ನಾನು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರು, ನಿಮ್ಮ ಸೇವಕ-ಡಿಸಿಎಂ ಡಿಕೆ ಶಿವಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನಕಪುರದ ಸಾತನೂರಿನ ಕಚುವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಬೆಳ್ಳಿ ಹಬ್ಬ ಸಮಾರಂಭ ಹಾಗೂ ನೂತನ ಮೇಲಂತಸ್ತು ಕಟ್ಟಡ ಉದ್ಘಾಟನೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಡಿದರು.

ನಂತರ ಅವರು ಮಾತನಾಡಿ, ಈ ಕಾರ್ಯಕ್ರಮದಿಂದ ನನ್ನ ಹಳೆಯ ನೆನಪುಗಳು ಮರುಕಳಿಸಿವೆ. 25 ವರ್ಷಗಳ ಹಿಂದೆ ನಾನೇ ಈ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನ ಉದ್ಘಾಟನೆ ಮಾಡಿದ್ದೆ ಎಂದು ಡಿಸಿಎಂ ಶಿವಕುಮಾರ್ ಸ್ಮರಿಸಿದರು.

ನನ್ನ ರಾಜಕೀಯ ಬದುಕಿನಲ್ಲಿ ಕಚುವನಹಳ್ಳಿಯನ್ನು ಮರೆಯಲಿಕ್ಕೆ ಸಾಧ್ಯವಿಲ್ಲ. ನಾನು ಮೊದಲನೇ ಬಾರಿ ಚುನಾವಣೆಗೆ ನಿಂತಾಗ ಐದಾರು ಊರುಗಳಿಂದ ಹೆಚ್ಚು ಮತಗಳನ್ನ ಪಡೆದಿದ್ದೆ. ನನ್ನ ಕ್ಷೇತ್ರದ ಜನರ ಆಶೀರ್ವಾದದಿಂದ ಸತತವಾಗಿ ಗೆದ್ದು, ಇಂದು ಉಪಮುಖ್ಯಮಂತ್ರಿಯಾಗಿ ರಾಜ್ಯದ ಉದ್ದಗಲಕ್ಕೂ ನನ್ನ ಪ್ರಾಮಾಣಿಕ ಸೇವೆಯನ್ನು ಮಾಡುತ್ತಿದ್ದೇನೆ ಎಂದು ಅವರು ತಿಳಿಸಿದರು.

ಮೊದಲಿನಿಂದಲೂ ಈ ಸಂಘ ಬಹಳ ಶಿಸ್ತಿನಿಂದ ಕಾರ್ಯನಿರ್ವಹಿಸುತ್ತಿದೆ. ಇಡೀ ಹೋಬಳಿಯಲ್ಲಿ ಕಟ್ಟೋದಕ್ಕೆ ಆಗದ ಕಟ್ಟಡವನ್ನು ಸಂಘದ ವತಿಯಿಂದ ಕಟ್ಟಲಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ. ಇದಕ್ಕೆ ನಿಮ್ಮ ಬೆಳ್ಳಿ ಹಬ್ಬದ ಸಂಭ್ರಮವೇ ಸಾಕ್ಷಿ. ಈ ಊರಿನ ಜನರು ತೋರಿದ ಪ್ರೀತಿ, ನೀಡಿದ ಸಹಕಾರ ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾದರು.

ನಾನು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರು, ನಿಮ್ಮ ಸೇವಕನಾಗಿರಲು ಬಯಸುತ್ತೇನೆ. ನಿಮ್ಮ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.

- Advertisement -  - Advertisement -  - Advertisement - 
Share This Article
error: Content is protected !!
";