ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ವೀರಸಂನ್ಯಾಸಿ- ವಿಶ್ವವಿಜೇತ-ವಿಶ್ವಮಾನವ ಸ್ವಾಮಿ ವಿವೇಕಾನಂದರು ಯೋಗಿವರರಾಗಿದ್ದರು ಎಂದು ಚಳ್ಳಕೆರೆ ಶ್ರೀಶಾರದಾಶ್ರಮದ ಅಧ್ಯಕ್ಷೆ ಮಾತಾಜೀ ತ್ಯಾಗಮಯೀ ತಿಳಿಸಿದರು.
ನಗರದ ಶಾಂತಿನಗರದ ಶ್ರೀಗಣಪತಿ ದೇವಸ್ಥಾನದ ಆವರಣದಲ್ಲಿ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ “ಸ್ವಾಮಿ ವಿವೇಕಾನಂದರ 164ನೇ ಜಯಂತ್ಯುತ್ಸವ”ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಯೋಗಿಗಳಲ್ಲಿ ಸರ್ವಶ್ರೇಷ್ಠರಾದ ಸ್ವಾಮಿ ವಿವೇಕಾನಂದರಲ್ಲಿ ಭಗವಂತನ ಮಹಿಮೆಯ ಎಲ್ಲಾ ವಿಶೇಷ ಮುಖಗಳನ್ನು,ಅಪಾರ ಸೇವಾ ಮನೋಭಾವ, ಪ್ರಚಂಡ ಬುದ್ಧಿಮತ್ತೆ,ಭಕ್ತಿಭಾವ ಭರಿತ ಭಜನೆಗಳನ್ನು ಹಾಡುವ ಮತ್ತು ಧ್ಯಾನಸಿದ್ಧಿಯ ಸಾಮರ್ಥ್ಯವನ್ನು ಕಾಣುತ್ತೇವೆ.
ಅವರು ಕರ್ಮಯೋಗಿಯಾಗಿ, ಜ್ಞಾನಯೋಗಿ,ಧ್ಯಾನ ಯೋಗಿ,ಭಕ್ತಿಯೋಗಿಯಾಗಿಯೂ ಕಾಣುತ್ತಾರೆ. “ಯೋಗಿವರ” ಎಂದರೆ ಧ್ಯಾನಯೋಗದಲ್ಲಿ ಗುರಿಯನ್ನು ತಲುಪಿದವರು ಸ್ವಾಮಿ ವಿವೇಕಾನಂದರು ಎಂಬುವುದಕ್ಕೆ ಅವರ ಜೀವನದ ಅನೇಕ ಘಟನೆಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು “ಸ್ವಾಮಿ ವಿವೇಕಾನಂದರ ಕೊಲಂಬೊ ಇಂದ ಆಲ್ಮೋರಾ ಪ್ರವಚನಗಳ ಸಂದೇಶ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದ ಬಾಪೂಜಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಮತ್ತು ಪ್ರಾಧ್ಯಾಪಕ ಡಾ.ಸಿ.ಟಿ.ಬಸವರಾಜಪ್ಪ ಅವರು ಭಾರತದ ಸನಾತನ ಹಿಂದೂ ಧರ್ಮದ ವಿಜಯ ಪತಾಕೆಯನ್ನು ಅಮೇರಿಕಾದ ಚಿಕಾಗೋ ನಗರದ ಸರ್ವಧರ್ಮ ಸಮ್ಮೇಳನದಲ್ಲಿ ಹಾರಿಸಿದ ಸ್ವಾಮಿ ವಿವೇಕಾನಂದರ ಶಕ್ತಿಮಂತ್ರಗಳು ಇಂದಿನ ಯುವಜನಾಂಗಕ್ಕೆ ಆದರ್ಶವಾಗಬೇಕು, ಭಾರತೀಯರು ಉಪನಿಷತ್ತುಗಳನ್ನು ಸಮಗ್ರವಾಗಿ ಅಧ್ಯಯನ ಮಾಡುವ ತುರ್ತು ಅವಶ್ಯಕತೆಯಿದೆ.
ವೇದಾಂತ ಮತ್ತು ಉಪನಿಷತ್ ನ ಜ್ಞಾನವನ್ನು ಪ್ರಾಯೋಗಿಕವಾಗಿ ನಿತ್ಯ ಜೀವನದಲ್ಲಿ ಜಾರಿಗೆ ತಂದ ಶ್ರೀರಾಮಕೃಷ್ಣ ಪರಮಹಂಸರಿಂದ ಪಡೆದ ವೇದಾಂತದ ಸಾರವನ್ನು ಇಡೀ ಜಗತ್ತಿಗೆ ಉಣಬಡಿಸಿದ ಕೀರ್ತಿ ವಿಶ್ವ ವಿಜೇತ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ.ಇಂದಿನ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು ಮೌಲ್ಯಗಳಿಲ್ಲದ ಸತ್ವರಹಿತ ಶಿಕ್ಷಣ ವಾಗಿದೆ.
ಶೈಕ್ಷಣಿಕ ವ್ಯವಸ್ಥೆಯ ಬದಲಾವಣೆಯ ಮೂಲಕ ಮಾತ್ರ ಸಮಾಜದ ಪರಿವರ್ತನೆ ಸಾಧ್ಯವಿದ್ದು ಸ್ವಾಮಿ ವಿವೇಕಾನಂದರ ಚಿಂತನೆಗಳ ಬೆಳಕಿನಲ್ಲಿ ಪಠ್ಯಕ್ರಮ ರೂಪುಗೊಳ್ಳಬೇಕಾದ ಅಗತ್ಯತೆಯಿದೆ,ಸ್ವಾಮಿ ವಿವೇಕಾನಂದರ ಸಮಗ್ರ ಜೀವನವನ್ನು ಪ್ರತಿಯೊಬ್ಬರೂ ಓದಬೇಕು ಎಂದು ಕಿವಿಮಾತು ಹೇಳಿದರು.
ಜಯಂತ್ಯುತ್ಸವದ ಪ್ರಯುಕ್ತ ಶಾಂತಿನಗರದ ಶ್ರೀಗಣಪತಿ ಭಜನಾ ಮಂಡಳಿಯ ಸುನೀತಾ ಗೋಪಾಲಕೃಷ್ಣ ಮತ್ತು ಸಂಗಡಿಗರಿಂದ ವಿಶೇಷ ಭಜನೆಗಳು, ಶ್ರೀಸುಬ್ರಮಣ್ಯ ಶಾಸ್ತ್ರಿ ಅವರಿಂದ ಭಜನೆಗೆ ತಬಲಾ ಸಾಥ್, ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ “ಶ್ರೀವಿವೇಕ ಗಾನ ಲಹರಿ”, ಶ್ರೀಶಾರದಾ ಬಾಲಕ ಸಂಘದ ಮಕ್ಕಳಿಂದ ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ ಹಾಗೂ ಚೈತನ್ಯದಾಯಕ ನುಡಿಗಳ ಪಠಣ ನಡೆದರೆ, ಜೀವ ಶಿವ ಸೇವೆ ಮಾಡಿದ ಸೂಲಗಿತ್ತಿ ತಳುಕಿನ ತಿಮ್ಮಕ್ಕ, ಆರ್ಥಿಕವಾಗಿ ದುರ್ಬಲರಾದ ಮೂರು ಜನ ಮಹಿಳೆಯರಿಗೆ ಅಗತ್ಯ ವಸ್ತುಗಳ ವಿತರಣೆ ಸೇರಿದಂತೆ ಕಾರ್ಯಕ್ರಮಕ್ಕಾಗಿ ದುಡಿದ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕೊನೆಯಲ್ಲಿ ದಿವ್ಯತ್ರಯರಿಗೆ ಮಂಗಳಾರತಿ ಮತ್ತು ವಿಶೇಷ ಅನ್ನಪ್ರಸಾದ, ಪುಸ್ತಕ ಮಾರಾಟದ ವ್ಯವಸ್ಥೆ ಮಾಡಲಾಗಿತ್ತು.
ಜಯಂತ್ಯುತ್ಸವದಲ್ಲಿ ಸಾಮಾಜಿಕ ಹೋರಾಟಗಾರ ಎಚ್.ಎಸ್.ಸೈಯದ್, ಲೋಕಮಾನ್ಯ, ಸುನೀತಾ ಗೋಪಾಲಕೃಷ್ಣ, ಅರ್ಚಕ ವಿಶ್ವನಾಥ್, ನಾಗಶಯನ ಗೌತಮ್, ಬಾಲಾಜಿ ವೆಂಕಟೇಶ್,ಎಚ್ ಲಕ್ಷ್ಮೀದೇವಮ್ಮ , ಎಂ ಗೀತಾ ನಾಗರಾಜ್, ಯತೀಶ್ ಎಂ ಸಿದ್ದಾಪುರ,ಗೀತಾ ವೆಂಕಟೇಶರೆಡ್ಡಿ ಇದ್ದರು.

