ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಪ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಕ್ಷಿಪ್ರ ರಾಜಕೀಯ ಬೆಳವಣೆಗೆ ಸಂಭವಿಸಿದ್ದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬುಧವಾರ ಸಿ. ಪಿ. ಯೋಗೇಶ್ವರ್ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕೆಪಿಸಿಸಿ ಕಛೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ಬಿಜೆಪಿ ಹೈಕಮಾಂಡ್ ನಾಯಕರ ಮಾತಿಗೆ ಮನ್ನಣೆ ಕೊಡದ ಪಕ್ಷದ ನಾಯಕ ಸಿ.ಪಿ.ಯೋಗೇಶ್ವರ್ ತನ್ನ ವಾಟ್ಸಪ್ ಮೂಲಕ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ವಿಜಯೇಂದ್ರ ಅವರಿಗೆ ರಾಜೀನಾಮೆ ನೀಡಿರುವ ಘಟನೆ ಕೂಡ ನಡೆದಿದೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಪಿ ಯೋಗೇಶ್ವರ್ ಅವರಿಗೆ ಡಿ.ಕೆ ಶಿವಕುಮಾರ್ ಪಕ್ಷದ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಗುರುವಾರ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ. ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಚಿವರು ಹಾಗೂ ಹಾಗೂ ಬಿಜೆಪಿಯ ಹಿರಿಯ ನಾಯಕ ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್ ತತ್ವ, ಸಿದ್ಧಾಂತಗಳಮೇಲೆ ನಂಬಿಕೆಯಿಟ್ಟು ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಅವರನ್ನು ಅಭಿನಂದಿಸಿ ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿ ಬರ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.
ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಈಗಾಗಲೇ ಯೋಗೇಶ್ವರ್ ಅವರು ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದ್ದಾರೆ. ಗುರುವಾರ ಅವರು ನಾಮಪತ್ರ ಸಲ್ಲಿಕೆ ಮಾಡಲು ತಯಾರಿಯನ್ನೂ ಸಹ ಮಾಡಿಕೊಂಡಿದ್ದಾರೆ. ನಮ್ಮ ರಾಮನಗರ ಜಿಲ್ಲೆಯ ಪ್ರಮುಖ ಮುಖಂಡರಲ್ಲಿ ಒಬ್ಬರಾದ ಯೋಗೇಶ್ವರ್ ಅವರು ಯಾವುದೇ ಷರತ್ತಿಲ್ಲದೆ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಈಗಾಗಲೇ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದೇವೆ. ಯೋಗೇಶ್ವರ್ ಅವರು ರಾಜಕಾರಣ ಆರಂಭಿಸಿದ್ದೇ ಕಾಂಗ್ರೆಸ್ ಪಕ್ಷದಿಂದ, ಹೀಗಾಗಿ ಮರಳಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ನಾನೂ ಕೂಡ ಕಾಂಗ್ರೆಸ್‌ಪಕ್ಷದಲ್ಲಿರಬೇಕು ಎಂದು ಬಯಸಿದ್ದಾರೆ. ಎಲ್ಲ ಪಕ್ಷಗಳನ್ನೂ ಅವರು ನೋಡಿದ್ದಾರೆ. ಪಕ್ಷೇತರರಾಗಿಯೂ ಗೆದ್ದಿದ್ದಾರೆ. ಜೆಡಿಎಸ್ ಜತೆ ಸಂಬಂಧ ಹೊಂದಿ ಬಿಜೆಪಿ ಅಭ್ಯರ್ಥಿ ಗೆಲ್ಲಲು ಕೆಲಸ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಸಮೃದ್ಧವಾಗಿದೆ. ಚನ್ನಪಟ್ಟಣಕ್ಕೆ ಯೋಗೇಶ್ವರ್ ಅವರು ಹೊಸ ಶಕ್ತಿ ತುಂಬಲಿದ್ದಾರೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ತುಂಬು ಹೃದಯದಿಂದ ಅವರನ್ನು ಸ್ವಾಗತಿಸುತ್ತೇನೆ ಎಂದು ಡಿಸಿಎಂ ತಿಳಿಸಿದರು.
ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಮಾತನಾಡಿ, ಕಳೆದ ಎರಡು ಮೂರು ತಿಂಗಳಿಂದ ನಡೆದ ರಾಜಕೀಯ ಬೆಳವಣಿಗೆಗಳು ನನಗೆ ಅಸಮಾಧಾನ ಮೂಡಿಸಿದವು, ಮೈತ್ರಿ ಆದ ನಂತರ ನನ್ನ ರಾಜಕೀಯ ಬೆಳವಣಿಗೆಗೆ ಪೂರಕ ವಾತಾವರಣ ಇರಲಿಲ್ಲ, ಕೆಲವೊಮ್ಮೆ ನಮಗೆ ಅಂತ ನಾವು ಕಟ್ಟಿದ ಮನೆಯಲ್ಲಿ ನಾವು ವಾಸ ಮಾಡಲು ಆಗುವುದಿಲ್ಲ, ನಾನು ಯಾವುದೇ ಒತ್ತಡ ಹಾಗೂ ಷರತ್ತು ಇಲ್ಲದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ, ಈ ಹಿಂದೆ ನಾನು ಡಿ.ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ರಾಜಕೀಯ ಆರಂಭಿಸಿದ್ದೆ. ಈಗ ಮತ್ತೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದೇನೆ. ಇನ್ನು ಮುಂದೆ ಕ್ಷೇತ್ರದ ಅಭಿವೃದ್ಧಿಗಾಗಿ ಎಲ್ಲರ ಒಟ್ಟುಗೂಡಿ ಕೆಲಸ ಮಾಡುತ್ತೇವೆ ಎಂದರು.
ಬಿಜೆಪಿ ಟಿಕೆಟ್ ಘೋಷಣೆ ಆಗದಿರುವ ಕಾರಣ ಸಿಪಿ ಯೋಗೇಶ್ವರ್ ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚಿಸಿದರು. ಬಳಿಕ ಒಂದೇ ಕಾರಿನಲ್ಲಿ ಇಬ್ಬರೂ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಆನಂತರ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ.
ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಮಾಹಿತಿ ನಿನ್ನೆ ರಾತ್ರಿಯೇ ಸಿಎಂಗೆ ಸುಳಿವು ಸಿಕ್ಕಿತ್ತು. ಹೀಗಾಗಿ ಅವರು ವಯನಾಡಿಗೆ ಹೋಗುವುದನ್ನು ಬಿಟ್ಟು ನೇರವಾಗಿ ಮೈಸೂರಿನಿಂದ ಬೆಂಗಳೂರಿಗೆ ಆಗಮಿಸಿದ್ದರು ಎನ್ನಲಾಗಿದೆ.