಒಳಪಂಗಡಗಳ ಮಠಾಧೀಶರು, ಮುಖಂಡರುಗಳನ್ನು ಒಂದೆಡೆ ಸೇರಿಸಿ ಬೃಹತ್ ಸಮಾವೇಶವನ್ನು ಬೆಂಗಳೂರು ಅಥವಾ ದಾವಣಗೆರೆಯಲ್ಲಿ ನಡೆಸಲು ತೀರ್ಮಾನಿಸಲಾಯಿತು.
ನಮ್ಮವರೇ ಆದ ಕೆಲ ದುಷ್ಟಶಕ್ತಿಗಳು ಲಿಂಗಾಯಿತ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅಂಥವರಿಗೆ ತಕ್ಕ ಪಾಠ ಕಲಿಸಲು ರಾಜ್ಯಾದ್ಯಂತ ಪ್ರವಾಸ ಮಾಡುವುದರ ಜೊತೆಗೆ ಒಡೆದ ಮನಸುಗಳನ್ನು ಬೆಸೆಯುವ ಕೆಲಸ ಮಾಡುತ್ತೇವೆ. ಯಡಿಯೂರಪ್ಪನವರು ಪಕ್ಷಾತೀತ ನಾಯಕ. ಅವರ ಹೆಸರು ದುರ್ಬಳಕೆ ಮಾಡಿಕೊಳ್ಳದೇ ನಮ್ಮ ಸಮಾಜ ಒಡೆಯುವ ದುಷ್ಟಶಕ್ತಿಗಳಿಗೆ ತಕ್ಕಪಾಠ ಕಲಿಸಬೇಕು.
ಯಡಿಯೂರಪ್ಪರಿಂದ ಸಾಕಷ್ಟು ಜನ ಉದ್ಧಾರವಾಗಿದ್ದು, ಈಗ ಅವರ ವಿರುದ್ಧವೇ ಷಡ್ಯಂತ್ರ ನಡೆಸುತ್ತಿದ್ದಾರೆ. ಹಸುವಿನ ಹಾಲನ್ನು ರಕ್ತ ಬರುವವರೆಗೂ ಕರೆದುಕೊಂಡು, ಈಗ ಅದರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಹಿರಿಯ ನಾಯಕರು ಸಭೆಯಲ್ಲಿ ಬಸನಗೌಡ ಯತ್ನಾಳ್, ಜಿ.ಎಂ ಸಿದ್ದೇಶ್ವರ್ ಸೇರಿದಂತೆ ಯಾರ ಹೆಸರನ್ನೂ ಹೇಳದೆ ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್ ಯಡಿಯೂರಪ್ಪ ನಾಯಕತ್ವದಲ್ಲಿ ಕೇವಲ ಒಬ್ಬ ಶಾಸಕನಿಂದ ಹಿಡಿದು 110 ಶಾಸಕರ ತನಕ ಬಿಜೆಪಿ ಗೆದ್ದಿದೆ. ಯಡಿಯೂರಪ್ಪನವರು ಹೀನಾಯ ಪರಿಸ್ಥಿತಿಯಲ್ಲಿದ್ದಾಗ ಮತ್ತೆ ಅಧಿಕಾರಕ್ಕೆ ತನ್ನಿ ಎಂದು ಹೈಕಮಾಂಡ್ ಕೇಳಿಕೊಂಡಾಗ ಯಡಿಯೂರಪ್ಪ ಓಡಾಡಿ 110 ಶಾಸಕರನ್ನು ಗೆಲ್ಲಿಸಿದರು. ಅವರ ಸಾಮರ್ಥ್ಯದಿಂದ ಬಿಜೆಪಿ ಅಧಿಕಾರಕ್ಕೆ ಬಂತು. ಕೆಲವರು ಎಲ್ಲ ಪಡೆದುಕೊಂಡು ಇದೀಗ ಯಡಿಯೂರಪ್ಪ ಅವರನ್ನು ವಿರೋಧಿಸುತ್ತಿದ್ದಾರೆ. ವಿಜಯೇಂದ್ರ ಅವರೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆಯಬೇಕು. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಮಾಡಾಳ್ ವಿರುಪಾಕ್ಷಪ್ಪ ಸಭೆಯಲ್ಲಿ ಮನವಿ ಮಾಡಿದರು.
ಮಾಜಿ ಸಚಿವ ರೇಣುಕಾಚಾರ್ಯ ವೀರಶೈವ ಲಿಂಗಾಯತ ಸಮಾಜ ಇವತ್ತು ಯಾವುದೇ ಸಮಾಜಗಳ ವಿರುದ್ಧ ಹೋರಾಡುತ್ತಿಲ್ಲ. ಬದಲಿಗೆ ಕೆಲ ದುಷ್ಟ ಶಕ್ತಿಗಳು ಸಮಾಜ ಒಡೆಯಲು ಹೊಂಚು ಹಾಕಿವೆ. ಅವರ ವಿರುದ್ಧದ ಹೋರಾಟ ಮಾಡುತ್ತಿದೆ. ಬೆಂಗಳೂರು, ದಾಬಾಸ್ ಪೇಟೆ, ತುಮಕೂರಿನಲ್ಲಿ ಸಭೆ ಮಾಡಿದ್ದು ಇದರಿಂದ ಕೆಲವರಿಗೆ ಎಲ್ಲೋ ನಡುಕ ಶುರುವಾಗಿದೆ. ಮಾ.4ರಂದು ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಇನ್ನಿತರ ಜಿಲ್ಲೆಗಳಿಂದ ಸಭೆ ಮಾಡುತ್ತೇವೆ. ಯಡಿಯೂರಪ್ಪನವರಿಂದ ಒಂದು ರೂಪಾಯಿ ಹಣ ಪಡೆದಿಲ್ಲ. ನಾವು 5 ಲಕ್ಷ ಜನ ಸೇರಿಸಿ ಒಂದು ದೊಡ್ಡ ಸಮಾವೇಶ ಮಾಡಿ ಇಡೀ ವೀರಶೈವ ಲಿಂಗಾಯಿತ ಸಮಾಜ ಯಡಿಯೂರಪ್ಪ, ವಿಜಯೇಂದ್ರ ಅವರ ಬೆನ್ನಿಗಿದೆ ಎಂದು ತೋರಿಸುತ್ತೇವೆ ಎಂದರು.

