ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಕೀಲರ ಒಕ್ಕೂಟದಿಂದ ತಹಶೀಲ್ದಾರ್ ಗೆ ಮನವಿ ಸಲ್ಲಿಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಅಖಿಲ ಭಾರತ ವಕೀಲರ ಒಕ್ಕೂಟ
 ನಡೆಸುತ್ತಿರುವ ಪತ್ರ ಚಳುವಳಿಯನ್ನು ಬೆಂಬಲಿಸಿ ದೊಡ್ಡಬಳ್ಳಾಪುರ ಘಟಕವು ಸುಮಾರು 160 ವಕೀಲರ ಸಹಿ ಮಾಡಿ ವಕೀಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

- Advertisement - 

  ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅಖಿಲ ಭಾರತ ವಕೀಲರ ಒಕ್ಕೂಟದ ಮುಖಂಡ ಎಸ್.ರುದ್ರಾರಾಧ್ಯ ಅವರು, ಪ್ರಜಾಪ್ರಭುತ್ವ, ಜಾತ್ಯಾತೀತತೆ, ನ್ಯಾಯ, ಸಮಾಜವಾದದ ಉದ್ದೇಶಗಳ ಅಡಿಯಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟ  1982ರಲ್ಲಿ ಸ್ಥಾಪನೆಯಾಗಿದೆ. ಭಾರತದ ಸರ್ವೋಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾಗಿದ್ದ, ದಿ| ವಿ.ಆರ್. ಕೃಷ್ಣ ಅಯ್ಯರ್, ನ್ಯಾ. ದಿ। ಹೆಚ್.ಆ‌ರ್. ಖನ್ನಾ, ನ್ಯಾ. ದಿ ಎ.ಸಿ. ಗುಪ್ತಾ, ಬ್ಯಾರಿಸ್ಟರ್ ಹಾಗೂ ಹಿರಿಯ ವಕೀಲರಾದ ಶ್ರೀ ಡ್ಯಾನಿಶ್ ಅಲಿ ಲಲೇಫ್ ಹಾಗೂ ಕರ್ನಾಟಕದವರೇ ಆದ ಭಾರತದ ಸವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಮೂರ್ತಿಗಳಾದ ಸನ್ಮಾನ್ಯ ಶ್ರೀ ವಿ. ಗೋಪಾಲಗೌಡ ಮತ್ತು ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಹೆಚ್.ಎನ್. ನಾಗಮೋಹನ್ ದಾಸ್, ದಿ| ಬ್ಯಾರಿಸ್ಟರ್ ಹೆಚ್.ಕೆ ವಾಸುದೇವ ರೆಡ್ಡಿ ಹಾಗೂ ದೇಶದ ಮತ್ತು ರಾಜ್ಯದ ಇತರ ಹಿರಿಯ ವಕೀಲರ ಮುಂದಾಳತ್ವದಲ್ಲಿ ವಕೀಲರ ಸಮಸ್ಯೆ ಹಾಗೂ ಸವಾಲುಗಳ ಕುರಿತು ಮತ್ತು ನ್ಯಾಯಾಂಗದ ಘನತೆಯನ್ನು ಹಾಗೂ ಸಂವಿಧಾನದ ಆಶಯಗಳಿಗೆ ತಕ್ಕಂತೆ ಹಲವಾರು ಕಾರ್ಯಕ್ರಮಗಳ ಮೂಲಕ ವಕೀಲರ ನಡುವೆ ಕಾರ್ಯ ನಿರ್ವಹಿಸುತ್ತಾ ಬಂದಿರುವ ವಕೀಲರ ಸಂಘಟನೆಯಾಗಿದೆ. ಅಲ್ಲದೇ ಈ ದೇಶದ ಜನಸಾಮಾನ್ಯರ ಬದುಕನ್ನು ಉತ್ತಮಗೊಳಿಸಲು ಹಲವಾರು ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುತ್ತದೆ. 

- Advertisement - 

   ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ  ನಮ್ಮ ರಾಜ್ಯದಲ್ಲಿ ವಕೀಲರ ಮತ್ತು ಕಾನೂನು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಚರ್ಚಿಸಿ ಕೆಳಕಂಡ ಬೇಡಿಕೆಯನ್ನು ಈಡೇರಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದರು. 

 ವಕೀಲರ ಸಂಘದಿಂದ ಬೇಡಿಕೆಗಳು-
ಪೊಲೀಸರ ಏಕಪಕ್ಷೀಯ ವರ್ತನೆಗಳಿಂದ ವಕೀಲರಿಗೆ ರಕ್ಷಣೆ ನೀಡಬೇಕು ಮತ್ತು ವಕೀಲರ ಸಂರಕ್ಷಣೆ ಕಾಯ್ದೆ-2024ಕ್ಕೆ ಸೂಕ್ತ ತಿದ್ದುಪಡಿಯಾಗಬೇಕು. ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ಮಾರ್ಗಸೂಚಿಯನ್ನು ಪಾಲಿಸಬೇಕು.

- Advertisement - 

 ಅವೈಜ್ಞಾನಿಕ ಅಖಿಲ ಭಾರತ ಬಾರ್ ಪರೀಕ್ಷೆ  ರದ್ದು ಪಡಿಸಬೇಕು. ಕಿರಿಯ ವಕೀಲರಿಗೆ 2 ವರ್ಷಗಳ ಕಾಲ ಮಾಸಿಕ ರೂ.10,000 ಸಹಾಯಧನ ನೀಡಬೇಕು.

 ರಾಜ್ಯದ ಎಲ್ಲಾ ತಾಲ್ಲೂಕು ವಕೀಲರ ಸಂಘಗಳಿಗೆ ವರ್ಷಕ್ಕೆ ರೂ. 5 ಲಕ್ಷ ಅನುದಾನ ಮಂಜೂರು ಮಾಡಬೇಕು ಮತ್ತು ಜಿಲ್ಲಾ ವಕೀಲರ ಸಂಘಗಳಿಗೆ ರೂ. 10 ಲಕ್ಷ ರೂಪಾಯಿಗಳ ಅನುದಾನ ಮಂಜೂರು ಮಾಡಬೇಕು.

 ರಾಜ್ಯ ಸರ್ಕಾರವು ವಕೀಲರಿಗೆ ಕಡ್ಡಾಯವಾಗಿ ವೈಧ್ಯಕೀಯ ಮತ್ತು ಜೀವ ವಿಮಾ ಸೌಲಭ್ಯವನ್ನು ಒದಗಿಸಬೇಕು. ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಗಳಲ್ಲಿ ವಕೀಲರ ಅಕಾಡೆಮಿಗಳನ್ನು ಸ್ಥಾಪಿಸಬೇಕು.

ಕರ್ನಾಟಕ ರಾಜ್ಯದಲ್ಲಿ ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಲು ಮುಂದಾಗಬೇಕು. ಹಾಗೆಯೇ ಈಗಿರುವ ನ್ಯಾಯಾಲಯಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ರಾಜ್ಯದಲ್ಲಿನ ಎಲ್ಲ ನ್ಯಾಯಾಲಯದ ಆವರಣದಲ್ಲಿ ವಕೀಲರಿಗೆ ಚೇಂಬರ್‌ಗಳನ್ನು ಸ್ಥಾಪಿಸಬೇಕು.

 ರೆವೆನ್ಯೂ ಎ ಸಿ, ಡಿ ಸಿ ನ್ಯಾಯಾಲಯಗಳಲ್ಲಿ ನಡೆಯುವ ಕಂದಾಯ ಪ್ರಕರಣಗಳಲ್ಲಿ ಬೇರೆ ಬೇರೆ ರೀತಿಯ ಒತ್ತಡಗಳು ಮತ್ತು ವಿಳಂಬದ ಕಾರಣ ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಯದೆ ಸಕ್ರಮವಾದ ತೀರ್ಪುಗಳು ಆಗದೆ ಇರುವದರಿಂದ ಕಂದಾಯ ಪ್ರಕಣಗಳನ್ನು ಸಿವಿಲ್ ನ್ಯಾಯಾಲಯಗಳಿಗೆ ವರ್ಗಾಯಿಸಲು ಕ್ರಮ ತೆಗೆದುಕೊಳ್ಳಬೇಕು.

ವಕೀಲರಿಗೆ ಟೋಲ್ ಶುಲ್ಕ ರಹಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು. ರಾಜ್ಯದ ಪ್ರತಿ ಜಿಲ್ಲೆಗೆ ಒಂದರಂತೆ ಸರ್ಕಾರಿ ಕಾನೂನು ಕಾಲೇಜುಗಳನ್ನು ಸ್ಥಾಪಿಸಬೇಕು ಹಾಗೂ ಈಗಿರುವ ಅನುದಾನಿತ & ಖಾಸಗಿ ಕಾನೂನು ಕಾಲೇಜುಗಳ ಶುಲ್ಕವನ್ನು ಸರ್ಕಾರ ನಿಯಂತ್ರಣ ಮಾಡಬೇಕು. ಹಾಲಿ ಇರುವ ಸರ್ಕಾರಿ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಕಛೇರಿಯನ್ನು ವಿಭಾಗೀಯ ಮಟ್ಟದಲ್ಲಿ ಸ್ಥಾಪಿಸಬೇಕು. ವಕೀಲರ ಸಂಘದ/ ಪರಿಷತ್ತಿನ ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಶೇ.33 ರಷ್ಟು ಮೀಸಲಾತಿ ನೀಡಬೇಕುಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಅನುಸಾರ ಪ್ರಾತಿನಿಧ್ಯ ನೀಡಬೇಕು. 

  ಈ ಬೇಡಿಕೆಗಳನ್ನು ಒಂದು ತಿಂಗಳೊಳಗಾಗಿ ಈಡೇರಿಸಬೇಕು ತಪ್ಪಿದಲ್ಲಿ ವಕೀಲರುಗಳು ತಮ್ಮ ಹೋರಾಟವನ್ನು ತೀವ್ರಗೊಳಿಸಿ ನಮ್ಮ ನಡೆಯನ್ನು ವಿಧಾನಸೌಧ, ವಕೀಲರ ಪರಿಷತ್‌ಗಳ ಕಡೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. 

 ವಕೀಲರ ನಿಯೋಗದಲ್ಲಿ ರೇಣುಕಾರಾಧ್ಯ, ಎಲ್.ಸಂಜೀವಪ್ಪ, ಎ.ಎನ್.ಅಂಜನೆಗೌಡ, ಶ್ರೀಮತಿ ಸುಪ್ರಿಯ ಮುಂತಾದ ವಕೀಲರು ಭಾಗವಹಿಸಿದ್ದರು.

 

Share This Article
error: Content is protected !!
";