ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಯಶಸ್ಸು ಗಳಿಸಲು ವಿದ್ಯಾರ್ಹತೆಯ ಜೊತೆಗೆ ಮಾನಸಿಕ ಸಾಮರ್ಥ್ಯ ಅವಶ್ಯಕವಾಗಿದೆ. ದೇಶದ ಬೆಳವಣಿಗೆಯಲ್ಲಿ ವಿಜ್ಞಾನದ ಕೊಡುಗೆ ಅತ್ಯಮೂಲ್ಯ. ವಿದ್ಯಾರ್ಥಿಗಳು ವೈಜ್ಞಾನಿಕ, ಸಾಮಾಜಿಕ ಚಿಂತನೆಗಳ ಜೊತೆಗೆ ಆರ್ಥಿಕ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕು ಎಂದು ಲೇಖಕ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.
ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಅಂತಿಮ ವರ್ಷದ ಎಂ.ಎಸ್ಸಿ ರಸಾಯನ ಶಾಸ್ತ್ರದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ “ಅಣುಬಂಧ” ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಯೋಗೀಶ್ ಸಹ್ಯಾದ್ರಿ ಅವರು, ವಿದ್ಯಾರ್ಥಿಗಳು ಉನ್ನತ ಅಧ್ಯಯನದ ಮೂಲಕ ವೈಜ್ಞಾನಿಕ ಸಂಶೋಧನೆಗಳಿಗೆ ತೆಗೆದುಕೊಳ್ಳಬೇಕಿದೆ ಮತ್ತು ಸಾಮಾಜಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಸಹಕರಿಸಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ತಾವು ಕಲಿತ ಶಾಲೆ ಕಾಲೇಜುಗಳಿಗೆ ಭೇಟಿ ನೀಡಿ ಭವಿಷ್ಯದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕಾರ್ಯಗಳಿಗೆ ಜೊತೆಯಾಗಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಗೋಪಾಲಪ್ಪ ಅವರು ವಿಜ್ಞಾನದ ವಿದ್ಯಾರ್ಥಿಗಳಿಗೆ ಅತ್ಯಂತ ವಿಶೇಷವಾದ ಶಕ್ತಿಯಿದೆ. ರಸಾಯನ ಶಾಸ್ತ್ರದಲ್ಲಿ ಪಾಂಡಿತ್ಯ ಗಳಿಸಿದ ಅನೇಕ ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ದೊರಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನದ ಕೊಡುಗೆ ಅನನ್ಯ ಎಂದು ಅಭಿಪ್ರಾಯಪಟ್ಟರು.
ಪ್ರಾಧ್ಯಾಪಕ ಡಾ. ನಾಗರಾಜ್, ರಾಘವೇಂದ್ರ, ನಿವೃತ್ತ ಕಛೇರಿ ಆಡಳಿತಾಧಿಕಾರಿ ನಾಗೇಂದ್ರ ಬಾಬು ಮಾತನಾಡಿದರು. ಎಂ.ಎಸ್ಸಿ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ದೇವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ರವಿಕಾಂತ್, ಎಲ್ಲ ವಿಷಯಗಳ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.