ಚಂದ್ರವಳ್ಳಿ ನ್ಯೂಸ್, ವಿಜಯನಗರ:
ತುಂಗಭದ್ರಾ ಜಲಾಶಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಡ್ಯಾಂಗೆ ಹೆಚ್ಚಿನ ನೀರು ಹರಿದು ಬರುತ್ತಿದೆ.
ಟಿಬಿ ಡ್ಯಾಂನಿಂದ ನದಿಗೆ ಒಂದು ಲಕ್ಷ ಕ್ಯೂಸೆಕ್ಗೂ ಅಧಿಕ ಪ್ರಮಾಣದ ನೀರು ಹರಿಬಿಡಲಾಗುತ್ತಿದೆ.
ತಾಲೂಕಿನ ಕಂಪ್ಲಿ ಸೇತುವೆ ಮುಳುಗಡೆಯಾಗುವ ಭೀತಿ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಸೇತುವೆ ಮೇಲೆ ಸಂಚಾರ ಸ್ಥಗಿತಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
ಸಾರ್ವಜನಿಕ ಹಾಗೂ ರಸ್ತೆ ಸಂಚಾರದ ಹಿತದೃಷ್ಟಿಯಿಂದ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಶ್ವನಾಥ್ ಅವರು ಈಗಾಗಲೇ ಗಂಗಾವತಿ ಗ್ರಾಮೀಣ ಪೊಲೀಸರಿಗೆ ಲಿಖಿತ ಸೂಚನೆ ನೀಡಿದ್ದಾರೆ.
ಸೇತುವೆಯ ಸಂಚಾರ ಬಂದ್ ಆದರೆ ಕೊಪ್ಪಳ – ಬಳ್ಳಾರಿ ಜಿಲ್ಲೆಯ ಮಧ್ಯೆ ಇರುವ ಅಂತರ್ ಜಿಲ್ಲಾ ನೇರ ಸಂಪರ್ಕ ಸ್ಥಗಿತವಾಗಲಿದೆ. ಈಗಾಗಲೇ, ಹೆಚ್ಚಿನ ನೀರು ಹರಿಸಿದ್ದರಿಂದ ಸೇತುವೆಯ ಕೆಲವೇ ಅಡಿಗಳ ಕೆಳಭಾಗದಲ್ಲಿ ತುಂಗಭದ್ರಾ ನದಿಯ ನೀರು ಹರಿಯುತ್ತಿದೆ. ಹೆಚ್ಚಿನ ಕ್ಯೂಸೆಕ್ ನೀರನ್ನು ನದಿಯಲ್ಲಿ ಹರಿಸಿದರೆ ಸೇತುವೆ ಸಂಪೂರ್ಣ ಮುಳುಗಡೆಯಾಗಲಿದೆ. ನದಿಯಲ್ಲಿ ಪ್ರವಾಹದ ಸನ್ನಿವೇಶ ನಿರ್ಮಾಣವಾಗಿದೆ. ಇದರಿಂದ ಸೇತುವೆ ಮೇಲಿನ ವಾಹನ ಮತ್ತು ಜನ ಸಂಚಾರ ನಿಷೇಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಂದಾಯ ಮತ್ತು ಪೊಲೀಸ್ ಇಲಾಖೆಗೆ ಪ್ರತಿಗಳನ್ನು ರವಾನಿಸಿದೆ.
ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನೀರು:
ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಟಿಬಿ ಡ್ಯಾಂ ಜಲನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಲಕ್ಷಕ್ಕೂ ಹೆಚ್ಚಿನ ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದ್ದು ಡ್ಯಾಂನಿಂದ 1.15 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿ ಬಿಡುವ ಸಾಧ್ಯತೆ ಇದೆ.
ಈಗಾಗಲೇ 90,124 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಹೀಗಾಗಿ, ನದಿಪಾತ್ರದ ಜನರು ಎಚ್ಚರಿಕೆ ವಹಿಸಬೇಕು ಎಂದು ತುಂಗಭದ್ರಾ ಮಂಡಳಿ ಎಚ್ಚರಿಕೆ ನೀಡಿದೆ.
ಜಲಾಶಯದ ಮೇಲ್ಬಾಗದಲ್ಲಿ ಭಾರಿ ಮಳೆಯಾಗುತ್ತಿದೆ. ತುಂಗಾ ಜಲಾಶಯದಿಂದ 75 ಸಾವಿರ ಕ್ಯೂಸೆಕ್, ಭದ್ರಾ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ಹಾಗೂ ವರದಾ ನದಿಯಿಂದ 10 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿದೆ.
ಹಾಗಾಗಿ, ಟಿಬಿ ಡ್ಯಾಂ ಜಲಾಶಯದ 22 ಕ್ರಸ್ಟ್ ಗೇಟ್ಗಳನ್ನು ತೆರೆದು ನದಿಗೆ 90,124 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ.
ಜನರಿಗೆ ಎಚ್ಚರಿಕೆ:
ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ನೀರನ್ನು ಹೊರಗೆ ಹರಿಬಿಡುವ ಹಿನ್ನೆಲೆಯಲ್ಲಿ ನದಿ ಪಾತ್ರದ ಮತ್ತಷ್ಟು ಪ್ರದೇಶಗಳು ಮುಳುಗಡೆ ಆಗುವ ಸಾಧ್ಯತೆ ಇದೆ. ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ವಿಜಯನಗರ ಜಿಲ್ಲಾಡಳಿತಗಳು ನದಿಪಾತ್ರದ ಜನರು ಎಚ್ಚರಿಕೆಯಿಂದ ಇರಲು ಜಾಗೃತಿ ಮೂಡಿಸಿವೆ.
ಸದಾ ಮುಳುಗಡೆ: ಹೆಚ್ಚಿನ ಪ್ರಮಾಣದ ನೀರು ಹೊರಗೆ ಬಿಡುಗಡೆ ಮಾಡುವುದರಿಂದ ಪ್ರತಿ ಬಾರಿಯೂ ಈ ಸೇತುವೆ ಮುಳುಗಡೆಯಾಗುತ್ತದೆ. ಈ ಹಿನ್ನೆಲೆಯಲ್ಲಿ, ಸೇತುವೆ ಮೇಲ್ದರ್ಜೆಗೆ ಏರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸೇತುವೆ ಮುಳುಗಡೆಯಾದರೆ ಜನರು 30 ಕಿ.ಮೀ ಸುತ್ತುವರೆದು ಗಂಗಾವತಿಗೆ ತೆರಳಬೇಕಾಗುತ್ತದೆ. ಕಂಪ್ಲಿ ಸೇರಿದಂತೆ ಈ ಭಾಗದ ವಿದ್ಯಾರ್ಥಿಗಳು, ನೌಕರರು, ಕಾರ್ಮಿಕರು ಗಂಗಾವತಿ ಕಡೆಗೆ ಪ್ರಯಾಣ ಬೆಳೆಸಲು ಪ್ರಯಾಸಪಡಬೇಕಿದೆ.
ಭಾಗಶಃ ಮುಳುಗಡೆ:
ವಿಜಯನಗರ ಜಿಲ್ಲೆಯ ಐತಿಹಾಸಿಕ ಹಂಪಿಯ ಪುರಂದರ ದಾಸರ ಮಂಟಪ ಸೇರಿದಂತೆ ಹಲವು ಸ್ಮಾರಕಗಳು ಭಾಗಶಃ ಮುಳುಗಡೆ ಹಂತಕ್ಕೆ ತಲುಪಿವೆ. ಧಾರ್ಮಿಕ ವಿಧಿ ವಿಧಾನ ನೆರವೇರಿಸುವ ಮಂಟಪ, ಕಾಲು ಸೇತುವೆ ಹಾಗೂ ಚಕ್ರತೀರ್ಥ ಸೇರಿದಂತೆ ಪ್ರಮುಖ ಸ್ಮಾರಕಗಳು ಜಲಾವೃತವಾಗಿವೆ.
ಒಳಹರಿವು ಏರುತ್ತಿರುವ ಹಿನ್ನೆಲೆಯಲ್ಲಿ ಕ್ಷಿಪ್ರ ಕಾರ್ಯಪಡೆಯು 24*7 ಕಾರ್ಯಾಚರಣೆ ನಡೆಸುತ್ತಿದೆ. ತುಂಗಭದ್ರಾ ಮಂಡಳಿಯ ಪರಿಣತ ಎಂಜಿನಿಯರ್ಗಳು ಗೇಟ್ಗಳಿಗೆ ಧಕ್ಕೆ ಆಗದಂತೆ ಸೂಕ್ಷ್ಮವಾಗಿ ಆಪರೇಟ್ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಜನರು ಹೈರಾಣ: ವಿಜಯನಗರ ಜಿಲ್ಲಾ ಕೆಂದ್ರ ಹೊಸಪೇಟೆಯಾದ್ಯಂತ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಹಲವು ಮನೆಗಳಿಗೆ ನೀರು ನುಗ್ಗಿ, ಜನರು ಪರದಾಡಿದರು.
ಎಂ.ಪಿ ಪ್ರಕಾಶ ನಗರದ ರಸ್ತೆಯುದ್ದಕ್ಕೂ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ರಸ್ತೆ ಪಕ್ಕದ ಮನೆಗಳಿಗೂ ನೀರು ನುಗ್ಗಿದ್ದರಿಂದ, ಮನೆಗಳಲ್ಲಿನ ವಸ್ತುಗಳು ಹಾನಿಯಾಗಿದೆ.

