ಸಿನಿಮಾ ನಟ-ನಟಿಯರ ವಿರುದ್ಧ ಇಡಿ ಪ್ರಕರಣ ದಾಖಲು

News Desk

ಚಂದ್ರವಳ್ಳಿ ನ್ಯೂಸ್, ಹೈದರಾಬಾದ್:
ಸಿನಿಮಾ ನಟ-ನಟಿಯರ ವಿರುದ್ಧ ಬೆಟ್ಟಿಂಗ್ ಆ್ಯಪ್ ಮೂಲಕ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ದೂರು ದಾಖಲು ಮಾಡಲಾಗಿದೆ.

ಸಿನೆಮಾ ನಟ, ನಟಿಯರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ನಟಿ ಪ್ರಣೀತಾ ಸುಭಾಷ್, ಸಾಮಾಜಿಕ ಮಾಧ್ಯಮ ಇನ್‌ಫ್ಲುಯನ್ಸರ್‌, ಯುಟ್ಯೂಬರ್‌ಗಳು ಸೇರಿ 29 ಮಂದಿ ವಿರುದ್ಧ ಜಾರಿ ನಿರ್ದೇಶನಾಲಯ (ED) ಪ್ರಕರಣ ದಾಖಲಿಸಿದೆ ಇಡಿ ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ.

- Advertisement - 

ಸೆಲೆಬ್ರಿಟಿಗಳು ಮತ್ತು ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ಗಳು ಅಕ್ರಮ ಬೆಟ್ಟಿಂಗ್​ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ವ್ಯಾಪಕವಾಗಿ ಪ್ರಚಾರ ಮಾಡಿದ್ದು, ಪ್ರಚಾರ ಮಾಡಲು ಭಾರಿ ಕಮಿಷನ್ ಮತ್ತು ಸಂಭಾವನೆ ಪಡೆದಿದ್ದಾರೆ ಎಂದು ಹಲವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಅಪ್ಲಿಕೇಶನ್‌ಗಳಿಂದಾಗಿ ಸಾಲದ ಹೊರೆಯಿಂದ ಅನೇಕ ಜನರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಹೈದರಾಬಾದ್​ ಪೊಲೀಸರು ಈಗಾಗಲೇ ಎಫ್‌ಐಆರ್‌ ದಾಖಲಿಸಿ, ವಿಚಾರಣೆ ನಡೆಸಿದ್ದಾರೆ. ಹೈದರಾಬಾದ್ ಮತ್ತು ಸೈಬರಾಬಾದ್ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ಪ್ರಕರಣ ದಾಖಲಿಸಿದೆ.

- Advertisement - 

ಪೊಲೀಸರು ಈಗಾಗಲೇ ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಪ್ರಚಾರ ಪ್ರಕರಣದಲ್ಲಿ ಪಂಜಾಗುಟ್ಟ ನಿರೂಪಕರಾದ ವಿಷ್ಣು ಪ್ರಿಯಾ, ರಿತು ಚೌಧರಿ, ಶ್ರೀಮುಖಿ ಮತ್ತು ಶ್ಯಾಮಾ ಅವರನ್ನು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಇಡಿ ಅಧಿಕಾರಿಗಳು ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ಸೆಲೆಬ್ರಿಟಿಗಳಾದ ರಾಣಾ ದಗ್ಗುಬಾಟಿ, ಮಂಚು ಲಕ್ಷ್ಮಿ, ವಿಜಯ್ ದೇವರಕೊಂಡ, ಪ್ರಕಾಶ್ ರಾಜ್, ಪ್ರಣೀತಾ ಸುಭಾಷ್, ನಿಧಿ ಅಗರ್ವಾಲ್, ಶ್ರೀಮುಖಿ, ರಿತು ಚೌಧರಿ, ಆ್ಯಂಕರ್ ಶ್ಯಾಮಲಾ, ಅನನ್ಯ ನಾಗಲ್ಲ ಮತ್ತು ಇತರರ ವಿರುದ್ಧ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಇದಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ಪ್ರಭಾವ ಬೀರಿರುವ ನೀತು ಅಗರ್ವಾಲ್, ವಿಷ್ಣು ಪ್ರಿಯಾ, ವರ್ಷಿಣಿ, ಸಿರಿ ಹನುಮಂತು, ವಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಅಮೃತ ಚೌಧರಿ, ನಯನಿ ಪಾವನಿ, ನೇಹಾ ಪಠಾಣ್, ಪದ್ಮಾವತಿ, ಪಾಂಡು, ಇಮ್ರಾನ್ ಖಾನ್, ಹರ್ಷ ಸಾಯಿ, ಬಯ್ಯ ಸನ್ನಿ ಯಾದವ್, ಟೇಸ್ಟಿ ಸುಪ್ರೇಜಾ ಸೇರಿ ಕೆಲವು ಯೂಟ್ಯೂಬರ್‌ಗಳ ವಿರುದ್ಧವೂ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಐದು ರಾಜ್ಯಗಳ ಪೊಲೀಸರು ದಾಖಲಿಸಿಕೊಂಡಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ಆಧರಿಸಿ ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ.

ಇದರಲ್ಲಿ ಆರೋಪಿತರು ಬೆಟ್ಟಿಂಗ್‌ ಮತ್ತಿತರ ಜೂಜುಗಳ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿದ್ದರು ಎಂದು ಆರೋಪಿಸಲಾಗಿದೆ.

ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಾದ ಜಂಗಲ್‌ ರಮ್ಮಿ, ಜೀತ್‌ವಿನ್‌, ಲೋಟಸ್‌365 ಸೇರಿದಂತೆ ಹಲವು ಆ್ಯಪ್‌ಗಳ ಪರ ಈ ಸೆಲೆಬ್ರಿಟಿಗಳು ಪ್ರಚಾರ ನಡೆಸಿದ್ದಾರೆ. ಇದಕ್ಕಾಗಿ ಹಣ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾನೂನು ಬಾಹಿರವಾದ ಬೆಟ್ಟಿಂಗ್‌ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿಲ್ಲ, ಈ ಆ್ಯಪ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದು ತಿಳಿದಿಲ್ಲ ಎಂದು ಪ್ರಕರಣದಲ್ಲಿ ಹೆಸರಿರುವ ಕೆಲ ಜನಪ್ರಿಯ ವ್ಯಕ್ತಿಗಳು ಈ ಹಿಂದೆ ಹೇಳಿದ್ದರು ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಇಡಿ ಅಧಿಕಾರಿಗಳು ಕಲೆಹಾಕುತ್ತಿದ್ದು, ಶೀಘ್ರದಲ್ಲಿ ಇವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು, ಈ ಆ್ಯಪ್‌ಗಳಿಂದ ಅಕ್ರಮವಾಗಿ ಸಂಗ್ರಹಿಸಿದ ಮೊತ್ತ ಎಷ್ಟು ಎನ್ನುವ ಮಾಹಿತಿ ಕಲೆ ಹಾಕಲಾಗುತ್ತಿದೆ. ಹೇಳಿಕೆಗಳು ಮತ್ತು ದಾಖಲೆಗಳನ್ನು ಆಧರಿಸಿ ಸೆಲೆಬ್ರಿಟಿಗಳ ಕೃತ್ಯದ ಪ್ರಮಾಣ ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

 

 

Share This Article
error: Content is protected !!
";