ಯುವತಿಯರು ಪ್ರೀತಿ ಪ್ರೇಮದ ಸುಳಿಗೆ ಸಿಲುಕಬೇಡಿ-ಎಸ್ಪಿ ಉಮಾ ಪ್ರಶಾಂತ್

News Desk

ಚಂದ್ರವಳ್ಳಿ ನ್ಯೂಸ್, ಹರಿಹರ:
ವಿದ್ಯೆ ಕಲಿಯುವ ವಯಸ್ಸಿನಲ್ಲಿ ಪ್ರೀತಿ
, ಪ್ರೇಮದ ಸುಳಿಗೆ ಸಿಲುಕಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ, ಉನ್ನತ ಶಿಕ್ಷಣ ಪೂರೈಸಿ ಉದ್ಯೋಗ ಪಡೆದು ನಂತರ ಮದುವೆ ಬಗ್ಗೆ ನಿರ್ಣಯಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಕಿವಿ ಮಾತು ಹೇಳಿದರು.

   ನಗರದ ಹೊರವಲಯದ ಅನಗವಾಡಿ ಸಮೀಪದ ಪ್ರೊ,ಬಿ. ಕೃಷ್ಣಪ್ಪ ಪುಣ್ಯಸ್ಥಳದ ಮೈತ್ರಿವನದಲ್ಲಿ ಮಾನವ ಬಂಧುತ್ವ ವೇದಿಕೆ, ಸತೀಶ್ ಜಾರಕಿಹೊಳಿ ಫೌಂಡಶನ್‌ನಿoದ ಆಯೋಜಿಸಿದ್ದ ಮಹಿಳಾ ಗ್ರಾಮ ಅಧಿಕಾರಿ ಅಕಾಂಕ್ಷಿಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಸ್.ಎಸ್.ಎಲ್.ಸಿ., ಪಿಯುಸಿ ಹಂತದಲ್ಲೆ ಪ್ರೀತಿ, ಪ್ರೇಮದ ಸುಳಿಯಲ್ಲಿ ಸಿಲುಕಿ ಬದುಕಿನ ಭವಿಷ್ಯ ಹಾಳು ಮಾಡಿಕೊಳ್ಳಬಾರದೆಂದು ತಿಳಿ ಹೇಳಿದರು.

   ಕಾನೂನು ಪ್ರಕಾರ 18 ವರ್ಷವಾದ ಮೇಲೆ ತಾವು ತಮಗಿಷ್ಟದ ವ್ಯಕ್ತಿಯೊಂದಿಗೆ ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳಬಹುದೆಂಬ ಧೋರಣೆ ಹೊಂದಿದ್ದರೆ ಬದುಕಿನಲ್ಲಿ ಸಂಕಷ್ಟಗಳನ್ನು ಎದುರಿಸ ಬೇಕಾಗುತ್ತದೆ.ನಿಮ್ಮನ್ನು ಸಾಕಿ ಸಲಹಿದ ತಂದೆ, ತಾಯಿ,ಬಂಧು- ಬಳಗದವರಿಗೂ ಜೀವನ ಪರ್ಯಂತ ನೋವು ನೀಡಿದoತಾಗುತ್ತದೆ ಎಂಬುದನ್ನು ಯೋಚಿಸಿರಿ ನಿರ್ಣಯ ತೆಗೆದುಕೊಳ್ಳಿರಿ ಎಂದರು.

   ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರು ಹಾಗೂ ಯುವತಿಯರನ್ನು ಶೇರು ಮಾರುಕಟ್ಟೆ ಲಾಭ, ಲೈಂಗಿಕ ಹಗರಣ, ಡ್ರಗ್ಸ್ ಕೊರಿಯರ್ ಬಂದಿದೆ, ಹವಾಲಾದ ಮೂಲಕ ಹಣದ ವರ್ಗಾವಣೆ ಮಾಡಿದ್ದೀರೆಂದು ಬೆದರಿಸಿ ಲಕ್ಷಾಂತರ ಹಣದ ವಂಚನೆ ಪ್ರಕರಣಗಳು ನಡೆಯುತ್ತಿವೆ. ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ವಿದ್ಯಾವಂತರೆ ವಂಚನೆಗೆ ಒಳಗಾಗುತ್ತಿದ್ದಾರೆ.

   ಹವ್ಯಾಸಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಮಾಹಿತಿ ಇತ್ಯಾದಿ ಹಾಕದೆ ನಿಮ್ಮ ಫೋಟೋ, ಮಾಹಿತಿ ಎಲ್ಲಿಯೂ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಇಂತಹ ವಂಚಕರು ಫೋನ್ ಮಾಡಿದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಅಥವಾ 112ಗೆ ಫೋನ್ ಮಾಡಬೇಕೆಂದು ಸೂಚನೆಯನ್ನು ನೀಡಿದರು.

   ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶ್ರಮ ಪಡುವವರಿಗೆ ಸಾಫಲ್ಯತೆ ಖಂಡಿತವಾಗಿ ಸಿಗುತ್ತದೆ. ಕೇಂದ್ರ, ರಾಜ್ಯ ಸರ್ಕಾರ ಸೇರಿದಂತೆ ವಿವಿಧ ಸರ್ಕಾರಿ ಉದ್ಯೋಗಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತಿದ್ದು ಶ್ರದ್ಧೆಯಿಂದ ಸಿದ್ಧತೆ ನಡೆಸಿದರೆ ಒಂದಿಲ್ಲ ಒಂದು ಪರೀಕ್ಷೆಯಲ್ಲಿ ಯಶಸ್ವಿ ದೊರೆತು ಉದ್ಯೋಗ ಪಡೆಯಬಹುದಾಗಿದೆ ಎಂದರು.

    ಇದೇ ವೇಳೆ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ಮಾತನಾಡಿ ಜಾತಿ, ಧರ್ಮ, ವರ್ಣದಂತೆಯೆ ಹೆಣ್ಣು, ಗಂಡೆoಬ ಲಿಂಗ ಭೇದವೂ ಭಾರತೀಯ ಸಮಾಜದ ಜ್ವಲಂತ ಸಮಸ್ಯೆಯಾಗಿದೆ. ಲಿಂಗ ತಾರತಮ್ಯತೆ, ಮೂಢನಂಬಿಕೆಗಳನ್ನು ನಿವಾರಿಸಲು ನಮ್ಮ ಸಂಸ್ಥೆಯು ಶ್ರಮಿಸುತ್ತಿದೆ ಎಂದು  ಹೇಳಿದರು.

ಸಚಿವ ಸತೀಶ್ ಜಾರಕಿಹೊಳಿ ರವರು ತಮ್ಮ ಆದಾಯದ ಮೊತ್ತದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯ ಬಡ ಅಭ್ಯರ್ಥಿಗಳಿಗೆ ರಾಜ್ಯದ ಹಲವು ಕೇಂದ್ರಗಳಲ್ಲಿ ಉಚಿತ ವಸತಿ, ಆಹಾರದ ವ್ಯವಸ್ಥೆ ಮಾಡಿ ತರಬೇತಿ ನೀಡುತ್ತಿದ್ದಾರೆ ಎಂದು ತಿಳಿಸಿದರು.

      ಈ ಸಮಯದಲ್ಲಿ ತರಬೇತುದಾರರು, ನೂರಾರು ಪ್ರಶಿಕ್ಷಣಾರ್ಥಿಗಳು, ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";