ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇವರ ಸುತ್ತ ಮುತ್ತ ! ಆಸ್ತಿಕತೆ, ನಾಸ್ತಿಕತೆಯ ಬಗ್ಗೆ ಮಾತನಾಡುವಷ್ಟು ಜಾಣ ನಾನಲ್ಲ. ಆದರೆ ಮನದಲ್ಲಿ ಕಾಡುವ ತಾರ್ಕಿಕ ವಿಚಾರವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ. ಹೌದು ನನಗೆ ಬುದ್ಧಿ ಬಂದಾಗಿನಿಂದಲೂ ಕಾಡುತ್ತಿರುವ ಏಕೈಕ ಪ್ರಶ್ನೆ ಎಂದರೆ ಯಾರನ್ನು ನಾವು ದೇವರೆಂದು ಪೂಜಿಸಬೇಕು ಆರಾಧಿಸಬೇಕು!??
ಹೆಚ್ಚು ಕಡಿಮೆ ಮುವ್ವತ್ತು ವರ್ಷಗಳಿಂದಲೂ ಪ್ರತಿದಿನವೂ ಯೋಚಿಸುತ್ತಲೇ ಬರುತ್ತಿದ್ದೇನೆ. ದೇವರು ಎಲ್ಲಿದ್ದಾನೆ!?? ಹೇಗಿದ್ದಾನೆ? ಬಲ್ಲವರು ಉಂಟೆ ನೋಡಿದವರುಂಟೆ!? ಹೋಗಲಿ ಅವನೊಟ್ಟಿಗೆ ಮಾತನಾಡಿದವರಾದರು ಯಾರಾದರೂ ಇದ್ದಾರೆ? ಇಂತಹ ನಿಗೂಢ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆಯೋ ಸಿಕ್ಕಿಲ್ಲವೋ ನನಗಂತೂ ಗೊತ್ತಿಲ್ಲ!
ಈ ಕುರಿತು ನಾನು ಮಾತನಾಡಿದರೆ, ಬಹು ಸಂಖ್ಯಾತ ಜನರು ನನ್ನನ್ನು ಹುಚ್ಚ ನೆನ್ನಬಹುದೇನೋ! ಮೂವತ್ಮೂರು ಕೋಟಿ ದೇವರುಗಳು ಇದ್ದಾರೆ ಎನ್ನುವ ಜನಪದ ಪ್ರತೀತವಿದೆ, ಇರಬಹುದೇನೋ!? ನಾನಂತೂ ಕಂಡಿಲ್ಲ ಎನ್ನುವುದು ಅಕ್ಷರಶಃ ಸತ್ಯ. ಹಾಗಂತ ನಾನು ದೇವರನ್ನಾಗಲಿ, ದೇವರನ್ನು ನಂಬಿರುವವರನ್ನಾಗಲಿ, ಯಾವುದೇ ಧರ್ಮವನ್ನಾಗಲಿ, ಜಾತಿಯನ್ನಾಗಲಿ, ಮತ್ತೇ ಇನ್ಯಾವ ಮಾನವ ಕುಲಕ್ಕೆ ನೋವು ಮಾಡುವ ಉದ್ದೇಶದಿಂದಾಗಲಿ ಈ ಕುರಿತು ಮಾತನಾಡುತ್ತಿಲ್ಲ.
ನಾವು ನೀವೆಲ್ಲರೂ ಕಂಡಂತೆ ಜಗತ್ತಿನಲ್ಲಿ ನಡೆಯುವಂತಹ ಸುನಾಮಿ, ಭೂಕಂಪ, ಜ್ವಾಲಾಮುಖಿಗಳು, ಕಾಡ್ಗಿಚ್ಚುಗಳು ಹಾಗೂ ಪ್ರವಾಹಗಳು, ಅಪಘಾತಗಳು, ಅತಿವೃಷ್ಟಿ ಮತ್ತು ಅನಾವೃಷ್ಟಿ ಇತ್ಯಾದಿ ಪ್ರಾಕೃತಿಕ ವಿಕೋಪ ಘಟನೆಗಳನ್ನು ಯಾವ ದೇವರು ಬಂದು ತಡೆದಿದ್ದನ್ನು ಯಾರು ನೋಡಿಲ್ಲ ಹೇಳಿಲ್ಲ ಕಂಡಿಲ್ಲ ಹಾಗೂ ಯಾವ ಮಾಧ್ಯಮಗಳಾಗಲಿ ಪ್ರಸಾರ ಮಾಡಿಲ್ಲ, ಇಷ್ಟೇ ಯಾಕೆ ನಾವು ನೀವೆಲ್ಲ ಅನುಭವಿಸಿರುವಂತಹ ತೀರ ಇತ್ತೀಚೆಗೆ ಬಂದಂತಹ ಸಾಂಕ್ರಾಮಿಕ ರೋಗವಾದ ಕರೋನ ಬಂದಾಗಲೂ ಸಹ ಕೆಲವು ದಿನಗಳವರೆಗೆ ಇಡೀ ವಿಶ್ವವೇ ಸ್ತಬ್ಧವಾಗಿತ್ತು ಆಗ ಯಾವ ದೇವರು ಬಂದು ನಮ್ಮನ್ನು ಕಾಪಾಡಿದ? ಒಂದೇ ಒಂದು ಕ್ಷಣ ನೈಜವಾಗಿ ಯೋಚನೆ ಮಾಡಿ ನೋಡಿ! ………..
ದೇವರ ಕುರಿತು ನಾನು ಒಪ್ಪಿಕೊಳ್ಳುತ್ತೇನೆ. ದೇವರು ಎನ್ನುವುದು ಅಮೂರ್ತ ಸ್ವರೂಪ, ಗಾಳಿ, ಬೆಳಕು, ನೀರು ಇವು ಸಕಲ ಜೀವಾತ್ಮಗಳಿಗೆ ಬೇಕಾದವುಗಳು ಇಂಥ ರೂಪದಲ್ಲಿ ಇರಬಹುದೇನೋ! ನಾನು ಅದನ್ನು ದೈವ ಅಥವಾ ಪ್ರಕೃತಿ ಎಂದು ಹೇಳಲು ಬಯಸುತ್ತೇನೆ. ಏಕೆಂದರೆ ಒಂದು ಜೋಳ ಅಥವಾ ರಾಗಿಯನ್ನು ಕೋಟ್ಯಾಧೀಶ್ವರನ ಕೈಯಲ್ಲಿ ಕೊಟ್ಟು ಆರು ತಿಂಗಳ ಸಮಯ ಕೊಟ್ಟರೆ ಆ ಒಂದು ಕಾಳನ್ನು ಸಾವಿರಾರು ಕಾಳುಗಳನ್ನಾಗಿ ಪರಿವರ್ತಿಸುವ ಕಾರ್ಯ ಯಾರಿಂದಲೂ ಸಾಧ್ಯವಿಲ್ಲ, ಯಾವುದೇ ತಂತ್ರಜ್ಞಾನ ಈವರೆಗೂ ಬಂದಿಲ್ಲ. ಮುಂದೆ ಬರುತ್ತದೆ ಇಲ್ಲವೋ ನನಗಂತೂ ಗೊತ್ತಿಲ್ಲ .
ಹಾಗೆಯೇ ಒಂದು ಕೆಜಿ ಅಕ್ಕಿಯನ್ನು ನಿಮಗೆ ಕೊಟ್ಟು ಒಲೆಯ ಮೇಲಿಟ್ಟು ನಿಮಗಿಷ್ಟದ ದೇವರ ಧ್ಯಾನ ಮಾಡುತ್ತಾ ಕುಳಿತಿರೆ ಆ ಅಕ್ಕಿಯು ಎಂದಿಗೂ ಅನ್ನವಾಗಲಾರದು.
ಆದರಿಲ್ಲಿ ಪ್ರಕೃತಿ ಕೊಟ್ಟಿರುವಂತಹ ನೀರು, ಬೆಂಕಿಯನ್ನು ಹಚ್ಚಿ ನೋಡಿಕೊಳ್ಳುವಂತಹ ಮಾನವನ ಶ್ರಮವೂ ತುಂಬಾ ಮುಖ್ಯವಾಗುತ್ತದೆ.
ಈ ನಿಟ್ಟಿನಲ್ಲಿ ಮಾರ್ಮಿಕವಾಗಿ ಯೋಚನೆ ಮಾಡಿ ನೋಡಿದಾಗ ಪ್ರತಿಯೊಬ್ಬರಿಗೂ ಇಂಥದೊಂದು ಪ್ರಶ್ನೆ ಖಂಡಿತವಾಗಿ ಕಾಡಿಯೇ ಕಾಡಿರುತ್ತದೆ. ಬಹುತೇಕರು ಹೇಳಿಕೊಳ್ಳುವುದಿಲ್ಲ ನಾನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಹಾಗಂತ ನಾನು ದೇವರು ಇಲ್ಲವೇ ಇಲ್ಲ ಎಂದು ಎಲ್ಲಿಯೂ ಹೇಳಿಲ್ಲ ಹೇಳುವುದು ಇಲ್ಲ. ಕಣ್ಣಿಗೆ ಕಾಣುವಂತಹ ವಿಚಾರಗಳನ್ನು ನಾವು ದೇವರೆಂದು ಒಪ್ಪಿಕೊಳ್ಳಬಾರದೇಕೆ!?
ವ್ಯಕ್ತಿ ಪೂಜೆಗಿಂತ ಶಕ್ತಿ ಮತ್ತು ಯುಕ್ತಿಯ ಪೂಜೆಯನ್ನು ಮಾಡಬೇಕೆನ್ನುವುದು ನನ್ನ ಹಂಬಲ. ಕಣ್ಣಿಗೆ ಕಾಣುವಂತಹ ದೇವರುಗಳೆಂದರೆ ಮತ್ತಿನ್ಯಾರೂ ಅಲ್ಲ ನಮಗೆ, ನಿಮಗೆಲ್ಲ ಜೀವ ಕೊಟ್ಟ ತಂದೆ ತಾಯಿಯನ್ನು ಅಥವಾ ಅತ್ತೆ ಮಾವನನ್ನು, ಅಣ್ಣ ತಮ್ಮನನ್ನು, ಅಕ್ಕ ತಂಗಿಯರನ್ನು, ಮತ್ತಿನ್ಯಾರೋ ನಿಮ್ಮ ಕಷ್ಟ ಕಾಲದಲ್ಲಿ ಕೈ ಹಿಡಿದವರನ್ನು, ಎಲ್ಲಿಯೋ ಸಾಯಬೇಕಾದ ಸಂದರ್ಭದಲ್ಲಿ ನಿಮ್ಮನ್ನು ಬದುಕಿಸಿದವರನ್ನೋ ದೇವರೆಂದು ಪೂಜಿಸಬೇಕು, ಅಥವಾ ಪ್ರಕೃತಿಯನ್ನು ದೇವರೆಂದು ಆರಾಧಿಸಬೇಕು, ಕಾಪಾಡಬೇಕು ಜೊತೆಗೆ ಪೂಜಿಸಲು ಬೇಕು.
ಇದಕ್ಕೆ ಪೂರಕವೆಂಬಂತೆ ನಾವು ನೀವುಗಳೆಲ್ಲ, ಪ್ರೌಢಶಾಲೆಯಲ್ಲೋ ಕಾಲೇಜ್ ಶಿಕ್ಷಣದಲ್ಲೂ ಓದಿದ ಒಂದು ವಿಚಾರವನ್ನು ನೆನಪಿಸುತ್ತೇನೆ. ನಾಗರಿಕತೆಯ ಕಾಲದಲ್ಲಿ ಭೂಮಿಯನ್ನು, ಸೂರ್ಯನನ್ನು,ಚಂದ್ರನನ್ನು, ನದಿ ಸಮುದ್ರಗಳನ್ನು , ಬೆಂಕಿಯನ್ನು ಪೂಜಿಸುತ್ತಿದ್ದರು ಎಂದು ತಿಳಿದು ಬರುತ್ತದೆ ಅಲ್ಲವೇ!!?
ಯಾವುದೋ ದೇವಸ್ಥಾನದಲ್ಲಿನ ಯಾವುದೋ ರೂಪದಲ್ಲಿರುವ ಅಂತಹ ವಿಗ್ರಹಗಳನ್ನು ಪೂಜಿಸುವುದರಿಂದ ಅಥವಾ ಆರಾಧಿಸುವುದರಿಂದ ನಮಗೆ ಬರುವ ಲಾಭವಾದರೂ ಏನು!?
ಈ ಮೂಲಕಒಂದಿಷ್ಟು ನೆಮ್ಮದಿ ಸಿಗಬಹುದು ಎನ್ನುವುದರಲ್ಲಿ ಅನುಮಾನವೇ ಇಲ್ಲ. ನಿತ್ಯ ನೂರಾರು ಜಂಜಾಟದಲ್ಲಿ ತೊಳಲಾಡುವ ಮಾನವನ ಬದುಕು, ಶಾಂತ ರೀತಿಯ ಹಾಗೂ ಒಂದಿಷ್ಟು ನಿಶಬ್ದವಾಗಿರುವಂತಹ ಪರಿಸರಕ್ಕೆ ಹೋದ ಕೂಡಲೇ ನೆಮ್ಮದಿಯ ಭಾವನೆ ಬರುತ್ತದೆ.
ಹಾಗಾಗಿ ಎಲ್ಲೋ ಒಂದು ಕಡೆ ಯಾವುದೋ ಒಂದು ದೇವರಿದ್ದಾನೆ ಎನ್ನುವ ಭಾವನೆ ಸಹಜವಾಗಿ ಬಂದೇ ಬರುತ್ತದೆ. ಇದನ್ನೇ ನಾವು ಆಚಲವಾಗಿ (ಮೂಢವಾಗಿ) ನಂಬಿ ದೇವರ ಮರೆ ಹೋಗುತ್ತೆವೆ. ಅಷ್ಟೇ ಯಾಕೇ ನೂರಾರು ಹರಕೆಗಳನ್ನು ಕಟ್ಟಿಕೊಂಡು ಹೋಗುವುದು, ಮುಡುಪು ಕೊಡುವುದು, ಇನ್ನೂ ಏನೇನೋ. ಅದರಲ್ಲೂ ಅಮವಾಸೆ ಹುಣ್ಣಿಮೆಯಂದು ಕೆಲವು ದೇವಸ್ಥಾನಗಳಲ್ಲಿ ನೂಕು ನುಗ್ಗುಲು, ಜೊತೆಗೆ ಭಕ್ತರ ಗಲಾಟೆಯನ್ನು ತಡೆಯಲು ಬಂದೋಭಸ್ತ ಬೇರೆ. ಅಮವಾಸೆ ಹುಣ್ಣಿಮೆ ದಿನ ದೇವರು ವಿಶೇಷ ದರ್ಶನ ಕೊಡುತ್ತಾನೆಂದು ಅದೆಷ್ಟೇ ಕೆಲಸವಿದ್ದರೂ ಅಂದು ದೇವಸ್ಥಾನಕ್ಕೆ ಹಾಜರಾಗುವ ಭಕ್ತರ ಸಂಖ್ಯೆಗೇನು ಕಡಿಮೆಯಿಲ್ಲ.
ಮತ್ತೊಂದು ವಿಚಾರ ನಾನು ಪತ್ರಿಕೆಯಲ್ಲಿ ಓದಿದಂತೆ ತಮಿಳುನಾಡಿನಲ್ಲಿ ಮದುವೆಯಂತಹ ಕಾರ್ಯಗಳು ನಡೆಯುತ್ತವೆ. ಅದೇ ನಮ್ಮ ಕರ್ನಾಟಕದಲ್ಲಿ ಬೈಕ್ ಕಾರು ತೊಳೆದು ಪೂಜೆ ಮಾಡದೇ ಹೊರ ಹೋಗುವುದಿಲ್ಲ. ಇನ್ನೂ ಒಳ್ಳೆಯ ಕಾರ್ಯವನಂತು ಆರಂಭಿಸುವುದು ಕನಸಿನ ಮಾತಾಗಿದೆ. ಅಭಿಷೇಕ, ಕುಂಬಾಭಿಷೇಕ ಹೋಮ ಹವನ
ಹೀಗೆ ಏನೇನೋ ನಡೆಯುತ್ತವೆ ಇವೆಲ್ಲವುಗಳಿಂದ ಯಾವುದಾದರೂ ಬದಲಾವಣೆ ಆಗಿದೆಯೇ!!? ಹಾಗಂತ ಇವುಗಳನ್ನು ಮಾಡಬಾರದೆಂದು ನಾನು ಖಂಡಿತಾ ಹೇಳಲಾರೆ. ಹಿತವಾಗಿ ಮಿತವಾಗಿದ್ದರೆ ಎಲ್ಲದಕ್ಕೂ ಒಳ್ಳೆಯದಲ್ಲವೇ!?
ನೋಡಿ ಅದೆಷ್ಟೋ ದೇವಸ್ಥಾನಗಳಲ್ಲಿ ವ್ಯವಹಾರದ ಅಂಗಡಿಯಲ್ಲಿ ಹಾಕಿದಂತೆ ಇಂತಹ ಪೂಜೆಗೆ ಇಷ್ಟು ಎಂದು ಬೋರ್ಡ್ ಕೂಡ ನೇತು ಹಾಕಲಾಗಿರುತ್ತದೆ. ಪೂಜಾರಿ ಮಂಗಳಾರತಿ ಕೊಡುವಾಗ ಅವರ ತಟ್ಟೆಗೆ ಹಣ ಹಾಕಬೇಡಿ ಹಣವನ್ನು ಹುಂಡಿಯಲ್ಲಿ ಹಾಕಿ ಎಂದು ಸಹ ಬೋರ್ಡನ್ನು ಹಾಕಲಾಗಿರುತ್ತದೆ. ದೇವರ ತಟ್ಟೆಯಲ್ಲಿ ಹಾಕಿದ ಹಣವನ್ನು ಪೂಜಾರಿ ತೆಗೆದುಕೊಂಡರೆ ದೇವರು ಶಿಕ್ಷೆಯನ್ನು ಕೊಡುವುದಿಲ್ಲವೇ!!? ರಾತ್ರಿ ಒಂಬತ್ತು ಗಂಟೆಗೆ ದೇವಸ್ಥಾನದ ಬಾಗಿಲು ಹಾಕಿದಾಗ ದೇವರಿಗೆ ಬೇಸರ ಆಗುವುದಿಲ್ಲವೇ!? ದೇವರು ತನ್ನನ ತಾನು ರಕ್ಷಣೆ ಮಾಡಿಕೊಳ್ಳಬಹುದಲ್ಲವೇ!?
ಬಾಗಿಲು ಬೀಗ ಯಾಕೇ!!?
ಇದೊಂದು ತಾರ್ಕಿಕ ಪ್ರಶ್ನೆಯಾಗಿ ಕಾಡುತ್ತದೆ. ಹಾಗೆಯೇ ಈಗಾಗಲೇ ಬಹುತೇಕ ಶ್ರೀಮಂತರಾಗಿರುವಂತಹ ಬಹುಸಂಖ್ಯಾ ದೇವರುಗಳು ವಿಶೇಷ ದರ್ಶನವನ್ನು ಕೊಡುತ್ತಿವೆ ಅದು ಹಣ ಇದ್ದ ಶ್ರೀಮಂತರಿಗೆ ಮಾತ್ರ. ದೇವರು ವಿಐಪಿಗಳಿಗೆ ಹಾಗೂ ವಿವಿಐಪಿ ಗಳಿಗೆ ಮತ್ತು ಸಾಮಾನ್ಯರಿಗೂ ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದರೆ ಅಲ್ಲಿಗೆ ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಪ್ರಾಕೃತಿಕ ಸೃಷ್ಟಿಗಿಂತ ಮಾನವನ ಸೃಷ್ಟಿಯೇ ಮೇಲುಗೈ ಸಾಧಿಸುತ್ತದೆ ಎನ್ನುವುದರಲ್ಲಿ ಯಾವುದೇ ಉರುಳಿಲ್ಲ. ವಯಸ್ಸಾದ ಹಿರಿಯರು, ಮಕ್ಕಳನ್ನು ಎತ್ತಿಕೊಂಡು ದರ್ಶನಕ್ಕೆ ಬಂದ ತಾಯಂದಿರು,
ವಿಶೇಷಚೇತನರು ಸರತಿ ಸಾಲಿನಲ್ಲಿ ನಿಂತಿರುವಾಗ ಯಾವುದಾದರೂ ವಿವಿಐಪಿ ಬಂದಾಗ ಸಾಲಿನಲ್ಲಿ ನಿಂತವರನ್ನು ತಡೆದು ವಿಶೇಷ ದರ್ಶನ ಮಾಡಿಸಲಾಗುತ್ತದೆ. ಹಾಗಾದರೆ ಇದು ದೇವರೇ ಮಾಡುವ ತಾರತಮ್ಯ ಅಲ್ಲವೇ!? ಇಂತಹ ಗಳಿಗೆಯಲ್ಲಿ ದೇವರು ತಾರತಮ್ಯವನ್ನು ತಡೆಯಬಾರದೇಕೆ!!?
ಹೀಗೆ ಹುಡುಕುತ್ತಾ ಹೋದರೆ ನೂರಾರು ಕಾರಣಗಳನ್ನು ನಾವು ಕಾಣಬಹುದು. ದೇವರು ವಿಚಾರ ಕುರಿತು ನಾನು ಈ ಲೇಖನವನ್ನು ಬರೆಯುವಾಗಲೇ ನನಗೆ ತಿಳಿಯಿತು ಖಂಡಿತವಾಗಲೂ 99% ರಷ್ಟು ಜನ ಈ ವಿಚಾರವನ್ನು ಖಂಡಿಸುತ್ತಾ ವಿರೋಧಿಸುತ್ತಾರೆ ಎನ್ನುವುದು ಗೊತ್ತಾಗಿದೆ. ಆದರೆ ಪ್ರಜ್ಞಾವಂತರದ ಒಂದಿಷ್ಟು ಜನರಾದರೂ ಅರ್ಥೈಸಿಕೊಳ್ಳಬಹುದು ಎನ್ನುವ ಭಾವನೆ ನನ್ನದಾಗಿದೆ. 21ನೇ ಶತಮಾನದಲ್ಲಿ ಮುನ್ನಡೆಯುತ್ತಿರುವ ನಾವುಗಳು ವೈಚಾರಿಕತೆ ಕುರಿತು ಯೋಚಿಸಬಾರದೇಕೆ!
ದೇವರು ಇರುವಿಕೆ ಅಂದಿಗೂ ಇಂದಿಗೂ ನಿಗೂಢ. ಆದರೆ ಯಾವುದನ್ನು ಅನುಸರಿಸಬೇಕು ಯಾವುದನ್ನು ಅನುಸರಿಸಬಾರದು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯ ಹಾಗೂ ಅಗತ್ಯವಾಗಿದೆ ಎನ್ನುವುದು ನನ್ನ ಅಭಿಪ್ರಾಯ ಅಷ್ಟೇ. ನೀವೇನಂತೀರಾ???

ಜಿ. ಎಸ್. ಎಸ್. ರವರ ನೆನೆಯುತ್ತಾ. ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ. ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ. (ಯಾರ ನಂಬಿಕೆ ದಕ್ಕೆ ತರುವ ಉದ್ದೇಶವಿಲ್ಲದ ಲೇಖನವಾಗಿದ್ದು, ಇದು ಲೇಖಕರ ಅಭಿಪ್ರಾಯವಷ್ಟೇ).
ಲೇಖನ: ಉಮೇಶ್ ಬಾಬು ಮಠದ್(ಉಬಾಮ), ಸಾಹಿತಿಗಳು ಹಾಗೂ ಸಾಮಾಜಿಕ ಚಿಂತಕರು, ದಾವಣಗೆರೆ, ಮೊ.9844270305

