ಹೆಚ್ಚಿನ ಲಾಭದಾಸೆಗೆ 2.40 ಕೋಟಿ ಕಳೆದುಕೊಂಡ ವೈದ್ಯ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ನಗರದ ವೈದ್ಯರೊಬ್ಬರು ಅಧಿಕ ಲಾಭದ ಜಾಹೀರಾತಿಗೆ ಮಾರು ಹೋಗಿ 2.40 ಕೋಟಿ ರೂ.ಗಳನ್ನು ಕಳೆದುಕೊಂಡು ವಂಚನೆಗೊಳಗಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

- Advertisement - 

ಟೆಲಿಗ್ರಾಮ್‌ನಲ್ಲಿ ಚಾಟ್ ಮೂಲಕ ಅಪರಿಚಿತ ವ್ಯಕ್ತಿಗಳು ಸಂಪರ್ಕಕ್ಕೆ ಬಂದು ಷೇರು ಮಾರುಕಟ್ಟೆಗೆ ಸಂಬಂಧಿಸಿದಂತೆ ವೈದ್ಯನಿಂದ ಹಣ ಹೂಡಿಕೆ ಮಾಡಿಸಿದ್ದಾರೆ. ವಂಚಕರು ಕಳುಹಿಸಿದ ಲಿಂಕ್ ಮೂಲಕ ಫೆಬ್ರವರಿ 18 ರಿಂದ ಮೇ 15ರವರೆಗೆ ಹಂತ ಹಂತವಾಗಿ ಒಟ್ಟು 2,40,92,150 ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿರುವುದಾಗಿ ತಿಳಿಸಿದ್ದಾರೆ.

- Advertisement - 

ಹಣ ಹೂಡಿಕೆ ಮಾಡಿದ್ದ ವೈದ್ಯರು ಮೇ.11 ರಂದು 5 ಲಕ್ಷ ರೂ. ಹಿಂಪಡೆಯಲು ಯತ್ನಿಸಿದಾಗ ಹಣ ವಾಪಸ್ ಬಂದಿದೆ. ಆದರೆ, ನಂತರ ಮತ್ತೆ ಹಣ ಹಿಂಪಡೆಯಲು ಪ್ರಯತ್ನಿಸಿದಾಗ ಯಾವುದೇ ಹಣ ಬಂದಿಲ್ಲ. ಇದರಿಂದ ವೈದ್ಯನಿಗೆ ತಾನು ವಂಚನೆಗೊಳಗಾಗಿರುವುದು ಗೊತ್ತಾಗಿ ಸಿಇಎನ್ ಠಾಣೆಯಲ್ಲಿ ದೂರು ದಾಖಲು ಮಾಡಿರುವುದಾಗಿ ತಿಳಿದು ಬಂದಿದೆ.

51 ಲಕ್ಷ ಕಳೆದುಕೊಂಡ ವ್ಯಾಪಾರಿ: ಇದೇ ರೀತಿಯಲ್ಲಿ ಮತ್ತೊಬ್ಬ ವ್ಯಾಪಾರಿ ಹೆಚ್ಚಿನ ಹಣದ ಲಾಭದ ಆಸೆಗೆ ಬಿದ್ದು ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿ ಬರೋಬರಿ 51 ಲಕ್ಷ ರೂ. ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ.

- Advertisement - 

ಇನ್‌ಸ್ಟಾಗ್ರಾಂನಲ್ಲಿ ಶೇ. 200ರಷ್ಟು ಲಾಭ ಸಿಗಲಿದೆ ಎಂಬ ಮಾಹಿತಿ ಬಂದಿದ್ದು ಲಿಂಕ್ ಒತ್ತಿದ ವ್ಯಾಪಾರಿ, ವಂಚಕರ ನಿರ್ದೇಶನದಂತೆ ಹೆಸರು, ಪ್ಯಾನ್‌ಕಾರ್ಡ್, ಕೆವೈಸಿ, ಫೋನ್ ನಂಬರ್ ಎಲ್ಲವೂ ತುಂಬಿ ತಮ್ಮ ಹೊಸ ಐಡಿ ತೆರೆದಿದ್ದಾರೆ.

ಹೆಚ್ಚಿನ ಹಣ ಹೂಡಿದರೆ ಶೇ.200 ಬೋನಸ್ ಕೊಡುವುದನ್ನು ನಂಬಿಸಿ 22.9.2024 ರಿಂದ 26.04.2025 ವರೆಗೆ ಒಟ್ಟು 51,24,464 ರೂ. ಹಣ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ. 20 ಲಕ್ಷ ರೂ. ಹಾಕಿದಾಗ 9 ಲಕ್ಷ ಲಾಭಾಂಶ ತೋರಿಸಲಾಗಿತ್ತು. ಅದನ್ನು ಬಿಡಿಸಿಕೊಳ್ಳಲು ಮುಂದಾದಾಗ ನಿಮ್ಮ ಬೋನಸ್ ಇನ್ನೂ ಪೂರ್ಣಗೊಂಡಿಲ್ಲ. 50 ಲಕ್ಷ ರೂ. ಹೂಡಿಕೆ ಮಾಡಿದ ಮೇಲೆ ನಿಮಗೆ ಶೇ. 200 ಲಾಭವನ್ನು ನಮಗೆ ಯಾವುದೇ ಕಮಿಷನ್ ನೀಡದೇ ಬಿಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಬಳಿಕ ಮತ್ತೆ 51 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಬೋನಸ್ ಸೇರಿ 1.05 ಕೋಟಿ ರೂ. ಲಾಭ ಆನ್‌ಲೈನ್‌ನಲ್ಲಿ ತೋರಿಸುತ್ತಿತ್ತು. ವಿತ್ ಡ್ರಾ ಒತ್ತಿದಾಗ ಈ ಹಣದಲ್ಲಿ ಜಿಎಸ್‌ಟಿ, ಟಿಸಿಎಸ್ ಎಂದು ಶೇ.40 ರಷ್ಟು ಹಣ ಕಟ್ ಆಗುತ್ತದೆ. ಹಾಗಾಗಿ ವಿತ್ ಡ್ರಾ ಆಪ್ಷನ್​ ಒತ್ತಬೇಡಿ ಎಂದು ಚಾಟ್ ಮಾಡಿದ್ದಾರೆ. ಇದನ್ನು ನಿರಾಕರಿಸಿ ಹಣ ಬಿಡಿಸಿಕೊಳ್ಳಲು ಮುಂದಾದಾಗ ನನ್ನ ಖಾತೆ ಬ್ಲಾಕ್ ಮಾಡಲಾಗಿದೆ.

24 ಗಂಟೆ ಬಳಿಕ ಖಾತೆ ತೆರೆದಿದ್ದು ಖಾತೆ ಬ್ಯಾಲೆನ್ಸ್ ಚೆಕ್ ಮಾಡಿದಾಗ ಶೂನ್ಯವಾಗಿತ್ತು. ಚಾರ್ಟ್ ಬೋರ್ಡ್‌ನಲ್ಲಿ ಸಂಪರ್ಕಿಸಿದಾಗ ಎಲ್ಲವೂ ಡಿಲಿಟ್ ಮಾಡಿರುವುದು ಕಂಡಾಗಲೇ ಮೋಸ ಹೋಗಿರುವುದು ಗೊತ್ತಾಗಿದೆ ಎಂದು ವ್ಯಾಪಾರಿ ದೂರಿನಲ್ಲಿ ವಿವರಿಸಿದ್ದಾರೆ.

ಈ ಕುರಿತು ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Share This Article
error: Content is protected !!
";