ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತೋಟಗಾರಿಕೆ ಇಲಾಖೆಯಿಂದ ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನುಕೃಷಿಕರ ಆರ್ಥಿಕಮಟ್ಟ ಹೆಚ್ಚಿಸಲು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪಕ್ಕೆ ಝೇಂಕಾರ ಎಂಬ ಬ್ರ್ಯಾಂಡ್, ಟ್ಯಾಗ್ಲೈನ್, ಲೋಗೋ ಮತ್ತು ಪ್ಯಾಕೇಜಿಂಗ್ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಿ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ ಅಧಿಕೃತವಾಗಿ ಅನುಮೋದನೆ ಪಡೆಯಲಾಗಿದೆ.
ಜೇನುತುಪ್ಪ ಉತ್ಪಾದಕರು ಮತ್ತು ಸಂಗ್ರಾಹಕರು ತೋಟಗಾರಿಕೆ ಇಲಾಖೆಯ ಮಾಲೀಕತ್ವದ ಈ ಬ್ರ್ಯಾಂಡ್ ಹೆಸರು ಮತ್ತು ಲೋಗೋ ಬಳಸಿಕೊಂಡು ಜೇನುತುಪ್ಪ ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿರುತ್ತದೆ. ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಜೇನುಕೃಷಿಕರು ಮತ್ತು ಸಂಗ್ರಾಹಕರಲ್ಲಿ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಲ್ಲಾ ಪಂಚಾಯತ್) ಅವರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.