ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಹರಿಯಾಣ ವಿಧಾನಸಭೆ ಚುನಾವಣೆಗೆ ಒಂದು ತಿಂಗಳ ಬಾಕಿ ಇರುವಾಗ, ಒಲಿಂಪಿಕ್ ಕುಸ್ತಿಪಟು ವಿನೇಶಾ ಫೋಗಟ್ ಶನಿವಾರ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಪ್ರತಿಭಟನಾ ನಿರತ ರೈತರಿಗೆ ತನ್ನ ನಿರಂತರ ಬೆಂಬಲ ನೀಡುವ ವಾಗ್ದಾನ ನೀಡಿದ್ದಾರೆ. ಅವರು ಅಲ್ಲಿ ರೈತರ ಆಂದೋಲನದ 200 ನೇ ದಿನದ ಆಚರಣೆಯಲ್ಲಿ ಭಾಗವಹಿಸಿ “ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ” ಎಂದು ಅವರು ಹೇಳಿದರು.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಗೆ ಕಾನೂನು ಖಾತರಿ ನೀಡುವಂತೆ ಒತ್ತಾಯಿಸಿ ರೈತರು ‘ದೆಹಲಿ ಚಲೋ’ ಆಂದೋಲನ ನಡೆಸುತ್ತಿದ್ದು, ದೆಹಲಿಗೆ ಆಗಮಿಸುತ್ತಿದ್ದ ಅವರನ್ನು ಶಂಭು ಗಡಿಯಲ್ಲಿ ತಡೆಯಲಾಗಿದೆ. 50 ಕೆಜಿ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ 100 ಗ್ರಾಂ ಅಧಿಕ ತೂಕ ಹೊಂದಿದ್ದ ಕಾರಣ ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಿಂದ ಅನರ್ಹಗೊಂಡ ಫೋಗಟ್ ಅವರನ್ನು ರೈತರು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.
ರೈತರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ ಎಂದು ಒತ್ತಿ ಹೇಳಿದ ವಿನೇಶಾ, “ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ರೈತರ ಸಮಸ್ಯೆಗಳು ಬಗೆಹರಿಯದೆ ಉಳಿದಿವೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“ನೀವೆಲ್ಲರೂ ಇಷ್ಟು ದಿನ ಪ್ರತಿಭಟನೆ ನಡೆಸುತ್ತಿರುವುದನ್ನು ನೋಡಲು ನೋವಾಗುತ್ತದೆ. ಕೆಲವೊಮ್ಮೆ ನಾವು ನಿಮಗಾಗಿ ಏನನ್ನೂ ಮಾಡಲು ಸಾಧ್ಯವಾಗದೆ ಅಸಹಾಯಕರಾಗುತ್ತೇವೆ. ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತೇವೆ. ಆದರೆ, ನಮ್ಮ ಸ್ವಂತ ಕುಟುಂಬಕ್ಕಾಗಿ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕೆಂದು ನಾನು ಸರ್ಕಾರವನ್ನು ಕೋರುತ್ತೇನೆ” ಎಂದು ಅವರು ಹೇಳಿದರು.
ರಾಜಕೀಯ ರಂಗಕ್ಕೆ ಬರುತ್ತೀರಾ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ವಿನೇಶಾ ಪ್ರತಿಕ್ರಿಯಿಸಲು ನಿರಾಕರಿಸಿದರು. “ನನಗೆ ರಾಜಕೀಯದ ಬಗ್ಗೆ ತಿಳಿದಿಲ್ಲ” ಎಂದು ಅವರು ಹೇಳಿದರು.