ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯುಗ ಯುಗಾದಿ ಕಳೆದರೂ.. ಯುಗಾದಿ ಮರಳಿ ಬರುತಿದೆ; ದ.ರಾ.ಬೇಂದ್ರೆಯವರ ಯುಗಾದಿ ಬಗೆಗಿನ ಈ ಕವಿತೆ ಸುಪ್ರಸಿದ್ಧವಾದುದು. ಹಿಂದೂ ಪುರಾಣದ ಪ್ರಕಾರ, ಈ ದಿನದಂದು ಬ್ರಹ್ಮ ದೇವರು ವಿಶ್ವವನ್ನು ಸೃಷ್ಟಿಸಿದರು. ನಂತರ ಅವರು ದಿನಗಳು, ವಾರಗಳು, ತಿಂಗಳುಗಳು ಮತ್ತು ವರ್ಷಗಳನ್ನು ಸೃಷ್ಟಿಸಿದರು. ಆದ್ದರಿಂದ, ಯುಗಾದಿಯನ್ನು ವಿಶ್ವ ಸೃಷ್ಟಿಯ ಮೊದಲ ದಿನವೆಂದು ನಂಬಲಾಗಿದೆ.
ಮಹತ್ವ:
ಸನಾತನ ಹಿಂದೂ ಧರ್ಮದಲ್ಲಿ ಯುಗಾದಿ ಹಬ್ಬಕ್ಕೆ ವಿಶೇಷ ಮಹತ್ವ ಇದೆ. ಯುಗಾದಿಯ ಅರ್ಥ ‘ಯುಗದ ಆದಿ‘. ಯುಗವೆಂದರೆ ಸೃಷ್ಟಿಯ ಕಾಲಮಾನ. ಅರ್ಥಾತ್ ಹೊಸ ವರ್ಷ; ಆದಿ ಎಂದರೆ ಆರಂಭ. ಈ ಹಬ್ಬವನ್ನು ಭಾರತದ ವಿವಿದ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಕರ್ನಾಟಕದಲ್ಲಿ ಯುಗಾದಿ, ಮಹಾರಾಷ್ಟ್ರದಲ್ಲಿ ಗುಡಿಪಾಡವಾ, ಆಂಧಪ್ರದೇಶ ಹಾಗೂ ತಮಿಳುನಾಡಿನಲ್ಲಿ ಹೊಸ ವರ್ಷದ ಹಬ್ಬ, ಉತ್ತರ ಭಾರತದಲ್ಲಿ ಬೈಸಾಖಿ ಎಂದು ಕರೆಯುತ್ತಾರೆ. ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೆ ಎಲ್ಲ ಹಿಂದೂಗಳೂ ಆಚರಿಸುತ್ತಾರೆ. ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ವ್ಯಾಪಾರಿಗಳು ಹಾಗೂ ಇನ್ನಿತರರು ಕೂಡ ಅಂದಿನ ದಿನವೇ ಶುಭಕಾರ್ಯ ಆರಂಭಿಸುತ್ತಾರೆ. ಯುಗಾದಿ ಹಬ್ಬ ಪೌರಾಣಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳನ್ನು ಹೊಂದಿದೆ.
ಐತಿಹಾಸಿಕ ಕಾರಣಗಳು:
ಈ ದಿನದಂದು ರಾವಣನ ವಧೆಯಾದ,ನಂತರ ಅಯೋಧ್ಯೆಗೆ ಆಗಮಿಸಿದ ಶ್ರೀರಾಮಚಂದ್ರ ಯುಗಾದಿ ದಿನದಿಂದಲೇ ನೂತನ ರಾಜ್ಯಭಾರಸೂತ್ರವನ್ನು ವಹಿಸಿಕೊಂಡನಂತೆ.
ಹಾಗೂ ವಿಜಯೋತ್ಸವ ಆಚರಿಸುವಂತೆ ಮಾಡಿದನಂತೆ. ಆ ವಿಜಯದ ಸಂಕೇತವೇ ಈ ಯುಗಾದಿ ಹಬ್ಬ. ಈ ದಿನದಿಂದಲೇ ‘ಶಾಲಿವಾಹನ ಶಕೆ‘ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದುದಾಗಿತ್ತು.
ಆಧ್ಯಾತ್ಮಿಕ ಕಾರಣಗಳು:
ಬ್ರಹ್ಮದೇವನು ಇದೇ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಚೈತ್ರ ಮಾಸಿ ಜಗದ್ಬಹ್ಮಾ ಸಸೃಜ ಪ್ರಥಮೇ ಹನಿ|ಶುಕ್ಲಪಕ್ಷೇ ಸಮಗ್ರಂ ತು ತಥಾ ಸೂರ್ಯೋದದೇ ಸತಿ| ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ.
ಯುಗಾದಿಯಂದು ತೇಜ ಮತ್ತು ಪ್ರಜಾಪತಿ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಹೆಚ್ಚಿನ ಸಮಯದವರೆಗೆ ಉಳಿಯುತ್ತದೆ. ಅದು ಜೀವದ ಜೀವಕೋಶಗಳಲ್ಲಿ ಸಂಗ್ರಹವಾಗುತ್ತದೆ ಹಾಗೂ ಅವಶ್ಯಕತೆಗನುಸಾರ ಆ ಜೀವದಿಂದ ಉಪಯೋಗಿಸಲ್ಪಡುತ್ತದೆ.
ಯುಗಾದಿ ಪಾಡ್ಯದಂದು ಮಾಡಬೇಕಾದ ಧಾರ್ಮಿಕ ಕಾರ್ಯಗಳು ಅಭ್ಯಂಗಸ್ನಾನ: ಯುಗಾದಿ ಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು ಅಭ್ಯಂಗಸ್ನಾನ ಮಾಡಬೇಕು.
ಸಂವತ್ಸರವು ಯಜ್ಞಗಳಿಗೆ ಮೂಲ. ಅದು ಕೇವಲ ಕಾಲಪರಿಮಾಣ ಮಾತ್ರವಲ್ಲ; ಆಧ್ಯಾತ್ಮಿಕತೆಯ ಅಡಿಪಾಯವೂ ಹೌದು. ಸಂವತ್ಸರವನ್ನು ಅಶ್ವಕ್ಕೆ ಹೋಲಿಸಿ, ಒಂದು ವರ್ಷ ಪೂರ್ಣವಾಗಿ ನಡೆಯುವ ಅಶ್ವಮೇಧಯಜ್ಞ ಈ ಸಂವತ್ಸರ ಎಂದು ವೇದಗಳು ಸಾರುತ್ತವೆ.
ಎಲ್ಲರ ಜೀವನವೂ ಸುಖ-ದು:ಖ, ಲಾಭ-ನಷ್ಟ, ಮಾನ-ಅಪಮಾನ, ಜಯ-ಅಪಜಯ- ಈ ದ್ವಂದ್ವಗಳ ಸಮ್ಮಿಲನ. ಯಾರಿಗೂ ದು:ಖ, ನಷ್ಟ, ಅಪಮಾನ, ಪರಾಜಯಗಳು ಸ್ಥಿರವಲ್ಲ. ಹಾಗೆಯೇ ಸುಖ, ಲಾಭ, ಮಾನ, ಜಯಗಳು. ಇವೆಲ್ಲ ಒಂದಾದ ಮೇಲೆ ಒಂದರಂತೆ ಬಂದು ಹೋಗುತ್ತಿರುತ್ತವೆ.
ನೈಸರ್ಗಿಕ ಕಾರಣಗಳು:
ಪ್ರತಿಪದೆ ಸಮಯದಲ್ಲಿ ಸೂರ್ಯನು ವಸಂತ ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷುವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಬೇಧಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತು ನನ್ನ ವಿಭೂತಿಯಾಗಿದೆ‘ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರ ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿ ನವಚೇತನದಿಂದ ತುಂಬಿರುತ್ತದೆ.
ಯುಗಾದಿಯನ್ನು ಆಚರಿಸುವುದು ಹೇಗೆ..?
ಯುಗಾದಿ ಹಬ್ಬವನ್ನು ಆಚರಿಸುವ ಒಂದು ವಾರದ ಮುನ್ನವೇ ಯುಗಾದಿ ಆಚರಣೆಗೆ ಸಿದ್ಧತೆಗಳು ಆರಂಭವಾಗುತ್ತವೆ. ಈ ಸಂದರ್ಭದಲ್ಲಿ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಹೊಸ ಬಟ್ಟೆಗಳನ್ನು ಖರೀದಿಸುತ್ತಾರೆ. ಮನೆಯ ಪ್ರವೇಶದ್ವಾರಗಳನ್ನು ಮಾವಿನ ಎಲೆಗಳಿಂದ ಅಲಂಕರಿಸುತ್ತಾರೆ. ಹಬ್ಬದ ದಿನದಂದು ಜನರು ತಮ್ಮ ಮನೆಯ ಸುತ್ತಲಿನ ಸ್ಥಳಗಳನ್ನು ಹಸುವಿನ ಸಗಣಿಯ ನೀರನ್ನು ಸಿಂಪಡಿಸಿ ಸ್ವಚ್ಛಗೊಳಿಸಿದರೆ, ಇನ್ನೂ ಕೆಲವರು ಹಸುವಿನ ಸಗಣಿಯನ್ನು ಹಾಕಿ ಮನೆಯಂಗಳವನ್ನು ಸ್ವಚ್ಛಗೊಳಿಸುತ್ತಾರೆ. ನಂತರ ಮನೆಯನ್ನು ಹೂವುಗಳಿಂದ ಮತ್ತು ರಂಗೋಲಿಗಳಿಂದ ಅಲಂಕರಿಸುತ್ತಾರೆ. ತಮ್ಮ ದೇವರಿಗೆ ಪೂಜೆ ಸಲ್ಲಿಸಿದ ನಂತರ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ, ಭಕ್ತರು ಎಣ್ಣೆ ಸ್ನಾನದಿಂದ ದಿನವನ್ನು ಪ್ರಾರಂಭಿಸುತ್ತಾರೆ. ಸಂಬಂಧಿಕರು ಒಟ್ಟಿಗೆ ಸೇರಿ ಈ ದಿನವನ್ನು ಸಂಭ್ರಮಿಸುತ್ತಾರೆ.
ಯುಗಾದಿಯನ್ನು ಹಿಂದೂಗಳು ಸೃಷ್ಟಿಯ ಆರಂಭವೆಂದು, ಹೊಸ ವರ್ಷದ ಆರಂಭವೆಂದು ಆಚರಿಸುತ್ತಾರೆ. ಯುಗಾದಿ ಹಬ್ಬದ ಆಚರಣೆ ವಿಧಿ ವಿಧಾನಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿದ್ದರೂ ಕೆಲವೊಂದು ಸ್ಥಳಗಳಲ್ಲಿ ಈ ದಿನ ಎಣ್ಣೆ ಸ್ನಾನ ಮಾಡಿ, ದೇವರನ್ನು ಪೂಜಿಸಿ ನಂತರ ಸಿಹಿಯುಣ್ಣುವ ಸಂಪ್ರದಾಯವನ್ನು ಹೊಂದಿರುತ್ತಾರೆ.
ಆದ್ದರಿಂದ ಮಾನವನು ಸುಖ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ, ಈ ದ್ವಂದ್ವಗಳನ್ನು ಜಯಿಸಿ, ಸಮತೆ ಸಾಧಿಸಬೇಕು; ಸ್ಥಿತಪ್ರಜ್ಞನಾಗಬೇಕು- ಇದು ಯುಗಾದಿಯ ಬೇವು-ಬೆಲ್ಲಗಳ ಸಂದೇಶ.
ಲೇಖನ-ಕನಕರಾಜ್, ಕೋಡಿಹಳ್ಳಿ.