ನಟ ಸರಿಗಮ ವಿಜಯ್ ನಿಧನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಯ್(76) ಬುಧವಾರೇ ನಿಧನರಾಗಿದ್ದಾರೆ.
ಶ್ವಾಸಕೋಶ ಸಮಸ್ಯೆ ಸೇರಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯ್ ಅವರು ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

 ಸರಿಗಮ ವಿಜಯ್​ ಅವರ ನಿಧನವನ್ನು ಅವರ ಕುಟುಂಬಸ್ಥರು ದೃಢಪಡಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ಸ್ಪಷ್ಟಪಡಿಸಿವೆ.

ಸಂಸಾರದಲ್ಲಿ ಸರಿಗಮ ಎಂಬ ನಾಟಕವನ್ನು ವಿಜಯ್ ಅವರು ನಿರ್ದೇಶಿಸಿ, ನಟಿಸಿದ್ದಾರೆ. ಈ ನಾಟಕ ದೇಶಾದ್ಯಂತ 1,300ಕ್ಕೂ ಹೆಚ್ಚು ಬಾರಿ ಪ್ರದರ್ಶನಗೊಂಡಿದೆ. ಆರ್ ವಿಜಯ್​ ಕುಮಾರ್ ಇವರ ಮೂಲ ಹೆಸರು. ಆದರೆ ಈ ನಾಟಕದಿಂದ ಹೆಚ್ಚಿನ ಜನಪ್ರಿಯತೆ ಸಂಪಾದಿಸಿದ ಬಳಿಕ ಸರಿಗಮ ವಿಜಯ್​ ಎಂದು ಗುರುತಿಸಿಕೊಂಡರು.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಮಧ್ಯಾಹ್ನದ ಹೊತ್ತಿಗೆ ಅಂತ್ಯಕ್ರಿಯೆ ನಡೆಯಲಿದೆ. ರಂಗಭೂಮಿ ಮತ್ತು ಕಿರುತೆರೆ, ಹಿರಿತೆರೆಯಲ್ಲಿ ಸರಿಗಮ ವಿಜಯ್​ ಹೆಸರು ಮಾಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ 1975ರ ಸಂದರ್ಭದಲ್ಲಿ ಎಂಟ್ರಿ ಕೊಟ್ಟ ವಿಜಯ್​ ಈವರೆಗೆ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 80 ಚಿತ್ರಗಳಲ್ಲಿ ಸಹ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು. ಬೆಳುವಲದ ಮಡಿ ಎಂಬುದು ಇವರ ಮೊದಲ ಚಿತ್ರ. ಹಾಸ್ಯ ನಟನೆ, ಪೋಷಕ ನಟನಾಗಿ ತಮ್ಮದೇ ಆದ ಜನಪ್ರಿಯತೆ ಸಂಪಾದಿಸಿದ್ದರು. ಸದ್ಯ ಇಹಲೋಕ ತ್ಯಜಿಸಿದ್ದು, ಕುಟುಂಬ ಕಣ್ಣೀರಿನಲ್ಲಿದೆ. 

 

- Advertisement -  - Advertisement -  - Advertisement - 
Share This Article
error: Content is protected !!
";