ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಮುಲ್ ನಿರ್ದೇಶಕ ಬಿ. ಸಿ. ಆನಂದ್ ರವರು ತಮ್ಮನ್ನು ಏಕವಚನದಲ್ಲಿ ನಿಂದಿಸಿರುವುದಲ್ಲದೆ ಅವರು ರಾಜಕೀಯವಾಗಿ ಬೆಳೆಯಲು ಕಾರಣವಾದ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡಲು ಆನಂದ್ ರವರಿಗೆ ಯಾವುದೇ ನೈತಿಕತೆ ಇಲ್ಲ. ಅಸಲಿಗೆ ಅವರು ಯಾವ ಪಕ್ಷದಲ್ಲಿದ್ದಾರೆಂದು ಅವರನ್ನು ಬೆಂಬಲಿಸಿದ ಶಾಸಕರು ಸ್ಪಷ್ಟ ಪಡಿಸಬೇಕು ಎಂದು ಮಾಜಿ ಶಾಸಕ ವೆಂಕಟರಾಮಯ್ಯ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾಜಿ ಶಾಸಕ ವೆಂಕಟರಮಣಯ್ಯ ಮಾತನಾಡಿ ಇವತ್ತು ಬಿ. ಸಿ. ಆನಂದ್ ರಾಜಕೀಯವಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆಂದರೆ ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷ ನೀಡಿದ ಭಿಕ್ಷೆ ಎನ್ನುವುದು ಮರೆಯಬಾರದು. ಕಾಂಗ್ರೆನಲ್ಲಿದ್ದ ಅವರು ಬಿಜೆಪಿಗೆ ಪಕ್ಷಾಂತರ ಮಾಡಿ ಮತ್ತೆ ಕಾಂಗ್ರೆಸ್ ನ ಹಿರಿಯ ಮುಖಂಡರಾದ ಲಕ್ಷ್ಮಣ್ ರವರ ಬಳಿ ಗೋಗರೆದು ಕಾಂಗ್ರೆಸ್ ಪಕ್ಷಕ್ಕೆ ಪುನಃ ಸೇರ್ಪಡೆಗೊಂಡರು. ನಂತರ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ನಾವೆಲ್ಲ ಸೇರಿ ಅವರ ಪತ್ನಿಗೆ ಟಿಕೆಟ್ ನೀಡಿ ಗೆಲ್ಲಿಸಿದೆವು. ಮತ್ತೆ ಬಮುಲ್ ಚುನಾವಣೆ ಬಂದಾಗ ನನ್ನ ಸೋದರ ರಾಮಣ್ಣ ಸ್ಪರ್ದಿಸಲು ಮುಂದಾದಾಗ ನಮ್ಮನ್ನೆಲ್ಲ ಕಾಡಿ ಬೇಡಿ ತಾನು ಸ್ಪರ್ದಿಸಲು ಒತ್ತಡ ಹಾಕಿದರು. ಪಕ್ಷದ ಹಿರಿಯ ಮುಖಂಡರ ವಿರೋಧದ ನಡುವೆಯೂ ಸ್ಪರ್ಧೆಗೆ ಸಿದ್ದವಾಗಿದ್ದ ರಾಮಣ್ಣನವರನ್ನು ಸುಮ್ಮನಿರಿಸಿ ಆನಂದ್ಗೆ ಸ್ಪರ್ದಿಸಲು ಅವಕಾಶ ಮಾಡಿಕೊಟ್ಟು ಆಗಿನ ಕ್ಲಿಷ್ಟ ಪರಿಸ್ಥಿತಿಯಲ್ಲಿ ನಾನೂ ನಮ್ಮೆಲ್ಲ ಮುಖಂಡರು ತನು ಮನ ಧನ ಸಹಕಾರ ನೀಡುವುದರ ಸಮೇತ ಅವರನ್ನು ಗೆಲ್ಲಿಸಿದೆವು.
ಆ ನಂತರ ತಾಲೂಕಿನ ಹಿತದೃಷ್ಟಿಯಿಂದ ಆಗಿನ ಸಹಕಾರ ಸಚಿವರಾಗಿದ್ದ ಸೋಮಶೇಖರ್ ರವರನ್ನು ಬೇಟಿ ಮಾಡಿ ಅವರ ಸ್ಪಷ್ಟ ವಿರೋಧದ ನಡುವೆಯೂ ಕೆ. ಎಂ. ಎಫ್. ಗೆ ನಾಮಿನಿ ಮಾಡಿಸಿದರಲ್ಲಿ ನನ್ನ ಶ್ರಮವೆಷ್ಟಿದೆ ಎಂದು ಆನಂದ್ ಗೂ ಗೊತ್ತು. ಇವೆಲ್ಲಾ ಆನಂದ್ ರಾಜಕೀಯವಾಗಿ ಬೆಳೆಯಲು ನಾವು ಕೊಟ್ಟ ಸಹಕಾರವಲ್ಲವೇ. ಇದೆಲ್ಲಾ ಕಾಂಗ್ರೆಸ್ ಪಕ್ಷದ ಭಿಕ್ಷೆಯಲ್ಲವೇ. ಇದನ್ನೆಲ್ಲಾ ಮರೆತಿರುವ ಆನಂದ್ ನನ್ನನ್ನು ಅಡಾಸ್ ಎಂದು ಅವಹೇಳನಕಾರಿಯಾಗಿ ನಿಂದಿಸುತ್ತಾರೆಂದರೆ ನನ್ನಿಂದ ಉಪಕಾರ ಪಡೆದು ಕಡೆಗೆ ನನಗೂ ಹಾಗೂ ನಮ್ಮ ಪಕ್ಷಕ್ಕೂ ದ್ರೋಹ ಬಗೆದು ಹೋಗಿರುವ ಆನಂದ್ ರನ್ನು ನಾವು ಏನೆಂದು ಕರೆಯಬೇಕು. ಅವರನ್ನು ಕಾಂಗ್ರೆಸ್ ಗೆ ಮರಳಿ ತಂದ ಲಕ್ಷ್ಮಣ್ ರವರಿಗೂ ದ್ರೋಹ ಬಗೆದಿರುವುದನ್ನು ಖುದ್ದು ಲಕ್ಷ್ಮಣ್ ರವರೇ ನನ್ನನ್ನು ಭೇಟಿಯಾಗಿ ಆನಂದ್ ದ್ರೋಹದ ಬಗ್ಗೆ ತಿಳಿಸಿ ನನಗೆ ಎಚ್ಚರದಿಂದಿರಲು ಹೇಳಿದರು. ಕಡೆಗೂ ಆನಂದ್ ಲಕ್ಷ್ಮಣ್ ಹೇಳಿದ ರೀತಿ ಮಾಡಿ ತೋರಿಸಿದರು ಎಂದರು.
ರಂಗರಾಜು ರವರು ನಮ್ಮ ಪಕ್ಷದ ಹಿರಿಯ ಮುಖಂಡರಾಗಿದ್ದರು. ಒಂದು ಸನ್ನಿವೇಶದಲ್ಲಿ ನಾನು ಯಾರನ್ನೋ ಬೈದರೆ ಅದು ನಿಮ್ಮನ್ನೇ ಬೈದಿದ್ದು ಎಂದು ರಂಗರಾಜು ರವರ ಬಳಿ ಚಾಡಿ ಹೇಳಿ ನನ್ನ ವಿರುದ್ಧ ಎತ್ತಿ ಕಟ್ಟಿ ಪಕ್ಷ ಬಿಡುವಂತೆ ಮಾಡಿದ್ದು ಇದೆ ಆನಂದ್. ಇವತ್ತು ರಂಗರಾಜು ನಮ್ಮ ಪಕ್ಷದಲ್ಲಿ ಇದ್ದಿದ್ದರೆ ಉನ್ನತಧಿಕಾರದ ಸ್ಥಾನದಲ್ಲಿರುತ್ತಿದ್ದರು. ಅವರನ್ನು ದಿಕ್ಕು ತಪ್ಪಿಸಿ ಮೂಲೆಗುಂಪು ಮಾಡಿದರು. ಆನಂದ್ ರವರ ಅಕ್ರಮಗಳು ಸಾಕಷ್ಟಿವೆ. ಇಷ್ಟೆಲ್ಲ ಇದ್ದರೂ ನನ್ನ ಹಾಗೂ ಮುನೇಗೌಡರ ಬಗ್ಗೆ.. ಅವರ ಅಪ್ಪ ಬಂದ್ರು ನನ್ನನ್ನ ಏನೂ ಮಾಡೋಕಾಗೋಲ್ಲ ಎನ್ನುವ ದುರಹಂಕಾರದ ಮಾತುಗಳನ್ನಾಡಿರುವುದು ನನಗೆ ಹೆಚ್ಚು ನೋವುಂಟು ಮಾಡಿದೆ. ಹತ್ತು ವರ್ಷ ಗಳಲ್ಲಿ ಮಾಜಿ ಶಾಸಕರು ಏನು ದಬ್ಬಾಕಿದ್ದಾರೆಂದು ಆನಂದ್ ಹಾಗೂ ಶಾಸಕರು ನನ್ನ ಬಗ್ಗೆ ದರ್ಪದ ಮಾತುಗಳನ್ನಾಡಿದ್ದಾರೆ. ನನ್ನ ಅವಧಿಯಲ್ಲಿ ನಾನೇನು ಅಭಿವೃದ್ಧಿ ಕೆಲಸ ಮಾಡಿದ್ದೇನೆಂದು ಕ್ಷೇತ್ರದ ಜನತೆಗೆ ಗೊತ್ತು. ಈಗ ಅವರು ಏನು ಮಾಡುತ್ತಿದ್ದಾರೆನ್ನುವುದು ಜನಕ್ಕೆ ಗೊತ್ತು. ಹತ್ತಿಪ್ಪತ್ತು ಲಕ್ಷದ ಕಾಮಗಾರಿ ಗಳನ್ನು ಮಾಡಿಸಿ ದೊಡ್ಡದಾಗಿ ಪ್ರಚಾರ ಪಡೆಯುತ್ತಿದ್ದಾರೆ. ಅದು ಬಿಟ್ಟರೆ ಈ ಶಾಸಕರಿಂದ ಬೇರೇನೂ ಆಗುತ್ತಿಲ್ಲ.
ರಾಜಕಾರಣದಲ್ಲಿ ಸೋಲು ಗೆಲುವು ಸಹಜ. ಹಿಂದೆ ಈ ಕ್ಷೇತ್ರವನ್ನು ಪ್ರತಿನಿದಿಸಿದ ರಾಮೇಗೌಡರು, ಜಾಲಪ್ಪನವರು, ಆರ್. ಜಿ. ವೆಂಕಟಾಚಲಯ್ಯ, ಗಂಟಿಗಾನಹಳ್ಳಿ ಕೃಷ್ಣಪ್ಪ, ನರಸಿಂಹ ಸ್ವಾಮಿ ಸೇರಿದಂತೆ ಎಲ್ಲರಿಗೂ ಅವರವರ ಕಾಲದಲ್ಲಿ ವಿರೋಧಿಗಳಿದ್ದರೂ ಸಹ ಅವರ್ಯಾರು ದ್ವೇಷದ ರಾಜಕಾರಣ ಮಾಡಲಿಲ್ಲ ನಾನೂ ಸಹ ಅವರ ದಾರಿಯಲ್ಲೇ ಸಾಗುತ್ತಿದ್ದೇನೆ. ನಾನು ಬಿ. ಸಿ. ಆನಂದ್ ಮೇಲೆ ಮಾಡಿರುವ ಆರೋಪಗಳು ಸತ್ಯವಾದುದು. ಬೇಕೆಂದರೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡುತ್ತೇನೆ. ಅವರು ಸಹ ಪ್ರಮಾಣ ಮಾಡಲಿ. ಸಾದ್ಯವಾದರೆ ಬಹಿರಂಗ ಚರ್ಚೆಗೆ ಆನಂದ್ ಬರಲಿ ಅದಕ್ಕೂ ನಾನು ಸಿದ್ದನಿದ್ದೇನೆ. ಆನಂದ್ ರವರು ತಮ್ಮ ಜೀವನದುದ್ದಕ್ಕೂ ತಮಗೆ ಸಹಾಯ ಮಾಡಿದವರಿಗೆ ದ್ರೋಹ ಬಗೆದು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕರಿಗೆ ಆನಂದ್ ಏನು ಎನ್ನುವುದು ಅರ್ಥವಾಗಲಿದೆ ಎಂದು ಅಪಕಾರನಹಳ್ಳಿ ವೆಂಕಟ ರಮಣಯ್ಯ ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಲಕ್ಷ್ಮಿಪತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ನಗರ ಅಧ್ಯಕ್ಷ ಕೆ. ಪಿ. ಜಗನ್ನಾಥ್, ಯುವ ಕಾಂಗ್ರೆಸ್ ಶರತ್ ಪಟೇಲ್, ಡಿಪಿಆ ನಿರ್ದೇಶಕ ಅಂಜನ್ ಮೂರ್ತಿ, ಜವಾಜಿ ರಾಜೇಶ, ರೇವತಿ ಅನಂತ ರಾಮ್, ಮಂಜುನಾಥ್, ನಗರ ಸಭಾ ಸದಸ್ಯ ಅಲ್ತಾಫ್ ರಾಜಘಟ್ಸ ನಾರಾಯಣಸ್ವಾಮಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.