ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜೋಗಿ ಮಟ್ಟಿ
——————–
ಬ್ರಹ್ಮಗಿರಿ ಜೋಕಾಲಿ ಜೋಗುಳ
ಸಹ್ಯಾದ್ರಿ ಸಾಲು ದಿಬ್ಬಣ
ಸಾಗರದಿಂದೆತ್ತರದ
ಸೋಜಿಗದ ಗಿರಿ ಶಿಖರ
ಬಾನು ಚುಂಬಿಸೊ ಹಚ್ಚಹಸಿರು
ಕಾನನಕಿಟ್ಟ ಸಿಂಧೂರ
ಶ್ರೀಗಂಧ ಚಂದನ ಬಿದಿರು ಹೊನ್ನೆ
ಬೇವು ಹೊಂಗೆ ಸೀಗೆ ತೇಗ
ಅಮೂಲ್ಯ ಕಾಡಣ್ಣುಗಳು
ಎಂತೆಂತಹ ಚೆಲುವ ಕುಲಗಳು
ಅನಂತ ಮೂಲಿಕೆಗಳ
ಸಿರಿ ಬೇರ ತವರು
ಇಬ್ಬನಿ ಮೂಡಣ ಎಳೆ ಹೊನ್ನಿಗೆ
ಚಿಗುರೆಲೆ ಮುತ್ತುಗಳ ಸಡಗರ
ನೆಲಮುಗಿಲ ಏಣಿಯಾಟವೋ
ಮಂಜು ತೆರೆಗಳ ಸಾಕ್ಷಾತ್ಕಾರವೋ
ಕಣ್ಣಗಲ ಬೆಳದಿಂಗಳೂಟಕೆ
ಅವನಿಟ್ಟ ವನ ತೋಟವೇ
ಬೆಳ್ಳಾವೆ ಕಾಡ್ಕೋಳಿ ಗಿಳಿ ನವಲೆ
ಹಾಲಕ್ಕಿ ಗುಯ್ಗ ಗುಬ್ಬಚ್ಚಿ
ಬೈರಿ ಗಿಡುಗ ಮರಕುಟಿಗ
ಅತಿಥಿ ಕೊಕ್ಕರೆಗಳೊಟ್ಟಿಗೆ
ರೆಕ್ಕೆಕುಲ ನೂರಾರು
ಹೆದುರಿಸೋ ಹುತ್ತಗಳು
ತರ ತರದ ಉರಗಗಳು
ಜೀಕರಿಸೊ ಜೀರುಂಡೆ ಹೆಜ್ಜೆನುಗಳು
ಅನಂತ ಇಂಚರಗಳ ಸಂಗಮ
ಕಾಡಂದಿ ಮುಳ್ಳಂದಿ ಮೊಲ
ಕರಡಿ ತೋಳ ಚಿರತೆಗಳು
ಕೊಂಡುಗುರಿ ನರಿ ಸಾರಂಗ
ದೊಡ್ಡಣ್ಣ ಮತ್ತಿತಿಮ್ಮಣ್ಣ
ನಾಯಕರ ವೈಭವ ಜಲತಟಗಳು
ಆಡೂರು ಮಲ್ಲಯ್ಯನ ಅಭಯಾರಣ್ಯ
ಕಾವಲು ಸಂಚಾರಿ ಕುಕ್ವಾಡದವ್ವ
ಹಿಮಾಲಯವೇ ಹಿಮವತ್ಕೇದಾರ
ಕಾಶ್ಮೀರ ಕಾಣುವ ಓಬಳದೈವ ನೆಲೆ
ಸಾಲು ಗುಡ್ಡಗಳಾಚೆ ವಜ್ರ ಸೆಲೆ
ಮಾರಿಕಣಿವೆಯ ಸೆರಗು
ದೊರೆಸಾನಿಯ ಜಲ ನೆಲೆ
ನಾಥ ಪಂತರ ತಪೋ ಬೀಡು
ಸಿದ್ಧಾವತಾರಿಗಳ ಸಂಗಮ ಹಾದಿ
ಕುಂತಿ ಕುವರ ಹೆಜ್ಜೆಗಳಾಡಿವೆ
ಬೆಳಕಿಗಿಟ್ಟ ಹಣತೆ ಕಲ್ಲು
ದೈತ್ಯ ಶಿಲೆಗೆ ಹನುಮನೂ ಅವತರಿಪ
ಸಾಗುವ ಕರುವು ತಿರುವುಗಳಾಚೆ
ನೆತ್ತಿಯ ದೈವ ಮುಕುಟ ಜೋಗಿ ನೆಲೆ
ಕವಿತೆ-ಕುಮಾರ್ ಬಡಪ್ಪ, ಚಿತ್ರದುರ್ಗ.