ಚಿತ್ರದುರ್ಗದಲ್ಲಿ ಡ್ರೋನ್​​ ಪಾರ್ಕ್, ದಾಬಸಪೇಟೆ ಬಳಿ ಮೆಗಾ ಲಾಜಿಸ್ಟಿಕ್ಸ್​ ಪಾರ್ಕ್​ ಆರಂಭ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ವಲಯವಾರು ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವಭಾವಿಯಾಗಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಪಾಟೀಲ್, ಹೂಡಿಕೆದಾರರ ಸಮಾವೇಶದ ಮೂಲಕ 10 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಬರುವುದು ಖಾತ್ರಿಯಾಗಿದೆ ಎಂದು ಅವರು ತಿಳಿಸಿದರು.

ಚಿತ್ರದುರ್ಗದಲ್ಲಿ ಡ್ರೋನ್​​ ಪಾರ್ಕ್​ ಸೇರಿದಂತೆ ರಾಜ್ಯದ ವಿವಿಧೆಡೆಯ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಆಧುನಿಕ ಫಾರ್ಮಾ ಪಾರ್ಕ್​, ವಿಜಯಪುರದಲ್ಲಿ ಸೋಲಾರ್​​ ಸೆಲ್​​ ಪಾರ್ಕ್​ ಮತ್ತು ಕೃಷಿ ಉತ್ಪನ್ನಗಳನ್ನು ಆಧರಿಸಿದ ಆಗ್ರೋ ಪಾರ್ಕ್​, ಜಂಗಮನಕೋಟೆಯಲ್ಲಿ ಸರ್​.ಎಂ.ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಡೀಪ್​-ಟೆಕ್​ ಪಾರ್ಕ್​, ಡಾಬಸಪೇಟೆಗೆ ಸಮೀಪದ ಹನುಮಂತಪುರದಲ್ಲಿ ಮೆಗಾ ಲಾಜಿಸ್ಟಿಕ್ಸ್​ ಪಾರ್ಕ್​, ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಧಾರವಾಡದಲ್ಲಿ ಇ.ವಿ ಕ್ಲಸ್ಟರ್ಸ್ ಸ್ಥಾಪಿಸಲಾಗುವುದು ಎಂದು ಸಚಿವ ಪಾಟೀಲ್ ಮಾಹಿತಿ ನೀಡಿದರು.

14 ಹೂಡಿಕೆ ಕಂಪೆನಿಗಳು: ಆರ್ಥಿಕ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿರುವ 14 ಉದ್ಯಮಗಳನ್ನು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಗುರುತಿಸಿ, ಪುರಸ್ಕರಿಸಲಾಗುತ್ತಿದೆ. ಇವುಗಳಲ್ಲಿ ವೈಮಾಂತರಿಕ್ಷ ಮತ್ತು ರಕ್ಷಣೆ, ಆಟೋ/ ಇ.ವಿ., ಜೈವಿಕ ತಂತ್ರಜ್ಞಾನ ಮತ್ತು ಜೀವವಿಜ್ಞಾನ ವಲಯಗಳ ಸಾಧಕ ಉದ್ಯಮಗಳು ಇರಲಿವೆ. ಈ ಕಾರ್ಯಕ್ರಮ ಫೆ.12ರ ಸಂಜೆ ನಡೆಯಲಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ತಮ್ಮ ಉದ್ಯಮಗಳಿಗೆ ಒಂದು ಬಾರಿಯ ಗರಿಷ್ಠ ಬಂಡವಾಳ ಹೂಡಿಕೆ ಮಾಡಿರುವ ಕಂಪೆನಿಗಳು ಮತ್ತು ಜಾಗತಿಕ ಮಟ್ಟದ ಸಂಶೋಧನೆ ಹಾಗೂ ಅಭಿವೃದ್ಧಿಗೆ (ಆರ್‌ಮತ್ತು ಡಿ) ಆದ್ಯತೆ ನೀಡಿರುವ ಉದ್ದಿಮೆಗಳನ್ನೂ ವಿಶೇಷವಾಗಿ ಪರಿಗಣಿಸಿ, ಪುರಸ್ಕಾರ ನೀಡಲಾಗುವುದು. ಹಾಗೆಯೇ, ರಾಜ್ಯದ ಕೈಗಾರಿಕಾ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ 35ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಸ್ತರದ ಕೈಗಾರಿಕೆಗಳು, ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ಮಹಿಳಾ ಉದ್ಯಮಿಗಳು, ವಲಯವಾರು ಕೈಗಾರಿಕಾ ಉತ್ಕೃಷ್ಟತೆ ಸಾಧಿಸಿರುವ ಉದ್ಯಮಗಳಿಗೆ ಫೆ.13ರ ಸಂಜೆ ಪ್ರಶಸ್ತಿ ಪುರಸ್ಕಾರ ಕೊಡಲಾಗುವುದು ಎಂದು ತಿಳಿಸಿದರು.

ವೆಂಚುರೈಸ್​​ ಉಪಕ್ರಮದಡಿ ಒಟ್ಟು 3 ಲಕ್ಷ ಡಾಲರ್​ ಮೌಲ್ಯದ 9 ಬಹುಮಾನಗಳನ್ನು ಪ್ರದಾನ ಮಾಡಲಾಗುವುದು. ಇದರಲ್ಲಿ ಮೊದಲ ಮೂರು ಸ್ಥಾನಗಳಿಗೆ ಕ್ರಮವಾಗಿ 50 ಸಾವಿರ ಡಾಲರ್​​, 30 ಸಾವಿರ ಡಾಲರ್​​ ಮತ್ತು 20 ಸಾವಿರ ಡಾಲರ್​​ ನಗದು ಪುರಸ್ಕಾರವಿದೆ ಎಂದು ಸಚಿವರು ತಿಳಿಸಿದರು.

ಒಡಂಬಡಿಕೆಗಳು: ಹೂಡಿಕೆದಾರರ ಸಮಾವೇಶದಲ್ಲಿ ಮಹತ್ವಾಕಾಂಕ್ಷಿ ಕ್ವೀನ್​ ಸಿಟಿ ಯೋಜನೆ ಸಂಬಂಧ ದೇಶ-ವಿದೇಶದ ಕೆಲವು ವಿಶ್ವವಿದ್ಯಾಲಯಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ ಸಚಿವರು, ಆರ್ಥಿಕ ಬೆಳವಣಿಗೆ ಕುರಿತು ಮಾಂಟೆಕ್​ ಸಿಂಗ್​ ಅಹ್ಲುವಾಲಿಯಾ, ಲಾಜಿಸ್ಟಿಕ್ಸ್ ವಲಯದಲ್ಲಿ ನಡೆಯುತ್ತಿರುವ ಆವಿಷ್ಕಾರಗಳನ್ನು ಕುರಿತು ವೋಲ್ವೊ ಸಮೂಹದ ಮುಖ್ಯಸ್ಥ ಮಾರ್ಟಿನ್ ಲುಂಡ್ ಸ್ಟೆಡ್, ಸಂದೀಪ್ ದೇಶಮುಖ್ ಮತ್ತು ಚಾಣಕ್ಯ ಹೃದಯ, ಯುವ ಸಂಶೋಧಕರನ್ನು ಕುರಿತು ಝೆರೋದಾ ಸಂಸ್ಥಾಪಕ ನಿಖಿಲ್ ಕಾಮತ್, ಉದ್ಯಮಿಗಳಾದ ಪಾರ್ಥ ಜಿಂದಾಲ್ ಹಾಗೂ ಸುಝಾನಾ ಮುತ್ತೂಟ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಪಾಟೀಲ ಮಾಹಿತಿ ನೀಡಿದರು.

ಹಿಂದಿನ ಸಮಾವೇಶಕ್ಕಿಂತ ಈ ಬಾರಿಯ ಹೂಡಿಕೆದಾರರ ಸಮಾವೇಶದಲ್ಲಿ ಎರಡು ಪಟ್ಟು ಹೆಚ್ಚು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಇವುಗಳಲ್ಲಿ ಗೂಗಲ್ ಎಕ್ಸ್ ಸಂಸ್ಥಾಪಕ ಸೆಬಾಸ್ಟಿಯನ್ ತ್ರನ್, ಲ್ಯಾಮ್​ ರೀಸರ್ಚ್​ ಮುಖ್ಯಸ್ಥ ಪ್ಯಾಟ್ರಿಕ್​ ಲಾರ್ಡ್​, ಜನರಲ್ ಅಟಾಮಿಕ್ಸ್​ ಗ್ಲೋಬಲ್ ಕಾರ್ಪೊರೇಷನ್ ಸಿಇಒ ವಿವೇಕ್ ಲಾಲ್, ಟಿವಿಎಸ್ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು, ಬೋಯಿಂಗ್​ ಕಂಪನಿಯ ಉನ್ನತಾಧಿಕಾರಿ ರಾಬ್ ಬಾಯ್ಡ್, ನಥಿಂಗ್ ಕಂಪನಿಯ ಸಹ ಸಂಸ್ಥಾಪಕ ಅಕಿಸ್​​ ಇವ್ಯಾಂಜಿಲೈಡಿಸ್, ಗ್ರೀಸ್​ ದೇಶದ ಮಾಜಿ ಪ್ರಧಾನಿ ಜಾರ್ಜ್ ಪೆಪೆಂಡ್ರಿಯೊ ಮುಂತಾದವರು ಮಾತನಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ್ ಮತ್ತಿತರರು ಇದ್ದರು.

 

 

Share This Article
error: Content is protected !!
";