ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದ ಆಸ್ತಿ ನಮ್ಮ ಪರಂಪರೆ, ಸಂಸ್ಕೃತಿ ಎಂಬುದನ್ನು ಯುವಕರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ಬ್ರಹ್ಮಾವರ – ಅಗ್ರಹಾರದಲ್ಲಿ ‘5ನೇ ವರ್ಷದ ಹುಲಿ ವೇಷ 2025′ ಪ್ರಯುಕ್ತ ಹಮ್ಮಿಕೊಂಡಿದ್ದ ‘ಯುವ ಬ್ರಹ್ಮಾವರ‘ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅತ್ಯಂತ ಪ್ರೀತಿಯಿಂದ ಅಭಿಮಾನದಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಯುವಶಕ್ತಿ ಏನೆಂಬುದನ್ನು ಅರಿತುಕೊಂಡು ನನ್ನ ಜೀವನದುದ್ದಕ್ಕೂ ಯುವಕರನ್ನು ಬೆಳೆಸಬೇಕೆಂಬ ಚಿಂತನೆಯನ್ನು ಯಾವಾಗಲೂ ಇಟ್ಟುಕೊಂಡಿದ್ದೇನೆ ಎಂದು ಸಚಿವರು ತಿಳಿಸಿದರು.
ಯುವ ಬ್ರಹ್ಮಾವರ 5ನೇ ವರ್ಷದ ಹುಲಿ ವೇಷ ಕಾರ್ಯಕ್ರಮವನ್ನು ಆಯೋಜಿಸಿದವರಿಗೆ ರಾಜ್ಯದ ಉಪ ಮುಖ್ಯಮಂತ್ರಿಯಾಗಿ, ಪಕ್ಷದ ಅಧ್ಯಕ್ಷನಾಗಿ ಅಭಿನಂದಿಸುತ್ತೇನೆ. ದೇಶದ ಆಸ್ತಿ ನಮ್ಮ ಪರಂಪರೆ, ಸಂಸ್ಕೃತಿ ಎಂಬುದನ್ನು ಯುವಕರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಡಿಸಿಎಂ ಕಿವಿ ಮಾತು ಹೇಳಿದರು.
ದೇಶದ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುತ್ತಿರುವ ನಿಮಗೆ ಪ್ರೋತ್ಸಾಹ ನೀಡಲು ನಮ್ಮ ಸರ್ಕಾರ ಬದ್ಧವಿದೆ. ಯುವಕರ ಸಂಭ್ರಮ, ಯುವಕರ ಶಕ್ತಿ, ಯುವಕರ ಆಚಾರಗಳನ್ನು ನಾನು ಕಣ್ಣಾರೆ ನೋಡಿ ಆನಂದಿಸಲು ಬಂದಿದ್ದೇನೆ. ಯುವಕರು ಇದನ್ನು ಮುಂದುವರೆಸಿಕೊಂಡು ಹೋಗಬೇಕು. ಯೋಗಕ್ಕಿಂತ ಯೋಗಕ್ಷೇಮ ಬಹಳ ಮುಖ್ಯ ಎಂದು ಶಿವಕುಮಾರ್ ಅವರು ತಿಳಿಸಿದರು.

