ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ದಿನದಿಂದ ದಿನಕ್ಕೆ ಕಂಗಟ್ಟು ಆಗುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಸುತರಾಂ ಒಪ್ಪದ ಸಿ.ಪಿ.ಯೋಗೇಶ್ವರ್ ಅವರು ಸೋಮವಾರ ದಿಢೀರ್ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿ ಕೇಂದ್ರ ವರಿಷ್ಠರಿಗೆ ಮತ್ತು ಜೆಡಿಎಸ್ ಪಕ್ಷಕ್ಕೆ ಸಡ್ಡು ಹೊಡಿದಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದಾಗಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹಾಗೂ ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿ ಸಿಪಿ ಯೋಗೇಶ್ವರ್ ತಮ್ಮ MLC ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸೋಮವಾರ ಇಂದು ಸಂಜೆ ಯೋಗೇಶ್ವರ್ ತಮ್ಮ ಬೆಂಬಲಿಗರೊಂದಿಗೆ ಹುಬ್ಬಳ್ಳಿಗೆ ತೆರಳಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ, ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಸಭಾಧ್ಯಕ್ಷ ಬಸವರಾಜ ಹೊರಟ್ಟ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿ ಯೋಗೇಶ್ವರ್, ರಾಜೀನಾಮೆ ನೀಡುವುದು ಅನಿವಾರ್ಯವಾಗಿತ್ತು. ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ MLC ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಯಾವುದೇ ಪಕ್ಷ ಸೇರದೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಚನ್ನಪಟ್ಟಣ ಕ್ಷೇತ್ರವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ನಿರ್ಧರಿಸಿರುವ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಬೇಕು ಎಂಬ ಗೊಂದಲದಲ್ಲಿದೆ. ಈ ನಡುವೆ ಸಿಪಿ ಯೋಗೇಶ್ವರ್ ಅವರು ಹುಬ್ಬಳ್ಳಿಗೆ ತೆರಳಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೆ ಅವರನ್ನು ಕಾಂಗ್ರೆಸ್‌ಗೆ ಕರೆತರಲು ತೆರೆಮರೆಯಲ್ಲಿ ಕಸರತ್ತು ನಡಿದಿವೆ ಎಂದು ಹೇಳಲಾಗುತ್ತಿದ್ದು ರಾಜಕೀಯ ತಿರುವು ಪಡೆಯಲಿದೆ ಎಂದು ಸದ್ಯದಲ್ಲಿ ತಿಳಿಯಲಿದೆ.