ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕನ್ನಡದ ಅಸ್ಮಿತೆಗೆ ಭ್ರಮನಿರಸನವಾಗದಂತೆ ಯುವಜನತೆ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಬಿ.ಎಂ.ಗುರುನಾಥ್ ಹೇಳಿದ್ದಾರೆ.
ಚಿತ್ರದುರ್ಗ ನಗರದ ಸ್ಕೌಟ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ಹಾಡುಗಳ ಗೀತ ಗಾಯನ ಮತ್ತು ಚಿತ್ರದುರ್ಗ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಸದಸ್ಯರ ಪದ ಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುವೆಂಪು ರವರು ಬರೆದ ನಾಡಗೀತೆಯಲ್ಲಿ ಕನ್ನಡದ ವಿಶಾಲತೆ ಮತ್ತು ಸಮೃದ್ಧತೆಯನ್ನು ವಿಶೇಷವಾಗಿ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮ ಮತ್ತು ಭಾಷೆಗಳ ನಡುವಿನ ಗೊಂದಲಗಳು ಹೆಚ್ಚಾಗಿವೆ. ೨೫೦೦ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಮಸ್ಯೆಗಳ ನಿವಾರಣೆಗೆ ಇಂದಿನ ಪೀಳಿಗೆಯ ಯುವಕರು ಕನ್ನಡದ ಬಳಕೆಯನ್ನು ಹೆಚ್ಚು ಮಾಡಬೇಕಾದ ಅನಿವಾರ್ಯತೆ ಇದೆ. ಸಾಮಾಜಿಕ ಜಾಲತಾಣಗಳಿಂದ ವಿಶ್ವದ ಗಾತ್ರ ಕಿರಿದಾಗುತ್ತಿದೆ. ಆದರೆ ಸ್ಥಳೀಯವಾಗಿರುವ ಪ್ರತಿಭೆ, ಸಂಸ್ಕೃತಿ,ಕಲೆಗಳನ್ನು ಕಡೆಗಣಿಸಲಾಗುತ್ತಿದೆ. ಕೋಗಿಲೆ ನಮಗೆ ಹೆವ್ಮ್ಮೆಯ ಪಕ್ಷಿಯಾಗಿದೆ. ಆದರೆ ಸ್ಥಳೀಯವಾಗಿರುವ ಪಕ್ಷಿಗಳನ್ನು ನಿರ್ಲಕ್ಷಿಸಲಾಗುತ್ತಿದೆ. ನಮ್ಮ ದೃಷ್ಟಿ ಕೇವಲ ಗಂಧದ ಮರದ ಕಡೆಗೆ ಇದೆ. ಆದರೆ ಸ್ಥಳೀಯವಾಗಿರುವ ಗಿಡ,ಮರಗಳನ್ನು ಸಂರಕ್ಷಿಸುವುದಕ್ಕೆ ಗಮನ ಹರಿಸಬೇಕಾಗಿದೆ. ವಿಶಾಲ ದೃಷ್ಟಿಯ ನಡುವೆ ನಮ್ಮ ಸುತ್ತಲಿನ ಮತ್ತು ಹತ್ತಿರದ ಪ್ರಪಂಚವನ್ನು ಮರೆಯಬಾರದು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಕನ್ನಡ ಗೀತೆಗಳು ಸಾಹಿತ್ಯದ ವಿಶೇಷ ಪರಂಪರೆಯನ್ನು ಹೊಂದಿವೆ. ಹಿಂದಿನ ತಲೆಮಾರಿನ ಚಿತ್ರಗೀತೆಗಳು ದೃಶ್ಯಕಾವ್ಯಗಳಾಗಿವೆ. ಗಾಯಕರಿಗೆ ಕನ್ನಡ ಭಾಷೆಯ ಮೇಲಿನ ಹಿಡಿತ ಹಾಗೂ ಮಧುರವಾದ ಧ್ವನಿ ಅಗತ್ಯವಾಗಿದೆ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ದೊಡ್ಡ ಪ್ರಮಾಣದ ಕಾರ್ಯಕ್ರಮ ಕೈಗೊಂಡರೆ ಸಹಕಾರ ನೀಡುವುದಾಗಿ ತಿಳಿಸಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ವಿ.ಎಲ್.ಪ್ರಶಾಂತ್ ಮಾತನಾಡಿ, ಇದೀಗ ತಾಲ್ಲೂಕು ಘಟಕ ರಚನೆಯಾಗಿದೆ. ದೊಡ್ಡ ಪ್ರಮಾಣದ ಕನ್ನಡ ಕಾರ್ಯಕ್ರಮಕ್ಕೆ ಚಿಂತನೆ ನಡೆಸಲಾಗುತ್ತಿದೆ. ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ಕೈಗೊಳ್ಳಲಾಗುವುದು ಎಂದರು.
ಡಿಎಆರ್ ಸಿಬ್ಬಂದಿ ಮನು, ನಿವೃತ್ತ ಎಸ್‌ಐ ನರೇಂದ್ರಬಾಬು ಮತ್ತು ಪ್ರಾಣೇಶ್, ವಿಶ್ವನಾಥ್ ಸೇರಿದಂತೆ ೪೫ ಕ್ಕೂ ಹೆಚ್ಚು ಗಾಯಕರು ಕನ್ನಡ ನಾಡು, ನುಡಿಯ ಹಾಡುಗಳನ್ನು ಹಾಡಿದರು. ಜಿಲ್ಲಾ ಪದಾಧಿಕಾರಿಗಳಾದ ಶ್ರೀನಿವಾಸ ಮಳಲಿ, ಸಿ.ಲೋಕೇಶ್, ಕೆ.ಜಿ.ಅಜಯ್ ಕುಮಾರ್, ವಿಶ್ವನಾಥ್ ತಾಲ್ಲೂಕು ಕಾರ್ಯದರ್ಶಿ ಎಂ.ಕೆ.ಹರೀಶ್ ಮತ್ತಿತರರಿದ್ದರು.

