ನಿರಂತರ ಅಧ್ಯಯನದಿಂದ ಸಾಹಿತ್ಯ ಜೀವಂತ ಇರಿಸಲು ಸಾಧ್ಯ- ಯೋಗೀಶ್ ಸಹ್ಯಾದ್ರಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಪುಸ್ತಕಗಳು ಮನುಷ್ಯನ ಅತ್ಯಂತ ವಿಶಿಷ್ಟವಾದ ಅನ್ವೇಷಣೆಗಳಲ್ಲೊಂದು. ನಿರಂತರ ಅಧ್ಯಯನದಿಂದ ಯಾವುದೇ ಸಾಹಿತ್ಯವನ್ನು ಜೀವಂತ ಇರಿಸಲು ಸಾಧ್ಯ. ಮಕ್ಕಳ ಸಾಹಿತ್ಯ ರಚನೆಗೆ ಮಗುವಿನ ಮನಸ್ಸನ್ನು ತಲುಪುವ
, ಸ್ಪಂದಿಸುವ ಗುಣ ಬೇಕಾಗುತ್ತದೆ ಎಂದು ಲೇಖಕ ಹಾಗೂ ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.

ಭರಮಸಾಗರದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಕನ್ನಡ ವಿಭಾಗ ಇವರ ಸಹಯೋಗದಲ್ಲಿ ಸೋಮವಾರದಂದು ಆಯೋಜಿಸಲಾಗಿದ್ದ “ಮಕ್ಕಳ ಸಾಹಿತ್ಯದ ಮಜಲುಗಳು” (ವಿದ್ಯಾರ್ಥಿಗಳಿಂದ ಸ್ವರಚಿತ ಕವನ ವಾಚನ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯೋಗೀಶ್ ಸಹ್ಯಾದ್ರಿ ಅವರು,

ಕಲೆ ಮತ್ತು ಸಾಹಿತ್ಯ ಮನುಷ್ಯನ ಬದುಕಿನೊಂದಿಗೆ ಬೆರೆತು ಹೋಗಿರುವ ಕಾರಣದಿಂದಾಗಿ ವ್ಯಕ್ತಿಯ ಉಸಿರಿರುವವರೆಗೂ ಜೀವಂತವಾಗಿರುತ್ತವೆ. ಮಕ್ಕಳ ಸಾಹಿತ್ಯ, ಸಾಹಿತಿಗಳ ಕುಶಲತೆಗೆ ಹಿಡಿದ ಕೈಗನ್ನಡಿ. ಸಾಹಿತ್ಯಕ್ಕೆ ಸಾವಿಲ್ಲ ಮತ್ತು ಅದ್ಭುತವಾದ ಸಾಹಿತ್ಯ ರಚಿಸಿರುವ ಸಾಹಿತಿಗಳಿಗೂ ಸಾವಿಲ್ಲ ಎಂಬ ಮಾತು ಸಾರ್ವಕಾಲಿಕ ಸತ್ಯವಾಗಿದೆ ಎಂದು ತಿಳಿಸಿದ ಯೋಗೀಶ್ ಸಹ್ಯಾದ್ರಿ ಅವರು ತಂತ್ರಜ್ಞಾನದಲ್ಲಿ ಮನುಷ್ಯ ಎಷ್ಟೇ ಮುಂದುವರೆದರೂ ಪುಸ್ತಕಗಳು ನಮ್ಮಿಂದ ಕೊನೆಯಾಗಲು ಸಾಧ್ಯವಿಲ್ಲ ಎಂದು ಹಲವು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಅರ್ಥೈಸಿದರು.

 ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಯಶೋಧರ್ ಜಿ ಎನ್, ಮಕ್ಕಳ ಸಂಸ್ಕಾರವನ್ನು ಶ್ರೇಷ್ಠವಾಗಿಸುವಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರುವು…

ಹೀಗೆ ಪ್ರಾರಂಭವಾಗುವ ನಮ್ಮ ಸಂಸ್ಕೃತಿಯನ್ನು ಒಳಗೊಂಡ ಸಾಹಿತ್ಯ ಹಿರಿಯರನ್ನ ಗೌರವಿಸುವ ಮತ್ತು ಪರಿಸರವನ್ನು ಪ್ರೀತಿಸುವ ಮಹತ್ವದ ಸ್ಥಾನವನ್ನು  ಪಡೆದುಕೊಂಡಿದೆ. ಅದರಲ್ಲೂ ಮಕ್ಕಳ ಸಾಹಿತ್ಯ ಸಾಹಿತ್ಯದ ಮೂಲ ಎಂದರೂ ತಪ್ಪಾಗಲಾರದು ಜನಪದ ಸಾಹಿತ್ಯದಿಂದ ಪ್ರಾರಂಭವಾಗಿ ಪಂಚತಂತ್ರ ಕಥೆಗಳು,

ಈಸೋಪನ ಕಥೆಗಳು ಅಜ್ಜಿ ಹೇಳುವ ಕಥೆಗಳು ಸಾಹಸ ಕಥೆಗಳು, ಝೆನ್ ಕಥೆಗಳು ಹೀಗೆ ಪ್ರಾರಂಭವಾಗುವ ಮಕ್ಕಳ ಸಾಹಿತ್ಯದ ಕಥಾ ಲೋಕ ಕುತೂಹಲವನ್ನು ಪ್ರಧಾನ ವಸ್ತುವಾಗಿ ಉಳ್ಳದ್ದಾಗಿದೆ.

ಅಲ್ಲಿ ಯಾವುದೇ ವಿಮರ್ಶೆಗೆ, ತರ್ಕಕ್ಕೆ ಅವಕಾಶವಿಲ್ಲ ಅತಿಮಾನುಷ ಕಥೆಗಳನ್ನು  ಜನಪದೀಯವಾಗಿ ನಿರೂಪಿಸುವಾಗ ಅತಿ ಸೂಕ್ಷ್ಮ ಒಳನೋಟಗಳಿಗಿಂತ ಕೌತುಕ/ಕುತೂಹಲಕ್ಕೆ ಹೆಚ್ಚು ಒತ್ತು ನೀಡಬೇಕಾಗುತ್ತದೆ. ಇದರ ಜೊತೆ ಜೊತೆಗೆ ಶಿಶು ಗೀತೆಗಳು ಮಕ್ಕಳನ್ನು ಹೆಚ್ಚು ಆಕರ್ಷಿತರನ್ನಾಗಿ ಮಾಡುವುದರ ಜೊತೆಗೆ ನೆನಪಿನಲ್ಲಿ ಇಟ್ಟುಕೊಳ್ಳಲು ಅನುಕೂಲವಾಗುವ ಹಾಗೆ ಕನ್ನಡದ ಅನೇಕ ಕವಿಗಳು ಮಕ್ಕಳ ಪದ್ಯಗಳನ್ನು ರಚಿಸಿದ್ದಾರೆ.

ಅವರಲ್ಲಿ  ಪಂಜೆ ಮಂಗೇಶರಾಯರು,ರಾಷ್ಟ್ರಕವಿ ಗೋವಿಂದ ಪೈ, ಕುವೆಂಪುರವರು, ಶಿವರಾಮ ಕಾರಂತರು, ಜಿ ಪಿ ರಾಜರತ್ನಂ, ನಾ ಡಿಸೋಜಾ, ನಾ ಕಸ್ತೂರಿ ಇತರರು ಪ್ರಮುಖರಾಗುತ್ತಾರೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಾಹಿತ್ಯದ ಅನೇಕ ಕಥನಗಳು ಕಾರ್ಟೂನ್ ಪ್ರಪಂಚದಲ್ಲಿ ಮೊಬೈಲ್, ಕಂಪ್ಯೂಟರ್, ಟಿ ವಿ ಮಾಧ್ಯಮಗಳ ಮೂಲಕ ಮಕ್ಕಳ ಮನಸ್ಸನ್ನು ರಂಜಿಸುವುದರ ಜೊತೆಗೆ ಅನೇಕ ಆಸಕ್ತಿದಾಯಕ ವಿಷಯಗಳನ್ನು ಬಿತ್ತರಪಡಿಸುತ್ತಿವೆ ಆದರೆ ಮಕ್ಕಳ ಮುಗ್ಧ ಪ್ರಪಂಚವನ್ನು ಮತ್ತಷ್ಟು ವಿಶಾಲವಾಗಿಸುವಲ್ಲಿ ಅವು ಎಡವುತ್ತಿವೆ ಎಂದು ತಿಳಿಸಿದರು.

 ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು  ಪ್ರಾಂಶುಪಾಲರಾದ ಡಾ. ಶಶಿಕಲಾ. ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಪರಿಷತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಸಕ್ರಿಯವಾಗಿದೆ.

ಹಲವಾರು ಶಾಲಾ ಕಾಲೇಜುಗಳಲ್ಲಿ ಮಕ್ಕಳ ಸಾಹಿತ್ಯದ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಕಂಪನ್ನು ಹರಡುತ್ತಿರುವ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಮತ್ತು ತಂಡಕ್ಕೆ ಶುಭಾಶಯಗಳನ್ನು ತಿಳಿಸಿದರು.

ವಿದ್ಯಾರ್ಥಿಗಳು ಇಚ್ಛೆ ಪಟ್ಟರೆ ನಮ್ಮ ಕಾಲೇಜಿನಲ್ಲಿಯೂ ಮಸಾಪ ಘಟಕವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು. ಮ.ಸಾ.ಪ ಉಪಾಧ್ಯಕ್ಷ ಬಿ ವಿಜಯಕುಮಾರ್, ಸಂಘಟಕಿ ನಿರ್ಮಲ ಮಂಜುನಾಥ್ ಮಾತನಾಡಿದರು.

ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಲೋಕೇಶ ನಾಯ್ಕ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿದ್ಯಾರ್ಥಿಗಳಾದ ನರೇಶ್ ಪ್ರಾರ್ಥಿಸಿದರು. ಕವನ, ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕ ಪ್ರೊ. ಮಸೂದ್ ಅಹಮದ್, ಅಧ್ಯಾಪಕರಾದ ಸಂಗಮೇಶ್ವರ, ಸತ್ಯನಾರಾಯಣ, ಮಮತಾ, ಜಿಲ್ಲಾ, ಮಸಾಪ ಪದಾಧಿಕಾರಿಗಳು ಹಾಗೂ ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಮಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

- Advertisement -  - Advertisement - 
Share This Article
error: Content is protected !!
";