ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಆಗುತ್ತಿದ್ದು ಗುಡ್ಡ ಕುಸಿತ ಸೇರಿದಂತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಚಂದ್ರದ್ರೋಣ ಪರ್ವತ ಶ್ರೇಣಿಯ ಕವಿಕಲ್ ಗಂಡಿ ಬಳಿ, ಮೂಡಿಗೆರೆ ತಾಲೂಕಿನ ರಾಮಣ್ಣನ ಗಂಡಿ ಬಳಿ ಅಪಘಾತಗಳು ಸಂಭವಿಸಿವೆ.
ಚಂದ್ರದ್ರೋಣ ಪರ್ವತ ಶ್ರೇಣಿಯ ಕವಿಕಲ್ ಗಂಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಪರಿಣಾಮ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ. ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ರಸ್ತೆಯಲ್ಲಿದ್ದ ಕಾರನ್ನು ತೆರವು ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿರುವ ಘಟನೆ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದ ಬಳಿ ನಡೆದಿದೆ. ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದ ಪರಿಣಾಮ ಶೃಂಗೇರಿ-ಮಂಗಳೂರು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಪೊಲೀಸ್, ಪಂಚಾಯಿತಿ ಅಧಿಕಾರಿಗಳು ಹಾಗೂ ಸ್ಥಳೀಯರು ಸುರಿಯುತ್ತಿರುವ ಮಳೆ ಮಧ್ಯೆ ರಸ್ತೆಗೆ ಉರುಳಿರುವ ಮಣ್ಣು ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಮಣ್ಣು ಕುಸಿಯದಂತೆ ರಸ್ತೆ ಬದಿಗೆ ಕಟ್ಟಿದ್ದ ಕಬ್ಬಿಣದ ತಡೆಗೋಡೆಗಳು ಕುಸಿದು ಬಿದ್ದಿದೆ. ಮಳೆ ಜೊತೆ ಗಾಳಿ ಕೂಡ ವೇಗವಾಗಿ ಬೀಸುತ್ತಿರುವುದರಿಂದ ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಚಂದ್ರದ್ರೋಣ ಪರ್ವತ ಶ್ರೇಣಿಯ ಕವಿಕಲ್ ಗಂಡಿ ಬಳಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು. ಶೃಂಗೇರಿಯಲ್ಲಿ ಭೂ ಕುಸಿತ ಉಂಟಾಗಿದೆ.
ಜೀವ ಕಳೆ:
ಚಿಕ್ಕಮಗಳೂರು ಜಿಲ್ಲೆಯ ವಿವಿಧ ಜಲಪಾತಗಳು ಈಗ ಹಾಲ್ನೊರೆಯಂತೆ ಉಕ್ಕಿ ಹರಿಯಲು ಪ್ರಾರಂಭಿಸಿದೆ. ಜಿಲ್ಲೆಯ ಸಿರಿಮನೆ ಜಲಪಾತ ಮಳೆಯಿಂದಾಗಿ ಮತ್ತೆ ಜೀವ ಕಳೆ ಪಡೆದಿದೆ. ಸಿರಿಮನೆ ಫಾಲ್ಸ್ನ ಈ ದೃಶ್ಯಗಳನ್ನು ನೋಡಲು ಈಗ ಎರಡು ಕಣ್ಣುಗಳು ಸಾಲದಾಗಿದೆ.
ಶೃಂಗೇರಿ ತಾಲೂಕಿನ ಕಿಗ್ಗಾ ಸಿರಿಮನೆ ಜಲಪಾತದಲ್ಲಿ ಉತ್ತಮ ಮಳೆಯಿಂದಾಗಿ ಜಲಪಾತದ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ. ಜಲಪಾತಗಳನ್ನು ನೋಡಲು ರಾಜ್ಯ, ಹೊರ ರಾಜ್ಯಗಳಿಂದ ಪ್ರವಾಸಿಗರು ಈ ಭಾಗಕ್ಕೆ ಆಗಮಿಸುತ್ತಿದ್ದಾರೆ.